ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೋದಿ ಕಂಡರೆ ಭಯ ಎಂದು ಹೇಳಲು ಸಾಧ್ಯವಿಲ್ಲ ಹೀಗಾಗಿ ಮೋದಿ ನೂರು ಬಾರಿ ಬಂದರೂ ನಾವೇ ಗೆಲ್ಲುತ್ತೇವೆ ಎಂಬ ಮಾತುಗಳನ್ನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮೋದಿ, ಅಮಿತ್ ಶಾ ಬಂದ್ರೆ ಯಾವುದೇ ಪರಿಣಾಮ ಚುನಾವಣೆ ಮೇಲೆ ಆಗುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಮೋದಿ, ಅಮಿತ್ ಶಾ ರಾಜ್ಯಕ್ಕೆ ಬಂದರೆ ಸಿದ್ದರಾಮಯ್ಯ ಅವರಿಗೆ ಭಯಾ ಆಗದೇ ಇರದು. ಆದರೆ ಅವರು ಹಾಗೇ ಹೇಳಲು ಸಾಧ್ಯವಿಲ್ಲ. ಈ ಹಿಂದೆ ನರೇಂದ್ರ ಮೋದಿ ಅವರು ರಾಷ್ಟ್ರೀಯ ರಾಜಕಾರಣದ ಪ್ರವೇಶದ ನಂತರ ರಾಜ್ಯಕ್ಕೆ ಆಗಮಿಸಿದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಯಿತು. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಯೂ ಸೋಲು ಅನುಭವಿಸಿದರು. ಮೂರು ಬಾರಿ ಸೋತವರು ರಾಜಕಾರಣವನ್ನು ಬಿಟ್ಟು ಹೋಗಬೇಕಿತ್ತು. ಆದರೆ ಕೊನೆಯ ಬಾರಿ ಡಿ.ಕೆ.ಶಿವಕುಮಾರ್ ಜೊತೆಗೆ ಮತ್ತೊಮ್ಮೆ ಸಿಎಂ ರೇಸ್’ನಲ್ಲಿದ್ದಾರೆಂದು ಕುಟುಕಿದರು.
ಲೋಕಾಯುಕ್ತವನ್ನು ಬಲಗೊಳಿಸಿದ್ದೆ ಬಿಜೆಪಿ, ಹೀಗಾಗಿ ಯಾವುದೇ ಪಕ್ಷದ ನಾಯಕರು ತಪ್ಪು ಮಾಡಿದರು ಸಹ ಅವರ ವಿರುದ್ಧ ಕ್ರಮ ಆಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಾಸಕ ವಿರೂಪಾಕ್ಷಪ್ಪ ಮಾಡ್ಯಾಳ ಅವರ ಪ್ರಕರಣ ಕುರಿತು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವು ಮಾಡಿತ್ತು. ಇದೀಗ ನಮ್ಮ ಕಾಲದಲ್ಲಿಯೇ ಲೋಕಾಯುಕ್ತವನ್ನು ಬಲಗೊಳಿಸಿದ್ದೇವೆ. ಯಾರು ಕಳಂಕಿತರಿರುತ್ತಾರೆ ಅವರ ವಿರುದ್ಧ ಕ್ರಮ ಆಗಲಿದೆ ಎಂದು ತಿಳಿಸಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿ, ಸುಮಲತಾ ಸ್ವತಂತ್ರ ಅಭ್ಯರ್ಥಿ. ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅವರು ನಮ್ಮ ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿ ಪರವಾದ ಒಲವು ಇದೆ ಎಂದರು.
ಮಾ. 12 ಕ್ಕೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ:
ರಾಜ್ಯಕ್ಕೆ ಮತ್ತೊಮ್ಮೆ ಮಾ.12 ರಂದು ಆಗಮಿಸುತ್ತಿದ್ದು, ಅಂದು ಮಂಡ್ಯದ ಮದ್ದೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ಧಾರವಾಡ ಐಐಟಿ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ತಿಳಿಸಿದರು.