ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಅರ್ಜಿಯ ವಿಚಾರಣೆ ಆರಂಭವಾಗಿದ್ದು ಭವಾನಿ ಪರ ವಕೀಲರು ಮಧ್ಯಂತರ ಜಾಮೀನು ನೀಡಲು ಮನವಿ ಮಾಡಿದರು.
ಈ ಮನವಿಗೆ ಎಸ್‌ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಆಕ್ಷೇಪಣೆಗೆ ಕಾಲಾವಕಾಶ ಕೋರಿದರೆನ್ನಲಾಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು, ಆಕ್ಷೇಪಣೆಗೆ ಸಲ್ಲಿಕೆಗೆ ಎಸ್‌ಐಟಿಗೆ ಅವಕಾಶ ನೀಡಿ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.
ಹೈಕೋರ್ಟ್‌ಗೆ ಅರ್ಜಿ: ಮಹಿಳೆ ಅಪಹರಣ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ದೊರೆತಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಎಸ್‌ಐಟಿ ಹೈಕೋರ್ಟ್ಗೆ ಮೊರೆ ಹೋಗಿದೆ.
ಕೆ.ಆರ್.ನಗರದ ಮಹಿಳೆಯ ಅಪಹರಣ ಹಾಗೂ ಮನೆಕೆಲಸದಾಕೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಕೆಲ ದಿನಗಳ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಇದೀಗ ಎಸ್‌ಐಟಿ ಹೈಕೋರ್ಟ್ ಮೆಟ್ಟಿಲೇರಿದೆ. ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಿ ಪ್ರಕರಣದ ತನಿಖೆಗೆ ಅನುಕೂಲ ಮಾಡಿಕೊಡುವಂತೆ ಕೋರಿ ಹೈಕೋರ್ಟ್ಗೆ ಎಸ್‌ಐಟಿ ಮೇಲ್ಮನವಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಮೇ ೩೧ರಂದು ನಡೆಯುವ ಸಾಧ್ಯತೆಯಿದೆ.
ಮೂವರ ಬಂಧನ: ಮಹತ್ವದ ಬೆಳವಣಿಗೆಯಲ್ಲಿ ಹಾಸನದಲ್ಲಿ ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ಮೂವರನ್ನು ಎಸ್‌ಐಟಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಏ.೨೧ರಂದು ಫೇಸ್‌ಬುಕ್‌ನಲ್ಲಿ `ಕೆಲವೇ ಕ್ಷಣಗಳಲ್ಲಿ ಪೆನ್‌ಡ್ರೈವ್ ಬಿಡುಗಡೆ’ ಎಂಬರ್ಥದ ಪೋಸ್ಟ್ ಹಂಚಿಕೊಂಡ ಆರೋಪ ಎದುರಿಸುತ್ತಿರುವ ಬೇಲೂರಿನ ನವೀನ್‌ಗೌಡ, ಹಾಸನದ ಚೇತನ್ ಹಾಗೂ ಶ್ಯಾಮಸುಂದರ್‌ರನ್ನು ತನಿಖಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಎಸ್‌ಐಟಿ ಕಾರ್ಯತಂತ್ರ: ಸಂಸದ ಪ್ರಜ್ವಲ್ ರೇವಣ್ಣ ಮೇ ೩೧ರಂದು ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಕಾರ್ಯತಂತ್ರದ ಕುರಿತು ಎಸ್‌ಐಟಿ ಚಿಂತನೆ ನಡೆಸಿದೆ.
ಈ ಸಂಬಂಧ ಎಸ್‌ಐಟಿ ತಂಡ ಅನೌಪಚಾರಿಕ ಸಭೆ ನಡೆಸಿದ್ದು ಪ್ರಜ್ವಲ್‌ನನ್ನು ಭಾರತಕ್ಕ ಬರುತ್ತಿದ್ದಂತೆಯೇ ಬಂಧಿಸಬೇಕೇ? ಅಥವಾ ಬೆಂಗಳೂರು ತಲುಪಿದ ಮೇಲೆ ಬಂಧಿಸಬೇಕೆ? ಬಂಧಿಸಿದ ಮೇಲೆ ವಿಚಾರಣೆಯನ್ನು ಕೈಗೊಳ್ಳುವ ಬಗೆ? ಪ್ರಜ್ವಲ್ ವಿಚಾರಣೆಗೆ ಪ್ರಶ್ನೆಗಳ ತಯಾರಿ? ಮುಂತಾದ ಹಲವು ವಿಚಾರಗಳ ಕುರಿತು ಸುದೀರ್ಘ ಸಮಾಲೋಚನೆ ನಡೆದಿದೆ. ಪ್ರಜ್ವಲ್‌ರದ್ದು ಎನ್ನಲಾದ ವಿಡಿಯೋಗಳಲ್ಲಿ ಮೂಲ ವಿಡಿಯೋ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳುವ ಕುರಿತು ಚಿಂತನೆ ನಡೆಸಿದೆ. ಇದೇ ವೇಳೆ ವಿಡಿಯೋಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಏನಾದರೂ ಆಗಿದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ತಜ್ಞರ ಮಾರ್ಗದರ್ಶನ ಪಡೆಯಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆನ್ನಲಾಗಿದೆ.
ನಾಳೆ ಭಾರತಕ್ಕೆ ಪ್ರಜ್ವಲ್: ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದಾರೆನ್ನಲಾದ ಪ್ರಜ್ವಲ್ ರೇವಣ್ಣ ಮೇ ೩೦ರಂದು ಗುರುವಾರ ಭಾರತಕ್ಕೆ ಬರುವುದು ಖಚಿತವಾಗಿದೆ.
ವಿಡಿಯೋ ಸಂದೇಶದಲ್ಲಿ ಮೇ ೩೧ರಂದು ಎಸ್‌ಐಟಿ ತನಿಖೆಗೆ ಹಾಜರಾಗುವುದಾಗಿ ಪ್ರಜ್ವಲ್ ಪ್ರಕಟಿಸಿದ್ದರಾದರೂ ಯಾವತ್ತು ಭಾರತಕ್ಕೆ ಬರುವೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.