Home ತಾಜಾ ಸುದ್ದಿ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಲ್ಲಿ ಹೆಚ್ಚಿದ ಸ್ವಾಭಿಮಾನ: ತಿಮ್ಮಾಪುರ

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಲ್ಲಿ ಹೆಚ್ಚಿದ ಸ್ವಾಭಿಮಾನ: ತಿಮ್ಮಾಪುರ

0

ಬಾಗಲಕೋಟೆ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಸ್ವಾಭಿಮಾನ ಹೆಚ್ಚಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಬಣ್ಣಿಸಿದ್ದಾರೆ. ನವನಗರದ ಕಲಾಭವನದಲ್ಲಿ ಜಿಲ್ಲಾಡಳಿತ ಭವನದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ದುಡಿಮೆ ಇರಲಿ, ಇಲ್ಲದಿರಲಿ, ಮಕ್ಕಳು ಸಾಕದಿದ್ದರೂ ಯಾರೂ ಹಸಿವಿನಿಂದ ಇರಬಾರದು ಎಂದು ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ‌ಜಾರಿಗೆ ತಂದಿದೆ. ಮಹಿಳೆಯರು ಸ್ವಾಭಿಮಾನದಿಂದ ಓಡಾಡಲು ಶಕ್ತಿ ಯೋಜನೆ ಜಾರಿಗೊಳಿಸಿದೆ. ‌ಮಹಿಳೆಯರ ಆದಾಯ ಹೆಚ್ಚಿಲು ಗೃಹಲಕ್ಷ್ಮೀ ಯೋಜನೆ ಜಾರಿಗೆ ತರುತ್ತಿರುವುದು ಸಂತಸದ ಸಂಗತಿ ಎಂದರು. ಪ್ರತಿ ತಿಂಗಳು ವಿದ್ಯುತ್ ಬಿಲ್ ಸಂದಾಯವಾಗದಿದ್ದರೆ ಸಂಪರ್ಕವನ್ನೇ ಕಡಿತಗೊಳಿಸಲಾಗುತಿತ್ತು. ಈಗ ೨೦೦ ಯೂನಿಟ್‌ವರೆಗಿನ ವಿದ್ಯುತ್ ಕೂಡ ಉಚಿತವಾಗಿ ನೀಡಲಾಗುತ್ತಿದ್ದು, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಜನ ಖುಷಿತಾಗಿದ್ದಾರೆ ಎಂದರು.


ಮೊದಲು ಮಹಿಳೆಯರ ಮೇಲೆ ದೌರ್ಜನ್ಯವಾದರೆ ನಮ್ಮ ಹಿಂದೆ ಇಂದಿರಾಗಾಂಧಿ, ಸೋನಿಯಾ ಗಾಂಧಿ ಸರ್ಕಾರ ನಮ್ಮ ಹಿಂದೆ ಇದೆ ಎಂದು‌ ಮಹಿಳೆಯರು ಹೇಳುತ್ತಿದ್ದರು, ಈಗ ಸಿದ್ದರಾಮಯ್ಯ ಸರ್ಕಾರವೂ ಅಂಥದೇ ಭರವಸೆ ಮೂಡಿಸಿದೆ ಎಂದು ಬಣ್ಣಿಸಿದರು‌. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ೩.೭೧ ಲಕ್ಷ ಫಲಾನುಭವಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವಿವರಿಸಿದರು. ಶಾಸಕ ಎಚ್.ವೈ.ಮೇಟಿ ಅವರು ಮಾತನಾಡಿ, ರಾಜ್ಯ ಸರ್ಕಾರ ಬಡವರ ಪರವಾಗಿದ್ದು, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದರು. ವಿಪ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ‌.ಎಂ.ಜಾನಕಿ, ಜಿಪಂ ಸಿಇಒ ಶಶಿಧರ ಕುರೇರ, ಎಡಿಸಿ ಪರಶುರಾನ ಶಿನ್ನಾಳಕರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಇತರರು ಇದ್ದರು.

Exit mobile version