ಹುಬ್ಬಳ್ಳಿ: ನಟ ಪ್ರಕಾಶ ರಾಜ್‌ನಂತಹ ಅತೃಪ್ತ ಆತ್ಮಗಳು ಸದಾ ಸುದ್ದಿಯಲ್ಲಿ ಇರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೀಗಾಗಿ ಇದೀಗ ಸನಾತನ ಧರ್ಮವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ನಾವು ಇಷ್ಟು ದಿನಗಳ ಕಾಲ ಜಂಟಲ್ ಮ್ಯಾನ್ ಎಂದು ತಿಳಿದಿದ್ದೇವು. ಆದರೆ, ವೋಟ್ ಬ್ಯಾಂಕ್‌ಗಾಗಿ ಅವರು ಕೂಡ ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಿದ್ದಾರೆ. ಹಿಂದು, ಸನಾತನ ಧರ್ಮ ಎನ್ನುವುದು ನಿತ್ಯ ನೂತನ, ಪುರಾತನ, ಸನಾತನ ಸಂಸ್ಕೃತಿ ಬಹಳ ಪುರಾತನವಾಗಿದೆ ಎಂಬುವುದನ್ನು ಸನಾತನ ಧರ್ಮದ ಬಗ್ಗೆ ಇಲ್ಲಸಲ್ಲದ ಹಾಗೆ ಮಾತನಾಡುವವರು ತಿಳಿದುಕೊಳ್ಳಲಿ ಎಂದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವರು ಅಚಾನಕ್ ಆಗಿ ಹೇಳಿಕೆ ನೀಡಿಲ್ಲ. ಅವಹೇಳನಕಾರಿ ಮಾತನಾಡಿದ್ದಾರೆ. ಸನಾತನ ಧರ್ಮದ ವಿರುದ್ಧವಾಗಿಯೇ ಅಲ್ಲಿ ಸಂವಾದ ಮಾಡಲಾಗಿತ್ತು. ಸ್ಟಾಲಿನ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಈವರೆಗೆ ಖಂಡಿಸಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಸಚಿವ ಪ್ರಿಯಾಂಕ ಖರ್ಗೆ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿಯವರು ಅಮೇರಿಕದಲ್ಲಿ ಹೋಗಿ ಮುಸ್ಲಿಂ ಲೀಗ್ ಸೆಕ್ಯುಲರ್ ಪಾರ್ಟಿ ಎಂದಿದ್ದರು. ಮುಸ್ಲಿಂ ಲೀಗ್‌ನಿಂದ ದೇಶ ವಿಭಜನೆಯಾಗಿದೆ, ನರಮೇಧವಾಗಿದೆ. ಘಮಂಡಿಯಾ ಘಟಬಂಧನ ಉಳಿಸಿಕೊಳ್ಳುವ ಆತುರದಲ್ಲಿ ಹೇಳಿಕೆ ಸನಾತನ ಧರ್ಮದ ಬಗ್ಗೆ ಸ್ಟಾಲಿನ್ ಅವರು ನೀಡಿರುವ ಹೇಳಿಕೆಯನ್ನು ಖಂಡಿಸುತ್ತಿಲ್ಲ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ದೇವಸ್ಥಾನಕ್ಕೆ ಹೋಗುತ್ತಾರೆ. ಹಾಗಾದರೆ ಸನಾತನ ಧರ್ಮದ ಬಗ್ಗೆ ಅವರ ನಿಲುವೇನು? ಡಿಎಂಕೆ ಹೇಳಿಕೆ ಖಂಡಿಸಲು ಕಾಂಗ್ರೆಸ್‌ನವರಿಗೆ ಶಕ್ತಿಯಿಲ್ಲ. ದೇಶದ ಸಂಸ್ಕೃತಿ, ನಂಬಿಕೆ, ಸಮಗ್ರತೆ ಏನಾದರೂ ಆಗಲಿ. ಕಾಂಗ್ರೆಸ್ ಮಾತ್ರ ಅಧಿಕಾರಕ್ಕೆ ಬರಲು ತುಷ್ಟೀಕರಣದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸಂಸತ್ ಅಧಿವೇಶನದ ಬಗ್ಗೆ ಈಗಾಗಲೇ ವಿವಿಧ ಪಕ್ಷಗಳ ಮುಖಂಡರು ಅನಗತ್ಯ ಪುಕಾರು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅಧಿವೇಶನ ಕರೆಯುವ ಸ್ವತಂತ್ರವಿದೆ. ಸಂವಿಧಾನದ ೮೫ನೇ ವಿಧಿ ಪ್ರಕಾರ ರಾಷ್ಟçಪತಿಗಳಿಗೆ ಮನವಿ ಮಾಡಿ, ಅಧಿವೇಶನ ಕರೆದಿದ್ದೇವೆ. ೯೨ ಬಾರಿ ದೇಶದ ಚುನಾಯಿತ ಪಕ್ಷಗಳನ್ನು ಕಾಂಗ್ರೆಸ್ ಕಿತ್ತೊಗೆದಿದೆ. ಈಗ ಕಾಂಗ್ರೆಸ್ ನಮಗೆ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದೆ. ಅಧಿವೇಶನ ಕರೆಯುವ ಮೊದಲು ವಿಪಕ್ಷಗಳನ್ನು ಕೇಳುವ ಪದ್ಧತಿ ಇಲ್ಲ. ಸೂಕ್ತವಾದ ಸಮಯದಲ್ಲಿ ಅಧಿವೇಶನದ ಅಜೆಂಡಾ ತಿಳಿಯಲಿದೆ. ಸಂಸತ್ ಅಧಿವೇಶನ ಲೈವ್ ಆಗಿ ತೋರಿಸಲು ಶುರು ಮಾಡಿದ್ದು ನಾವೇ ಎಂದರು.
