Home News ಆಣೆ, ಪ್ರಮಾಣಕ್ಕೆ ಸಿದ್ಧ; ದಿನಾಂಕ, ಸಮಯ ನಿಗದಿ ಮಾಡಿ: ಸಂಸದೆ ಸುಮಲತಾಗೆ ಶಾಸಕ ಪುಟ್ಟರಾಜು ಸವಾಲು

ಆಣೆ, ಪ್ರಮಾಣಕ್ಕೆ ಸಿದ್ಧ; ದಿನಾಂಕ, ಸಮಯ ನಿಗದಿ ಮಾಡಿ: ಸಂಸದೆ ಸುಮಲತಾಗೆ ಶಾಸಕ ಪುಟ್ಟರಾಜು ಸವಾಲು

ಪಾಂಡವಪುರ: ಭ್ರಷ್ಟಾಚಾರ ಕುರಿತು ಸಂಸದೆ ಸುಮಲತಾ ಅವರ ಆಣೆ, ಪ್ರಮಾಣದ ಸವಾಲು ಸ್ವೀಕರಿಸಿದ ಮೇಲುಕೋಟೆ ಶಾಸಕ ಪುಟ್ಟರಾಜು ಅವರು, ಈ ಬಗ್ಗೆ ದಿನಾಂಕ, ಸಮಯ ನಿಗದಿ ಮಾಡಲಿ ನಾನು ಸಿದ್ಧನಿದ್ದೇನೆ ಎಂದು ಸಂಸದೆ ಸುಮಲತಾ ಅವರಿಗೆ ಪ್ರತಿ ಸವಾಲು ಹಾಕಿದರು.
ತಾಲೂಕಿನ ಮೇಲುಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಸಂಸದೆ ತುಂಬಾ ಹಗುರವಾಗಿ ಮಾತನಾಡುತ್ತಿದ್ದಾರೆ. ಹೆಚ್ಚು ಮಾತನಾಡಿದರೆ ಬೇಗ ಜನರಿಗೆ ಹತ್ತಿರವಾಗುತ್ತೇನೆ ಎಂದು ಅವರು ತಿಳಿದುಕೊಂಡಿದ್ದಾರೆ. ಅಂಬರೀಷ್‌ರ ಹೆಂಡತಿ, ಅಂಬರೀಷ್ ವ್ಯಕ್ತಿತ್ವ ಹಾಗೂ ಗುಣಗಳನ್ನು ಮೆಚ್ಚಿಕೊಂಡು ಜಿಲ್ಲೆಯ ಜನರು ಇವರನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ಇನ್ನೂ ಬೇರೆ ಯಾವ ಕಾರಣಕ್ಕಾಗಿಯೂ ಅಲ್ಲ ಎಂದು ಛೇಡಿಸಿದರು.
ಇವರು ಸಂಸದರಾಗಿ ಆಯ್ಕೆಯಾಗಿ ನಾಲ್ಕು ವರ್ಷ ಆಗ್ತಾ ಇದೆ. ಜಿಲ್ಲೆಯಲ್ಲಿ ಇವರ ಸಾಧನೆ ಏನು? ಜಿಲ್ಲೆ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪುಟ್ಟರಾಜು ಪ್ರಶ್ನೆ ಮಾಡಿದರು. ನೋಡ್ರಿ, ನಾನು, ನನ್ನ ಪತ್ನಿ, ನಮ್ಮ ಅಣ್ಣನ ಮಗ ಅಶೋಕ ಎಲ್ಲರೂ ಜಿ.ಪಂ ಸದಸ್ಯರಾಗಿದ್ದೆವು. ಆ ಕಾಲದಿಂದಲೂ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ನಾವು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಜತೆಗೆ ಪಾರದರ್ಶಕವಾಗಿ ಆಡಳಿತ ನಡೆಸಿದ್ದೇನೆ. ಮೇಲುಕೋಟೆ ಕ್ಷೇತ್ರದ ಜನರಿಗೆ ನಮ್ಮ ಬಗ್ಗೆ ಗೊತ್ತಿದೆ. ಇವರು ನೀಡುವ ಸರ್ಟಿಫಿಕೇಟ್ ಏನೂ ನನಗೆ ಬೇಡ ಎಂದರು.
ಜೆಡಿಎಸ್ ಶಾಸಕರನ್ನು ಟಾರ್ಗೆಟ್ ಮಾಡಿದರೆ ತಾನು ಹಿರೋ ಆಗ್ತೇನೆ ಎಂಬ ಭಾವನೆ ಸಂಸದೆ ಸುಮಲತಾ ಅವರದ್ದು. ನಮ್ಮ ಬಗ್ಗೆ ಮಾತನಾಡಿದರೆ ಜನರಿಗೆ ಬಹುಬೇಗ ಹತ್ತಿರವಾಗುವೆ ಎನ್ನುವ ಬಯಕೆ ಸುಮಲತಾರಿಗಿದೆ. ಮಾತನಾಡುವುದರಿಂದಲೇ ದೊಡ್ಡ ಲೀಡರ್ ಆಗುತ್ತೀನಿ ಅಂದು ಕೊಂಡಿದ್ರೆ ಅದನ್ನು ಮೊದಲು ಬಿಟ್ಟು ಬಿಡಿ. ಗೌರವದಿಂದ ರಾಜಕಾರಣ ಮಾಡಿ. ಗಾಳಿಯಲ್ಲಿ ಗುಂಡು ಹೊಡೆಯುವ ಸಂಸ್ಕೃತಿ ನನ್ನದಲ್ಲ, ನೇರ ಎದೆಗೆ ಗುಂಡು ಹೊಡೆಯುವಂತದ್ದು ಎಂದು ಸುಮಲತಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯಾರ ಯಾರ ಬಂಡವಾಳ ಏನೇನು ಅನ್ನೋದು ಗೊತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸುಮಲತಾ ಕಮಿಷನ್ ಕೇಳಿರುವ ಆರೋಪದ ಬಗ್ಗೆ ನಿತೀನ್ ಗಡ್ಕರಿ ಹಾಗೂ ಅಧಿಕಾರಿಗಳನ್ನು ಕೇಳಿದ್ರೆ ಗೊತ್ತಾಗುತ್ತೆ ಎಂದು ಕಾಲೆಳೆದರು. ಆಣೆ ಪ್ರಮಾಣಕ್ಕೆ ಸಿದ್ದನಿದ್ದೇನೆ. ಮೇಲುಕೋಟೆ ಚಲುವನಾರಾಯಣನ ಸನ್ನಿಧಿಯಲ್ಲಿ ಅಂತ ಅವರೇ ಹೇಳಿದ್ದಾರೆ. ದಿನಾಂಕ, ಸಮಯ ನಿಗದಿ ಮಾಡಿ, ನಾನು ಬಂದು ಪ್ರಮಾಣ ಮಾಡುವೆ ಬನ್ನಿ ಎಂದು ಸವಾಲು ಹಾಕಿದರು.

ಶಾಸಕ ಪುಟ್ಟರಾಜು
Exit mobile version