Home News ಕೆಲ ಮಂತ್ರಿಗಳ ಕುರ್ಚಿಗೆ ಕಂಟಕ?

ಕೆಲ ಮಂತ್ರಿಗಳ ಕುರ್ಚಿಗೆ ಕಂಟಕ?

ಬೆಂಗಳೂರು: ಅಭಿವೃದ್ಧಿ, ಅನುದಾನ, ಗ್ಯಾರಂಟಿ ಅನು ಷ್ಠಾನ, ಸಚಿವರ ಕಾರ್ಯವೈಖರಿ, ಪಕ್ಷದ ಸಂಘಟನೆ, ನಾಯಕತ್ವ ಬದಲಾವಣೆಯಂತಹ ಮಹತ್ವದ ವಿಚಾರಗಳ ಬಗ್ಗೆ 2 ವಾರಗಳ ಅವಧಿಯಲ್ಲಿ ಬರೋಬ್ಬರಿ ೧೦೧ ಶಾಸಕರು ಅಭಿಪ್ರಾಯವನ್ನು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಂಗ್ರಹಿಸಿದ್ದಾರೆ. ಈ ವರದಿ ಆಧರಿಸಿಯೇ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಮುಖ ಬದಲಾವಣೆ ಆಗಬಹುದೆಂದು ನಿರೀಕ್ಷಿಸಲಾಗಿದೆ. ವರದಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ದೆಹಲಿಯಲ್ಲಿ ಗುರುವಾರ ಚರ್ಚೆಯಾಗಲಿವೆ.
ಕಳೆದ ವಾರ ಮೊದಲ ಹಂತದಲ್ಲಿ ೪೨ ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಸೋಮವಾರದಿಂದ ಮತ್ತೆ ೨ನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದ ಒಟ್ಟು ೫೯ ಶಾಸಕರ ಅಭಿಪ್ರಾಯ ಪಡೆಯಲಾಗಿದೆ. ಸಚಿವರ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದ ೧೨ ಶಾಸಕರು ಅಷ್ಟೇ ಸಂಖ್ಯೆ ಮಂತ್ರಿಗಳ ಕಾರ್ಯವೈಖರಿ ಪ್ರಶ್ನಿಸಿ ಲಿಖಿತವಾಗಿ ಸುರ್ಜೇವಾಲಾಗೆ ಪತ್ರ ನೀಡಿದ್ದಾರೆ.
ಇಂದೇ ವರದಿ ಪರಾಮರ್ಶೆ?: ಈವರೆಗೆ ಸಿಕ್ಕಿರುವ ಅನುದಾನದ ಜತೆಗೆ ಕ್ಷೇತ್ರದ ಅಭಿವೃದ್ಧಿ, ಸಚಿವರ ಕಾರ್ಯವೈಖರಿ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ಬಗ್ಗೆ ಶಾಸಕರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗಿದೆ. ಕ್ರೋಢಿಕೃತ ವರದಿ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಗುರುವಾರವೇ ಸುರ್ಜೇವಾಲಾ ಅವರಿಂದ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಸಿಎಂ, ಡಿಸಿಎಂ ಸಮ್ಮುಖದಲ್ಲೇ ಇದರ ಪರಾಮರ್ಶೆ ನಡೆಯುವ ಸಾಧ್ಯತೆ ಇದೆ .
ವರಿಷ್ಠರ ‘ಕೈ’ಯಲ್ಲಿ ಭವಿಷ್ಯ: ಸುಮಾರು ೬೦ಕ್ಕೂ ಅಧಿಕ ಶಾಸಕರಿಂದ ಮಂತ್ರಿಗಳ ಅಸಹಕಾರ ಬಗ್ಗೆಯೇ ಮೌಖಿಕ ಹಾಗೂ ಲಿಖಿತ ದೂರುಗಳ ಸಲ್ಲಿಸಲ್ಪಟ್ಟಿದೆ. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಸಂಪುಟ ಸರ್ಜರಿ ಬಗ್ಗೆ ಚರ್ಚೆ ನಡೆಯಲಿದೆ.

ಭೇಟಿಗೆ ಸಿಗ್ತಾರಾ ರಾಗಾ?
ಇದೆಲ್ಲದರ ನಡುವೆ ಈಗಾಗಲೇ ದೆಹಲಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭೇಟಿಗೆ ಪ್ರತ್ಯೇಕವಾಗಿ ಸಮಯ ಕೇಳಿದ್ದಾರೆ. ಆದರೆ, ರಾಹುಲ್ ಗಾಂಧಿ ಬಿಹಾರ ಚುನಾವಣೆ ಪ್ರಚಾರದಲ್ಲಿದ್ದು ತಡರಾತ್ರಿ ದೆಹಲಿಗೆ ಹಿಂದಿರುಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ ಕ್ರಾಂತಿ, ಸಿಎಂ ಸ್ಥಾನದ ಅಧಿಕಾರ ಹಂಚಿಕೆ, ಮೇಲ್ಮನೆಗೆ ನಾಲ್ವರ ನಾಮಕರಣ ನಿಗಮ, ಮಂಡಳಿಗಳಿಗೆ ಪಕ್ಷ ಪ್ರಮುಖರ ನಾಮನಿರ್ದೇಶನ ಸೇರಿದಂತೆ ಹಲವು ಪ್ರಮುಖ ವಿಷಯಗಳು ರಾಹುಲ್ ಭೇಟಿ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ.

Exit mobile version