ನವದೆಹಲಿ: ಆಪರೇಷನ್ ಸಿಂದೂರ ಹೆಸರಿನಲ್ಲಿ ಪಹಲ್ಗಾಮ್ ದಾಳಿ ಬಳಿಕ ಭಾರತ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿತ್ತು. ಈಗ ಈ ಕಾರ್ಯಾಚರಣೆಯನ್ನು ಶಾಲಾ ಪುಸ್ತಕಗಳಲ್ಲಿ ಪರಿಚಯಿಸಲಾಗಿದೆ. ಇದಕ್ಕಾಗಿಯೇ ಎರಡು ಹೊಸ ಮಾಡ್ಯೂಲ್‌ಗಳನ್ನು ಎನ್‌ಸಿಇಆರ್‌ಟಿ ಪರಿಚಯಿಸಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ 3 ರಿಂದ 12ನೇ ತರಗತಿಗಳಿಗೆ ಆಪರೇಷನ್ ಸಿಂದೂರ ಕುರಿತು ಎರಡು ವಿಶೇಷ ಮಾಡ್ಯೂಲ್ (ಘಟಕ)ಗಳನ್ನು ಪರಿಚಯಿಸಿದೆ. ಈ ಕಾರ್ಯಾಚರಣೆಯನ್ನು ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿ ಮಾತ್ರವಲ್ಲದೆ ಶಾಂತಿಯನ್ನು ರಕ್ಷಿಸುವ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ ಜೀವಗಳನ್ನು ಗೌರವಿಸುವ ಪ್ರತಿಜ್ಞೆಯಾಗಿದೆ ಎಂದು ವಿವರಿಸಲಾಗಿದೆ.
ಈ ಮಾಡ್ಯೂಲ್‌ನಲ್ಲಿ ಕಾರ್ಯಾಚರಣೆಯನ್ನು ವಿವರವಾಗಿ ವಿವರಿಸುವುದಲ್ಲದೇ, ಭಾರತದ ಭದ್ರತೆ ಮತ್ತು ಶಾಂತಿಗೆ ಅದು ಎಷ್ಟು ಮುಖ್ಯವಾಗಿತ್ತು? ಎಂಬುದನ್ನು ಮಕ್ಕಳಿಗೆ ವಿವರಿಸಲಾಗಿದೆ. ಪಹಲ್ಗಾಮ್ ದಾಳಿ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಯಾವುದೇ ಪಾತ್ರ ವಹಿಸಿಲ್ಲದಿದ್ದರೂ, ಅದನ್ನು ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದ ನೇರ ಆದೇಶದ ಮೇರೆಗೆ ನಡೆಸಲಾಗಿದೆ ಎಂದು ಮಾಡ್ಯೂಲ್ ಹೇಳುತ್ತವೆ.
ಭಾರತವು ಮೇ 7, 2025ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ವಾಯುದಾಳಿಗಳನ್ನು ನಡೆಸಿತು. ಅಂತಿಮವಾಗಿ ಆಯ್ಕೆ ಮಾಡಿ ಅನುಮೋದಿಸಲಾದ ಒಂಬತ್ತು ಗುರಿಗಳಲ್ಲಿ, ಏಳು ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ನಾಶಗೊಳಿಸಿತು.
ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಲಾಯಿತು. ಈ ಕಾರ್ಯಾಚರಣೆಯು ಭಾರತವು ಭಯೋತ್ಪಾದಕರ ಮಾಸ್ಟರ್ ಮೈಂಡ್‌ಗಳನ್ನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ತೋರಿಸಿದೆ ಎಂದು ಅದು ಹೇಳಿದೆ. ಸ್ಥಳೀಯವಾಗಿ ತಯಾರಿಸಿದ ಬ್ರಹ್ಮೋಸ್, ರುದ್ರಮ್, ಹಾಕ್ ಮತ್ತು ಈಗಲ್ ಡ್ರೋನ್ ಮತ್ತು ಸ್ಮಾರ್ಟ್ ಫಿರಂಗಿಗಳು ಮೇಕ್ ಇನ್ ಇಂಡಿಯಾದ ಯಶಸ್ಸನ್ನು ಎತ್ತಿ ತೋರಿಸಿದವು ಎಂದು ಹೇಳಿದೆ.
ಎರಡು ಮಾಡ್ಯೂಲ್‌ಗಳನ್ನು ಪೂರ್ವಸಿದ್ಧತಾ ಮತ್ತು ಮಧ್ಯಮ ಹಂತಗಳಿಗೆ ಅಥವಾ 3 ರಿಂದ 8ನೇ ತರಗತಿಗಳಿಗೆ “Operation Sindoor A Saga of Valour ಎಂದು ಹೆಸರಿಸಲಾಗಿದೆ. ದ್ವಿತೀಯ ಹಂತ ಅಥವಾ 9 ರಿಂದ 12ನೇ ತರಗತಿಗಳಿಗೆ ‘Operation Sindoor: A Mission of Honour and Bravery’ ಎಂದು ಹೆಸರಿಸಲಾಗಿದೆ. ಶಾಲಾ ಮಕ್ಕಳಲ್ಲಿ ಭಾರತದ ಮಿಲಿಟರಿ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮಾಡ್ಯೂಲ್‌ಗಳನ್ನು ರಚಿಸಲಾಗಿದ್ದು, ಎರಡನ್ನೂ ಸಂವಾದಾತ್ಮಕ ತರಗತಿ ಕಲಿಕೆಗಾಗಿ ವಿನ್ಯಾಸಗೊಳಿಸಲಾಗಿದೆ.
ಆಪರೇಷನ್ ಸಿಂದೂರ ಅನ್ನು ‘ಶೌರ್ಯ, ತಂತ್ರ ಮತ್ತು ನಾವೀನ್ಯತೆಯ ವಿಜಯ ಎಂದು ಕರೆದಿರುವ ಮಾಡ್ಯೂಲ್‌ಗಳು, ಭಾರತದ ವಾಯು ರಕ್ಷಣಾ ವ್ಯವಸ್ಥೆಗಳಾದ S-400 ಅನ್ನು ಸಹ ಉಲ್ಲೇಖಿಸುತ್ತವೆ. ಇದು ಶತ್ರು ವಿಮಾನಗಳನ್ನು ದೂರದವರೆಗೆ ಹೊಡೆದುರುಳಿಸಿತು ಮತ್ತು ಶತ್ರು ಡ್ರೋನ್‌ಗಳಿಂದ ಹಾನಿಯಾಗದಂತೆ ತಡೆಯಿತು ಎಂದಿದೆ.
ದೇಶಾದ್ಯಂತ ಜನರು ಒಗ್ಗಟ್ಟಿನಿಂದ ನಿಂತಿದ್ದಾರೆ ಎಂಬುದನ್ನು ಈ ಮಾಡ್ಯೂಲ್‌ಗಳು ಎತ್ತಿ ತೋರಿಸುತ್ತವೆ. ಹೈದರಾಬಾದ್, ಲಕ್ಕೋ ಮತ್ತು ಭೋಪಾಲ್‌ನಲ್ಲಿರುವ ಮುಸ್ಲಿಂ ಸಮುದಾಯಗಳು ಕಪ್ಪು ಪಟ್ಟಿಗಳನ್ನು ಧರಿಸಿ ದಾಳಿಯನ್ನು ಬಹಿರಂಗವಾಗಿ ಖಂಡಿಸಿದವು. ಕಾಶ್ಮೀರದಲ್ಲಿ ಅಂಗಡಿಯವರು ಅಂಗಡಿಗಳನ್ನು ಮುಚ್ಚಿ ಪ್ರತಿಭಟಿಸಿದರು.
ಗಡಿಯ ಸಮೀಪವಿರುವ ಹಳ್ಳಿಗಳು ಬಲವಾದ ಕ್ರಮಕ್ಕೆ ಒತ್ತಾಯಿಸಿ ಸಶಸ್ತ್ರ ಪಡೆಗಳನ್ನು ಬೆಂಬಲಿಸಿದವು. ಅಪರೇಷನ್ ಸಿಂದೂರ ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ ಶಾಂತಿಯನ್ನು ರಕ್ಷಿಸುವ ಮತ್ತು ಕಳೆದುಕೊಂಡ ಜೀವಗಳನ್ನು ಗೌರವಿಸುವ ಭರವಸೆಯಾಗಿತ್ತು ಎಂದು ಅದು ಹೇಳಿದೆ.