ಹುಬ್ಬಳ್ಳಿ: ಆಧುನಿಕ ಜೀವನ ಶೈಲಿಯಲ್ಲಿ ಕೆಲಸದ ಮಾದರಿ ವೇಗವಾಗಿ ಬದಲಾಗುತ್ತಿದ್ದಂತೆ, “ಕೂತು ಕೆಲಸ” ಅಥವಾ “ಸೆಡೆಂಟರಿ ವರ್ಕ್‌ಸ್ಟೈಲ್” ಜನರ ಆರೋಗ್ಯಕ್ಕೆ ಹೊಸ ಸವಾಲುಗಳನ್ನು ಎಸೆದುಬಿಟ್ಟಿದೆ. ಕಛೇರಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡುವ ಅಭ್ಯಾಸ ಇದೀಗ ಬಾಲ ಮೂಳೆಯ (Coccyx) ನೋವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳಷ್ಟೇ ಅಲ್ಲದೆ ಸಣ್ಣ ಹಾಗೂ ಮಧ್ಯಮ ಮಟ್ಟದ ಕಚೇರಿಗಳೂ ಸಹ ದೀರ್ಘ ಸಮಯದ ಕೆಲಸದ ಮಾದರಿಯನ್ನು ಅನುಸರಿಸುತ್ತಿರುವುದರಿಂದ ಈ ರೀತಿಯ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ.
ಬೆನ್ನುಮೂಳೆಯ ಕೆಳಭಾಗದಲ್ಲಿ ಇರುವ ಚಿಕ್ಕ ತ್ರಿಕೋನಾಕಾರದ ಮೂಳೆ — ಅದೇ ಬಾಲ ಮೂಳೆ (Coccyx). ಇದರಲ್ಲಿ ಉಂಟಾಗುವ ಉರಿಯೂತ ಅಥವಾ ಒತ್ತಡದಿಂದ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ “ಕಾಕ್ಸಿಡೈನಿಯಾ” (Coccydynia) ಎಂದು ಕರೆಯಲಾಗುತ್ತದೆ.
ತಜ್ಞರ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಈ ತೊಂದರೆ ಐದು ಪಟ್ಟು ಹೆಚ್ಚು ಕಂಡುಬರುತ್ತದೆ. ಇದಕ್ಕೆ ಹೆರಿಗೆಯ ಸಮಯದ ಒತ್ತಡ, ಹಾರ್ಮೋನ್ ಬದಲಾವಣೆ ಹಾಗೂ ಶರೀರದ ರಚನೆಯ ವ್ಯತ್ಯಾಸ ಕಾರಣವಾಗಬಹುದು. ಹದಿಹರೆಯದವರು ಮತ್ತು ವಯಸ್ಕರು ಮಕ್ಕಳಿಗಿಂತ ಹೆಚ್ಚಾಗಿ ಈ ನೋವನ್ನು ಅನುಭವಿಸುತ್ತಾರೆ.
ಪ್ರಮುಖ ಕಾರಣಗಳು: ದೀರ್ಘಕಾಲ ಕುಳಿತು ಕೆಲಸ ಮಾಡುವುದು. ಕಠಿಣ ಕುರ್ಚಿ ಅಥವಾ ತಪ್ಪಾದ ಕುಳಿತುಕೊಳ್ಳುವ ಭಂಗಿ. ಕಛೇರಿಯಲ್ಲಿ ದೇಹದ ಚಲನೆಯನ್ನು ಕಡಿಮೆ ಮಾಡುವುದು. ಸಣ್ಣ ಅಪಘಾತಗಳು
ತಡೆಗಟ್ಟುವ ಮಾರ್ಗಗಳು: ತಜ್ಞರ ಸಲಹೆಯಂತೆ, ಪ್ರತಿ 30–40 ನಿಮಿಷಕ್ಕೊಮ್ಮೆ ಕುರ್ಚಿಯಿಂದ ಎದ್ದು ಚಲಿಸುವುದು, ವ್ಯಾಯಾಮ ಮಾಡುವುದು, ಸರಿಯಾದ ಬೆಂಬಲ ಇರುವ ಕುರ್ಚಿಯನ್ನು ಬಳಸುವುದು, ಹಾಗೂ ಸೂಕ್ತ ಭಂಗಿಯಲ್ಲಿ ಕುಳಿತುಕೊಳ್ಳುವುದು ಮುಖ್ಯ. ನೋವು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ವ್ಯಾಯಾಮ ಜೀವನಶೈಲಿಯ ಅವಿಭಾಜ್ಯ ಅಂಗವಾಗಬೇಕು: ಆಫೀಸ್‌ನಲ್ಲಿ ನಿರಂತರವಾಗಿ ಕೂತಿರುವ ಬದಲು ಸಣ್ಣ ಸಮಯದ ವಿಶ್ರಾಂತಿ, ಚಲನೆ ಹಾಗೂ ವ್ಯಾಯಾಮ ಜೀವನಶೈಲಿಯ ಅವಿಭಾಜ್ಯ ಅಂಗವಾಗಬೇಕು ಎಂದು ಆಯುರ್ವೇದ ವೈದ್ಯರಾದ ಡಾ ಅಶ್ವಿನಿ ಧೋಂಗಡಿ ಅವರು ಸಲಹೆ ನೀಡಿದ್ದಾರೆ.
