ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಾಂಗ್ರೆಸ್ ವೈಫಲ್ಯದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಿನೆಲ್ಲೆಡೆ ಸುಮಾರು 196 ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಆವರಿಸಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ, ಬರಪೀಡಿತ ಘೋಷಣೆಗೂ ಮೀನಾಮೇಷ ಎಣಿಸುತ್ತಿದೆ. ಗ್ಯಾರಂಟಿ ಜಾತ್ರೆಯಲ್ಲಿ ನಿರತರಾಗಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕುಂಠಿತಗೊಳಿಸಿ, ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟುಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿರುವ ಸರ್ಕಾರದ ರೈತ ವಿರೋಧಿ, ಜನವಿರೋಧಿ ನಿಲುವುಗಳನ್ನು ಖಂಡಿಸಿದರು. ಒಂದು ಕಡೆ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಪ್ರತಿ ಹಂತದಲ್ಲೂ ಕೇಂದ್ರವನ್ನು ದೂರುತ್ತಿದೆ. ಅಕ್ಕಿ ವಿಚಾರದಲ್ಲೂ ಮೋದಿ ಟೀಕಿಸಿದ್ದರು. ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತದೆ. ಹಾಗಾಗಿ ಬಹಳ ಚಾಲಾಕಿನಿಂದ ಕೇಂದ್ರಕ್ಕೆ ಪತ್ರ ಬರೆದು ಬರದ ಮಾನದಂಡ ಸಡಿಲ ಮಾಡಿ ಎಂದು ಮನವಿ ಮಾಡಿದ್ದಾರೆ. ಇದರ ಹಿಂದೆ ದುರುದ್ದೇಶ ಅಡಗಿದೆ. ಗ್ಯಾರಂಟಿ ಪೂರ್ಣ ಕಷ್ಟವಾಗಿದೆ. ಸರ್ಕಾರಿ ನೌಕರರಿಗೆ ವೇತನ ಕೊಡಲು ಆಗುತ್ತಿಲ್ಲ. ಅಕ್ಕಿ ಬದಲು ಹಣ ನೀಡಿಲ್ಲ, ಈಗ ಬರದ ಮಾನದಂಡ ಸಡಿಲಿಕೆಗೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಂಡಿದ್ದಾರೆ” ಎಂದು ಕಿಡಿಕಾರಿದರು.
