Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾಳಿ ಜಲವಿದ್ಯುತ್ ಯೋಜನೆ: ಭೂ ಸ್ವಾಧೀನ ವರದಿ ಕೇಳಿದ ಹೈಕೋರ್ಟ್

ಕಾಳಿ ಜಲವಿದ್ಯುತ್ ಯೋಜನೆ: ಭೂ ಸ್ವಾಧೀನ ವರದಿ ಕೇಳಿದ ಹೈಕೋರ್ಟ್

ಕಾಳಿ ಜಲ ವಿದ್ಯುತ್ ಯೋಜನೆಯ ಸಂಧರ್ಭದಲ್ಲಿ ಜೋಯಿಡಾ ತಾಲೂಕಿನ ಬಾಡ ಗುಂದ ಗ್ರಾಮದ ಸರ್ವೆ ನಂಬರ 12 ಎ.ದಲ್ಲಿ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಬಿನ್ ಶೇತ್ಕಿ (ಎನ್.ಎ.) ಮಾಡಿರುವ ಕುರಿತು ಸವಿಸ್ತಾರವಾದ ವರದಿಯನ್ನು ನೀಡುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಕೋರಿದೆ. ಈ ಕುರಿತಂತೆ ಹೈಕೋರ್ಟ್ ಧಾರವಾಡ ಪೀಠದಲ್ಲಿ ರಿಟ್ ಅಪೀಲ್ ನ ( WA0100305/2025) ವಿಚಾರಣೆ ನಡೆಸಿದ ನ್ಯಾಯಾಲಯ ವರದಿಯನ್ನು ಕಾಲಮಿತಿಯಲ್ಲಿ ನೀಡುವಂತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಕಾರವಾರದ ಸಹಾಯಕ ಕಮೀಷನರ್ ಅವರು ಜೋಯಿಡಾ ತಹಶೀಲದಾರರಿಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕೋರಿದ್ದಾರೆ. ಜೋಯಡಾ ತಾಲೂಕಿನ ಬಾಡಗುಂದ ಭೂ ಸ್ವಾಧೀನವಾದ ಜಮೀನುಗಳಿಗೆ ಬಿನ್ ಶೇತ್ಕಿ ಪರವಾನಗಿ ನೀಡಲಾಗಿದೆ. ರಿಟ್ ಅಪೀಲು ಸಲ್ಲಿಸಿರುವ ಅರ್ಜಿದಾರರ ಹಾಗೂ ಕಾಳಿ ನದಿಯ ನಡುವಿನ ಜಮೀನು ಬಾಡಗುಂದ ಗ್ರಾಮದ ಸವೆ೯ ನಂಬರ 12/A ಬಾಬ್ತು ರದ್ದಿಯಾತಿ ಅಧಿಸೂಚನೆ ಪೂರ್ವದಲ್ಲಿ ಬಿನ್ ಶೇತ್ಕಿ ನೀಡಲಾಗಿದ್ದು ಇರುತ್ತದೆ. ಕಾಳಿ ನದಿಯ ಹಲವಾರು ಜಮೀನುಗಳು ಉದಾಹರಣೆಗೆ ವಿಸ್ಲಿಂಗ್ ವುಡ್ ರೆಸಾರ್ಟ, ಹಾರ್ನ್ ಬಿಲ್ ರೆಸಾರ್ಟ,ಸಿಲ್ವರ್ ಬಿಲ್ ರೆಸಾರ್ಟ, ಬೈಸನ್ ರೆಸಾರ್ಟ, ಕಾಳಿ ಅಡ್ವೆಂಚರ್ಸ್, ಲಗುನಾ ರೆಸಾರ್ಟ, ಅಕ್ವಾ ವುಡ್, ಆಲ್ಫಾ ಅಡ್ವೆಂಚರ್ಸ್, ಹಾರ್ನ್ ಬಿಲ್ ಅಡ್ವೆಂಚರ್ಸ್, ಸ್ಟೇಟ್ ಅಡ್ವೆಂಚರ್ಸ್ ಈ ಎಲ್ಲ ರೆಸಾರ್ಟಗಳಿಗೆ ಬಿನ್ ಶೇತ್ಕಿ ನೀಡಲಾಗಿದ್ದು,ಎನ್.ಎ ಅನುಮತಿಯನ್ನು ಯಾವ ಆಧಾರದ ಮೇಲೆ ನೀಡಲಾಗಿರುತ್ತದೆ ಎಂಬ ಬಗ್ಗೆ ಸವಿಸ್ತಾರವಾದ ವರದಿಯನ್ನು ಕಾಲಮಿತಿಯೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಲ್ಲಿಸುವಂತೆ ನ್ಯಾಯಾಲಯದ ಉಲ್ಲೇಖದನ್ವಯ ಕೋರಲಾಗಿದೆ. ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಿಂದ ವಿಸ್ಲಿಂಗ್ ವುಡ್ ರೆಸಾರ್ಟನ ರೆವಿನ್ಯೂ, ಅರಣ್ಯ ಭೂಮಿ,ನದಿ ಒತ್ತುವರಿ ತೆರವುಗೊಳಿಸುವ ಕಾರ್ಯ ನಡೆದಿದೆ. ಇದರ ಬೆನ್ನಲ್ಲೆ ಹೈಕೋರ್ಟ ಭೂಸ್ವಾಧೀನ ಹಾಗೂ ಎನ್.ಎ. ಕುರಿತು ವರದಿ ಕೇಳಿರುವುದು ಪ್ರವಾಸೋದ್ಯಮಿಗಳಿಗೆ ನಡುಕ ತಂದಿದೆ.

Exit mobile version