ಬೆಂಗಳೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಹೂವಿನ ಹಾರ ಖ್ಯಾತಿಯ ನಿರ್ದೇಶಕ ಸಿದ್ದೇಗೌಡ ಜಿ.ಬಿ.ಎಸ್ ನಿರ್ದೇಶಿಸಿರುವ ಚಿತ್ರ ಕುಂಟೆಬಿಲ್ಲೆ. ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರತಂಡ, ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಯದು ಮುಖ್ಯಭೂಮಿಕೆಯಲ್ಲಿದ್ದು, ಕೃಷ್ಣ ತುಳಸಿ ನಟಿ ಮೇಘಶ್ರೀ ಅವರಿಗೆ ಜೋಡಿಯಾಗಿದ್ದಾರೆ.
ಇದೊಂದು ನೈಜ ಘಟನೆಯಾಧಾರಿತ ಸಿನಿಮಾ. ಇಡೀ ಚಿತ್ರಕಥೆ ಅದೊಂದು ಘಟನೆ ಸುತ್ತ ಇದೆ. ಅದನ್ನು ತೆರೆಯ ಮೇಲೆ ನೋಡಿದರೆ ಚೆಂದ. `ಕುಂಟೆಬಿಲ್ಲೆ’ ಶೀರ್ಷಿಕೆ ನೋಡಿ ಇದು ಮಕ್ಕಳ ಸಿನಿಮಾ ಎಂದು ಕೇಳುವವರು ಇದ್ದಾರೆ. ಆದರೆ, ಇದು ಇಬ್ಬರು ಪ್ರೇಮಿಗಳ ಸುತ್ತ ನಡೆಯುವ ಕಥೆ.
ಈ ಆಧುನೀಕರಣದಲ್ಲಿ ಪ್ರೀತಿಗೆ ಕುಟುಂಬ ಹಾಗೂ ಸಮಾಜದಿಂದ ಹಲವಾರು ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತವೆ. ಇಂತಹ ಸಮಯದಲ್ಲಿ ಪ್ರೇಮಿಗಳು ಮುಂದಿನ ನಡೆ ಏನು ಎಂಬುದೇ ಚಿತ್ರದ ಒನ್‌ಲೈನ್. ಗ್ರಾಮೀಣ ಹಿನ್ನೆಲೆಯಲ್ಲಿ ಮೂಡಿರುವ ಚಿತ್ರ. ಪ್ರೀತಿ, ಪ್ರೇಮದ ಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕ್ರೈಂ ಅಂಶಗಳೂ ಇವೆ. ಹಾಗಾಗಿ, ಇದು ಹೊಸ ಬಗೆಯ ಸಿನಿಮಾ ಅಂತನ್ನಿಸಬಹುದು.
ʻಮೈಸೂರು, ಗುಂಡ್ಲುಪೇಟೆ, ಎಚ್.ಡಿ.ಕೋಟೆ ಮುಂತಾದೆಡೆ ಶೂಟಿಂಗ್ ಮಾಡಿದ್ದೇವೆ. ಸೆಪ್ಟೆಂಬರ್ 26 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲಿದ್ದೇವೆ. ಹೊಸ ಅನುಭವ ನೀಡುವ ಚಿತ್ರವಿದು’ ಎನ್ನುತ್ತಾರೆ ಸಿದ್ದೇಗೌಡ.
ಯದು ಹಾಗೂ ಮೇಘಶ್ರೀ ಜತೆ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಶಂಕರ್ ಅಶ್ವತ್ಥ್, ಭವಾನಿ ಪ್ರಕಾಶ್ ಮುಂತಾದವರು ಕುಂಟೆಬಿಲ್ಲೆ ಚಿತ್ರದ ತಾರಾಗಣದಲ್ಲಿದ್ದಾರೆ.