Home News ಉದ್ಘಾಟನೆಗೆ ಸಿದ್ಧವಾದ ಐತಿಹಾಸಿಕ ಸಿಗಂದೂರು ಕೇಬಲ್ ಸೇತುವೆ, ವಿಶೇಷತೆಗಳು

ಉದ್ಘಾಟನೆಗೆ ಸಿದ್ಧವಾದ ಐತಿಹಾಸಿಕ ಸಿಗಂದೂರು ಕೇಬಲ್ ಸೇತುವೆ, ವಿಶೇಷತೆಗಳು

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ತಯಾರಿ ನಡೆಸಿದೆ. ಸಾಗರ ತಾಲೂಕಿನಲ್ಲಿ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ಸಿಗಂದೂರು ಸೇತುವೆಯ ಕಾಮಗಾರಿ ಮುಕ್ತಾಯಗೊಂಡಿದೆ. ಈ ಕೇಬಲ್ ಬ್ರಿಡ್ಜ್ ಉದ್ಘಾಟನೆಗೆ ದಿನಾಂಕ ನಿಗದಿಯಾಗಬೇಕಿದೆ.

ಮಂಗಳವಾರ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಶಿಕಾರಿಪುರ ಶಾಸಕ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮುಂತಾದ ನಾಯಕರು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೇ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸೇತುವೆಯನ್ನು ಪರಿಶೀಲನೆ ನಡೆಸಿದರು. ಈ ಕುರಿತು ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಮಲೆನಾಡಿನ ಶರಾವತಿ ಸೊಬಗಿನ ಸಿಂಧೂರ ಈ ಐತಿಹಾಸಿಕ ಸಿಗಂದೂರು ಸೇತುವೆ’ ಎಂದು ಬಣ್ಣಿಸಿದ್ದಾರೆ.

ಸಾಗರ ತಾಲ್ಲೂಕು ಕಳಸವಳ್ಳಿ-ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಐತಿಹಾಸಿಕ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸೇತುವೆ ಪರಿವೀಕ್ಷಣೆ ನಡೆಸಲಾಯಿತು ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ.

ಈಗಾಗಲೇ ಹಲವು ಪ್ರವಾಸಿ ತಾಣಗಳ ಮೂಲಕ ಶಿವಮೊಗ್ಗ ಜಿಲ್ಲೆ ರಾಜ್ಯ, ದೇಶ ಮತ್ತು ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿದೆ. ವಿಶ್ವವಿಖ್ಯಾತ ಜೋಗ ಜಲಪಾತದ ಬಳಿಕ ಸಿಗಂದೂರು ಸೇತುವೆ ಸಾಗರ ತಾಲೂಕಿನ ಪ್ರಮುಖ ಆಕರ್ಷಣೆಯಾಗಿದೆ. ಶರಾವತಿ ಹಿನ್ನೀರಿನಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.

ಸಾಗರ ತಾಲ್ಲೂಕಿನಲ್ಲಿ ಶರಾವತಿ ಡ್ಯಾಂ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಈ ಸಿಗಂದೂರು ಸೇತುವೆ ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಸುಮಾರು 430 ಕೋಟಿ ಅನುದಾನದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಇದು ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆಯಾಗಿದೆ.

ಈಗಾಗಲೇ ಬಿ. ವೈ. ರಾಘವೇಂದ್ರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಿಂಗದೂರು ಸೇತುವೆ ಉದ್ಘಾಟನೆಗೆ ದಿನಾಂಕ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ವಾರ ಸೇತುವೆ ಮೇಲೆ ಮರಳು ತುಂಬಿದ ಲಾರಿಗಳನ್ನು ನಿಲ್ಲಿಸುವ ಮೂಲಕ ಸೇತುವೆಯ ಭಾರ ಪರೀಕ್ಷೆಯನ್ನು ನಡೆಸಲಾಗಿತ್ತು.

ಸೇತುವೆ ಸುರಕ್ಷತೆಯ ಕುರಿತು ಮೊದಲ ಹಂತದ ವರದಿ ಈಗಾಗಲೇ ಬಂದಿದ್ದು, ಸೇತುವೆ ಸುರಕ್ಷಿತವಾಗಿದೆ ಎಂದು ವರದಿ ಹೇಳಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಪರೀಕ್ಷೆ ನಡೆಯಲಿದೆ. ಕೇಂದ್ರ ಸರ್ಕಾರದಿಂದ ದಿನಾಂಕವನ್ನು ನೀಡಿದ ಬಳಿಕ ಸಿಗಂದೂರು ಸೇತುವೆ ಯಾವಾಗ ಲೋಕಾರ್ಪಣೆಯಾಗಲಿದೆ? ಎಂದು ತಿಳಿಯಲಿದೆ.

Exit mobile version