Home ತಾಜಾ ಸುದ್ದಿ ಬೆಂಗಳೂರು-ಜಲಸೂರು ರಸ್ತೆ ಕಾಮಗಾರಿ 6 ತಿಂಗಳಲ್ಲಿ ಪೂರ್ಣ

ಬೆಂಗಳೂರು-ಜಲಸೂರು ರಸ್ತೆ ಕಾಮಗಾರಿ 6 ತಿಂಗಳಲ್ಲಿ ಪೂರ್ಣ

0

ಬೆಂಗಳೂರು: ಕೃಷಿ ಹಾಗೂ ಜಿಲ್ಲಾ‌ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೌಡ್ಲೆ ಗೇಟ್‌ನಿಂದ ನಾಗಮಂಗಲ, ಬೋಗಾದಿ ಮಾರ್ಗವಾಗಿ ಹಾದು ಮಾಗಡಿ -ಸೋಮವಾರಪೇಟೆ ಜಲಸೂರು ರಸ್ತೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.
2018ರಲ್ಲಿ ರಸ್ತೆ ಕಾಮಗಾರಿಗೆ ಅನುಮೋದನೆ ದೊರಕಿದ್ದು, 2020ರಲ್ಲಿ ಕಾಮಗಾರಿ ಪ್ರಾರಂಭವಾಗಿರುತ್ತದೆ. 3 ವರ್ಷಗಳಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲದ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ಸಂದರ್ಭ, ಅಧಿಕಾರಿಗಳ ಬದಲಾವಣೆ, ಭೂ ಸ್ವಾಧೀನ, ಅರಣ್ಯ ಇಲಾಖೆಗೆ ಸೇರಿದ ಸ್ಥಳದಿಂದ ಕೆಲವು ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಬೆಂಗಳೂರು- ಜಲಸೂರು ರಸ್ತೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಸೇರಿದ ಸ್ಥಳ 13 ಕಿ.ಮೀ ಇದ್ದು, ಇದರಲ್ಲಿ 8 ಕಿ.ಮೀ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿರುತ್ತದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಯಿಂದ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ ಎಂದರು. ಕೆ.ಶಿಪ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ‌ ಅಧಿಕಾರಿಗಳು ಪರಿಶೀಲನೆಯಲ್ಲಿ ಭಾಗವಹಿಸಿದ್ದು, ಮಂಡ್ಯ ಜಿಲ್ಲಾ ವ್ಯಾಪ್ತಿಯ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿ ಸಭೆ ನಡೆಸಿ ಪರಿಹರಿಸಲಾಗುವುದು‌ ಎಂದರು. ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ: ಕುಮಾರ, ಉಪವಿಭಾಗಾಧಿಕಾರಿ ನಂದೀಶ್, ಕೆ.ಶಿಪ್ ಚೀಫ್ ಇಂಜಿನಿಯರ್ ಶಿವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version