Home News 5 ಹುಲಿಗಳ ಸಾವು: ತನಿಖೆಗೆ ಖಂಡ್ರೆ ಆದೇಶ

5 ಹುಲಿಗಳ ಸಾವು: ತನಿಖೆಗೆ ಖಂಡ್ರೆ ಆದೇಶ

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮಿಣ್ಯಂ ಶಾಖೆಯ ಮಹದೇಶ್ವರ ದೇವಸ್ಥಾನ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಹನೂರು ತಾಲೂಕು ವ್ಯಾಪ್ತಿಯಲ್ಲಿ ಮಲೆ ಮಹದೇಶ್ವರ ಕಾವೇರಿ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಆಗಾಗ ಹುಲಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ.ಜಿ ಪಾಳ್ಯ ಹಾಗೂ ಅಜ್ಜೀಪುರ ಸಫಾರಿ ಕೇಂದ್ರ ಪ್ರಾರಂಭವಾದ ನಂತರ ಹುಲಿಗಳು ಕಾಣಿಸಿಕೊಳ್ಳುತ್ತಿದೆ.
ಇದೀಗ ಹೂಗ್ಯಂ ವಲಯ ವ್ಯಾಪ್ತಿಯಲ್ಲಿ ಏಕಾಏಕಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ವಿಷಪ್ರಾಶನದಿಂದ ಮೃತಪಟ್ಟಿರುವ ಶಂಕೆ?:
ಹೂಗ್ಯಂ ವಲಯ ವ್ಯಾಪ್ತಿಯ ಮಿಣ್ಯಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಹುಲಿ ದಾಳಿಗೆ ಒಂದು ಹಸು ಮೃತಪಟ್ಟಿತ್ತು. ಮತ್ತೆ ಮಾಂಸ ತಿನ್ನಲು ಹುಲಿ ಬರುತ್ತದೆ ಎಂದು ಶಂಕಿಸಿ ವಿಷಪ್ರಾಶನ ಮಾಡಿದ್ದಾರೆ. ಇದನ್ನು ತಿಂದ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ತನಿಖೆಗೆ ಆದೇಶ:
ಮಲೆ ಮಹದೇಶ್ವರ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಸರ್ಕಾರ ಇದನ್ನು ಅತ್ಯಂತವಾಗಿ ಗಂಭೀರವಾಗಿ ಪರಿಗಣಿಸಿದೆ.
ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ದಿ. ಪ್ರಧಾನಿ ಇಂದಿರಾ ಗಾಂಧಿಯವರು ಹುಲಿ ಯೋಜನೆ ಆರಂಭಿಸಿದ ತರುವಾಯ ರಾಜ್ಯದಲ್ಲಿ ಹುಲಿಗಳ ಸಂರಕ್ಷಣೆಗೆ ಕ್ರಮ ವಹಿಸಲಾಗಿದ್ದು 563 ಹುಲಿಗಳೊಂದಿಗೆ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಹುಲಿಗಳ ಸಂರಕ್ಷಣೆಗೆ ಹೆಸರಾಗಿರುವ ರಾಜ್ಯದಲ್ಲಿ ಒಂದೇ ದಿನ ನಾಲ್ಕು ಹುಲಿಗಳು ಆಗಿರುವುದು ಅತ್ಯಂತ ನೋವು ತಂದಿದೆ.
ಈ ಕೂಡಲೇ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ರಚಿಸಿ ಸ್ಥಳ ತನಿಖೆ ಕೈಗೊಂಡು ಅರಣ್ಯ ಸಿಬ್ಬಂದಿ ನಡೆಸಿದರೆ ಅವರ ವಿರುದ್ಧ ಅಥವಾ ವಿದ್ಯುತ್ ಸ್ಫರ್ಶ ವಿಷ ಪ್ರಾಶನ ಇತ್ಯಾದಿ ಸಾವಿಗೆ ಕಾರಣವಾಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮವಹಿಸಿ ಮೂರು ದಿನದ ಒಳಗೆ ವರದಿ ನೀಡುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿಯವರಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರು ಪತ್ರ ಬರೆದಿದ್ದಾರೆ.

ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 5 ಹುಲಿಗಳು ಬಲಿ:
ಮಲೆ ಮಹದೇಶ್ವರ ವನ್ಯಜೀವಿ ಉಪವಿಭಾಗದ ಕಚೇರಿ ಆವರಣದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳ ವೇತನ ಹಾಗೂ ಕಷ್ಟ ಪರಿಹಾರ ಭತ್ಯೆ ನೀಡದೆ ಇರುವುದರಿಂದ ವಾಚರ್‌ಗಳು ಕಚೇರಿಯ ಸಿಬ್ಬಂದಿ ಹಾಗೂ ಎಪಿಸಿ ಕ್ಯಾಂಪ್‌ಗಳಲ್ಲಿ ವಾಚರ್ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವುದರಿಂದ ಇಂತಹ ಘಟನೆ ನಡೆದಿದೆ ಎನ್ನಲಾಗಿದೆ.
ರಾಮಾಪುರ, ಪಿ.ಜಿ.ಪಾಳ್ಯ, ಪಾಲಾರ್ ಮಲೆ ಮಹದೇಶ್ವರ ಬೆಟ್ಟ, ಹನೂರು ಅರಣ್ಯ ಪ್ರದೇಶದ ಹೊರ ಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಚರ್‌ಗಳು ಕಚೇರಿಯ ಸಿಬ್ಬಂದಿ ಹಾಗೂ ಎಪಿಸಿ ಕ್ಯಾಂಪ್‌ಗಳಲ್ಲಿ ವಾಚರ್ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಮಾರ್ಚ್, ಏಪ್ರಿಲ್, ಮೇ, ಜೂನ್ ತಿಂಗಳ ಸಂಬಳ
ನೀಡಿಲ್ಲ. ಹಾಗೆಯೇ ಕಷ್ಟ ಪರಿಹಾರ ಭತ್ಯೆವನ್ನು ಸಹ ನೀಡದೆ ಇರುವುದರಿಂದ ಸಂಸಾರ ನಡೆಸಲು ಕಷ್ಟಕರವಾಗಿದೆ. ಹಾಗೆಯೇ ಕಾಯಂ ನೌಕರರುಗಳು ಎಷ್ಟು ಕೆಲಸ ಮಾಡುತ್ತಾರೋ ಅಷ್ಟು ಕೆಲಸವನ್ನು ನಾವುಗಳು ಮಾಡಿ ಅರಣ್ಯವನ್ನು ಉಳಿಸುವ ಜವಾಬ್ದಾರಿ ಕೆಲಸವನ್ನು ನಾವು ಮಾಡುತ್ತಿದ್ದೆವೆ. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನೌಕರರು ಕಳೆದ ಎರಡು ದಿನಗಳ ಹಿಂದೆ ಮಲೆ ಮಹದೇಶ್ವರ ಉಪ ಸಂರಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಿಕೊಳ್ಳಬಹುದು.
ಘಟನಾ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಚಕ್ರಪಾಣಿ ವೈ, ಎಸಿಎಫ್ ಗಜಾನನ ಹೆಗಡೆ, ಆರ್‌ಎಫ್‌ಒ ಮಾದೇಶ್, ಪಶು ವೈದ್ಯಾಧಿಕಾರಿ ಡಾ. ವಾಸಿಮ್ ಮಿರ್ಜಾ, ಡಾ. ಶಿವರಾಜು ಭೇಟಿ ನೀಡಿ ಮೃತ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಹುಲಿಗಳ ಸಾವಿಗೆ ನಿಖರ ಮಾಹಿತಿ ತಿಳಿದು ಬರಲಿದೆ.

Exit mobile version