Home ತಾಜಾ ಸುದ್ದಿ ಕಾಂಗ್ರೆಸ್ ನಾಯಕರು ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಉತ್ತರಿಸಲಿ

ಕಾಂಗ್ರೆಸ್ ನಾಯಕರು ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಉತ್ತರಿಸಲಿ

0
cm

ಹುಬ್ಬಳ್ಳಿ : ಕಾಂಗ್ರೆಸ್ ನಾಯಕರ ಮೇಲೆ ಭ್ರಷ್ಟಚಾರದ ಅನೇಕ ಪ್ರಕರಣ ದಾಖಲಾಗಿವೆ. ಅವುಗಳಿಗೆ ಉತ್ತರ ಕೊಡಲಾಗದೇ ಕೋರ್ಟ್ ಗೆ ಅಲೆದಾಡುತ್ತಿದ್ದಾರೆ. ತಮ್ಮ ಮೇಲಿನ ಪ್ರಕರಣಗಳ ಬಗ್ಗೆ ಉತ್ತರ ಕೊಡದೇ ನನ್ನ ಮೇಲೆ ಭ್ರಷ್ಟಚಾರದ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಆದರ್ಶನಗರದ ನಿವಾಸದಿಂದ ಶಿಗ್ಗಾವಿ ಕ್ಷೇತ್ರಕ್ಕೆ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಮಾಡಿರುವ 1.5 ಲಕ್ಷ ಕೋಟಿ ಹಣವನ್ನು ರೈತರಿಗೆ ಹಂಚುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಏನೇನು ದಾಖಲೆ,ಸಾಕ್ಷ್ಯ ಇದೆ ಕೊಡಿ ಎಂದು ಚುನಾವಣೆ ಆಯೋಗ ಕಾಂಗ್ರೆಸ್ ನವರಿಗೆ ನಿನ್ನೆ ಕೇಳಿದೆ. ಏನೂ ದಾಖಲೆ ಕೊಡಲು ಆಗಿಲ್ಲ. ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಪ್ರಕರಣಗಳಿಲ್ಲ. ಕಾಂಗ್ರೆಸ್ ದ ಅನೇಕರ ಮೇಲೆ ಇವೆ. ಎಲ್ಲರೂ ಒಂದಲ್ಲ ಒಂದು ರೀತಿಯ ಪ್ರಕರಣದಲ್ಲು ಭಾಗಿಯಾಗಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಇಡಿ, ಐಟಿ ದಾಳಿ ಮಾಡಲು ನಾವೇನು ನಿರ್ದೇಶನ ಕೊಡಲ್ಲ. ಅವರಿಗೆ ಎಲ್ಲಿ ಖಚಿತ ಮಾಹಿತಿ ಲಭಿಸುತ್ತದೊ ಅಲ್ಲಿ ಮಾಡುತ್ತಾರೆ. ಬಿಜೆಪಿ ಸರ್ಕಾರವೇ ಐ.ಟಿ ದಾಳಿ ಮಾಡಿಸುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾರು ತಪ್ಪು ಮಾಡುತ್ತಾರೊ ಅವರು ಸಿಕ್ಕಿಕೊಳ್ಳುತ್ತಾರೆ. ತಪ್ಪೇ ಮಾಡದೇ ಇದ್ದರೆ ಭಯ ಯಾಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿಗಳು, ಮುಖಂಡರು, ಬೆಂಬಲಿಗರ ಮೇಲೆ ಐ.ಟಿ ದಾಳಿ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಅವರು ಹೇಳಿದ ಹಾಗೆಯೇ ದಾಳಿ ನಡೆಯುತ್ತಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ತಮ್ಮವರ ಮೇಲೆ ಐ.ಟಿ. ದಾಳಿ ನಡೆಯುತ್ತದೆ ಎಂದು ಮೊದಲೇ ಲಕ್ಣ್ಮೀ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ್ ಹೇಳುತ್ತಾರೆ ಎಂದರೆ ಅರ್ಥವೇನು? ಏನಾದರೂ ತಪ್ಪು ಮಾಡಿರಲೇಬೇಕಲ್ಲವೇ ಎಂದು ಪ್ರಶ್ನಿಸಿದರು.

ವೀರಶೈವ ಮಹಾಸಭಾ ಒಂದು ಬೃಹತ್ ಸಂಸ್ಥೆ. ಸಾಗದಂತಹ ಸಂಸ್ಥೆ. ಈ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ರಾಜಕೀಯಕ್ಕೆ ಯಾರೂ ಬಳಸಿಕೊಂಡಿಲ್ಲ. ಈಗಿನ ಅಧ್ಯಕ್ಷರ ಬಗ್ಗೆ ನಮಗೆ ಅಪಾರ ಗೌರವ ಇದೆ. ಅವರೂ ರಾಜಕೀಯಕ್ಕೆ ಈ ಸಂಸ್ಥೆ ಬಳಕೆ ಮಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ಲಿಂಗಾಯತ ವೇದಿಕೆ ಎಂಬುದು ಮಾನ್ಯತೆ ಇಲ್ಲದ ವೇದಿಕೆ. ಚುನಾವಣೆಯಲ್ಲಿ ಇಂಥದ್ದೇ ನಿರ್ದಿಷ್ಟ ಪಕ್ಷಕ್ಕೆ ಬೆಂಬಲಿಸಿ ಎಂದು ಹೇಳಿಬಿಟ್ಟರೆ ಲಿಂಗಾಯತರೆಲ್ಲ ಹಾಗೆಯೇ ಮಾಡಿಬಿಡುತ್ತಾರಾ? ಇಂತಹದ್ದಕ್ಕೆ ಯಾವುದೇ ಮಹತ್ವ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಪ್ರತಿ ಚುನಾವಣೆಯಲ್ಲೂ ಬಂದು ಪಕ್ಷಕ್ಕೆ, ಕಾರ್ಯಕರ್ತರಿಗೆ, ಅಭ್ಯರ್ಥಿಗಳಿಗೆ ಶಕ್ತಿ ತುಂಬಿ ಗೆಲ್ಲಿಸಿದ್ದಾರೆ. ಈ ಬಾರಿಯೂ ಸಹ ಬಂದು ಶಕ್ತಿ ನೀಡಿದ್ದಾರೆ. ಚುನಾವಣೆ ಕೊನೆ ದಿನ ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ನಾಯಕರು, ಅಭ್ಯರ್ಥಿಗಳು ತುರುಸಿನ ಪ್ರಚಾರ ನಡೆಸಲಿದ್ದಾರೆ. ಮತ್ತೆ ಪಕ್ಷ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.

Exit mobile version