Home News ಊಹಾ ಪತ್ರಿಕೋದ್ಯಮ ಸಮಾಜಕ್ಕೂ ಅಪಾಯ

ಊಹಾ ಪತ್ರಿಕೋದ್ಯಮ ಸಮಾಜಕ್ಕೂ ಅಪಾಯ

ಬೆಂಗಳೂರು: ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ರಿಕಾ ದಿನಾಚರಣೆ-2025” ಹಾಗೂ “ನಿಜ ಸುದ್ದಿಗಾಗಿ ಸಮರ” ಸಂವಾದವನ್ನು ಉದ್ಘಾಟಿಸಿ, ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ. ಸುಳ್ಳು ಮತ್ತು ಊಹಾ ಪತ್ರಿಕೋದ್ಯಮ ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್‌ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ ಎಂದರು.
ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ? ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ ಎಂದು ಪ್ರಶ್ನಿಸಿದರು.
ನಾನು ಇವತ್ತು ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಆರೋಗ್ಯ ಸಂಜೀವಿನಿ ಉದ್ಘಾಟಿಸಿ ಪತ್ರಕರ್ತರಿಗೆ ಅನುಕೂಲ ಒದಗಿಸಿದ್ದೇವೆ. ನಮ್ಮ ಪರವಾಗಿ ಬರೆಯಲಿ ಎನ್ನುವ ಕಾರಣದಿಂದ ಜಾರಿ ಮಾಡಿರುವುದಲ್ಲ. ಸತ್ಯ ಬರೆಯಿರಿ, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರಿ ಎಂದು ಕರೆ ನೀಡಿದರು.

Exit mobile version