ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ ಬಿಜೆಪಿ ತೊರೆದಿರುವುದು ಪಕ್ಷದ ಮೇಲೆ ಏನೂ ಪರಿಣಾಮ ಬೀರಲ್ಲ. ಅವರಿಗೆ ವಯಸ್ಸಾಗಿದೆ. ರಿಟೈರ್ ಆಗಿ ಎಂದು ಹೇಳಿದೆವು. ಆದರೆ, ಅವರು ಬೇರೆ ಟೀಮ್‌ನಲ್ಲಿ ಸೇರಿ ಆಟವಾಡಲು ಹೋಗಿದ್ದಾರೆ. ಆದರೂ ಈ ಬಾರಿ `ಕಪ್ ನಮ್ದೇ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಈವರೆಗೂ ಕ್ಷಮೆ ಕೇಳಿಲ್ಲ. ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯವನ್ನು ಪದೇ ಪದೇ ಅವಮಾನ ಮಾಡುತ್ತಿದೆ. ನಮ್ಮ ಪಕ್ಷ ಈಗಾಗಲೇ ಲಿಂಗಾಯತ ಸಮುದಾಯದ ಮೂವರನ್ನು ಮುಖ್ಯಮಂತ್ರಿ ಮಾಡಿದೆ ಎಂದ ಅವರು ಲಿಂಗಾಯತ ಸಮುದಾಯದ ಮೇಲೆ ರಾಹುಲ್ ಗಾಂಧಿ ಅವರಿಗೆ ಪ್ರೀತಿ ಇದ್ದರೆ ಲಿಂಗಾಯತ ಸಮುದಾಯದವರನ್ನೇ ಮುಂದಿನ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ಕುಡಚಿಗೆ ಪ್ರಧಾನಿ ಮೋದಿ
ಏ. 29ರಂದು ಕುಡಚಿಗೆ ಪ್ರಧಾನಿ ನರೇಂದ್ರ ಮೋದಿ ಅಗಮಿಸಲಿದ್ದು, ಬೆಳಗಾವಿ ಜಿಲ್ಲಾ ವ್ಯಾಪ್ತಿಗೂ ಪ್ರಧಾನಿಗಳು ಮತ್ತೊಮ್ಮೆ ಭೇಟಿ ನೀಡುವಂತೆ ಪ್ರಧಾನಿಯವರ ಕಚೇರಿಗೆ ಮನವಿ ಮಾಡಿಕೊಂಡಿದ್ದೇನೆ. ಹಾಗೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಶೀಘ್ರದಲ್ಲೇ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು. ಈಗಾಗಲೇ ಉತ್ತರಾಖಂಡ ರಾಜ್ಯದಲ್ಲಿ ಇತಿಹಾಸ ಬ್ರೇಕ್ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅದರಂತೆಯೇ ಕರ್ನಾಟಕದಲ್ಲಿಯೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದರು.