Home ಸಿನಿ ಮಿಲ್ಸ್ ಒಟಿಟಿ ವೇದಿಕೆಗಳ ನಿರ್ಲಕ್ಷ್ಯ: ಚಿತ್ರರಂಗದ ಬೆನ್ನಿಗೆ ನಿಂತ ರಾಜ್ಯ ಸರ್ಕಾರ

ಒಟಿಟಿ ವೇದಿಕೆಗಳ ನಿರ್ಲಕ್ಷ್ಯ: ಚಿತ್ರರಂಗದ ಬೆನ್ನಿಗೆ ನಿಂತ ರಾಜ್ಯ ಸರ್ಕಾರ

0

ಕನ್ನಡ ಚಲನಚಿತ್ರೋದ್ಯಮವು ಬಹುಕಾಲದಿಂದ ಒಟಿಟಿ ವೇದಿಕೆಗಳ ನಿರ್ಲಕ್ಷ್ಯದಿಂದ ಬಳಲುತ್ತಿದೆ. ಸ್ಟಾರ್‌ ನಟರ ಸಿನಿಮಾಗಳಿಗೂ ಸಹ ಉತ್ತಮ ಬೆಲೆ ಸಿಗದೆ, ಸಣ್ಣ ಮತ್ತು ಮಧ್ಯಮ ಬಜೆಟ್‌ನ ಚಿತ್ರಗಳಂತೂ ಒಟಿಟಿಯಲ್ಲಿ ಸ್ಥಾನ ಪಡೆಯುವುದು ಕಷ್ಟಸಾಧ್ಯವಾಗಿತ್ತು. ಈ ಸಮಸ್ಯೆಗೆ ದಶಕಗಳಿಂದಲೂ ಕೇಳಿಬರುತ್ತಿದ್ದ ಆಳಲಿಗೆ ರಾಜ್ಯ ಸರ್ಕಾರವು ಇದೀಗ ಮಹತ್ವದ ಯೋಜನೆಯೊಂದನ್ನು ಹಾಕಿಕೊಂಡಿದೆ.

ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಸರ್ಕಾರವೇ ಸ್ವತಃ ಒಂದು ಒಟಿಟಿ ವೇದಿಕೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತು ನಿರ್ಮಾಪಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಯೋಜನೆಯು ಕರ್ನಾಟಕ ಸರ್ಕಾರದ ಹೊಸ ಆಲೋಚನೆಯೇನಲ್ಲ. ಹಿಂದಿನ ಬಜೆಟ್‌ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾಪಿಸಿದ್ದರು.

ಈಗ, ಆ ಕನಸನ್ನು ಕಾರ್ಯರೂಪಕ್ಕೆ ತರಲು ಸರ್ಕಾರವು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಒಟಿಟಿ ವೇದಿಕೆಯ ನಿರ್ಮಾಣ, ತಾಂತ್ರಿಕ ಕಾರ್ಯವೈಖರಿ, ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳು ಮತ್ತು ಅನುದಾನದ ಕುರಿತು ವಿವರವಾದ ನೀಲನಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಸಮಿತಿಯಲ್ಲಿ ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಖ್ಯಾತ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಮತ್ತು ರಾಕ್‌ಲೈನ್ ವೆಂಕಟೇಶ್, ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್, ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ. ಇವರ ಅನುಭವ ಮತ್ತು ಜ್ಞಾನ ಕನ್ನಡ ಒಟಿಟಿ ವೇದಿಕೆಗೆ ಬಲ ತುಂಬಲಿದೆ.

ಕೆಲವು ವಾರಗಳ ಹಿಂದೆ, ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರವನ್ನು ಜಾರಿಗೊಳಿಸಿತ್ತು, ಇದರಿಂದ ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಕೇವಲ 200 ರೂಪಾಯಿಗೆ ಸಿನಿಮಾ ವೀಕ್ಷಿಸಲು ಸಾಧ್ಯವಾಯಿತು. ಆದರೆ, ಕೆಲವು ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿ ಈ ಆದೇಶಕ್ಕೆ ತಡೆ ತಂದಿದ್ದವು. ಆದರೂ, ಸರ್ಕಾರವು ಕನ್ನಡ ಚಿತ್ರರಂಗದ ಒಳಿತಿಗಾಗಿ ಮತ್ತಷ್ಟು ಹೊಸ ಹೆಜ್ಜೆಗಳನ್ನು ಇಡಲು ಬದ್ಧವಾಗಿದೆ ಎಂಬುದಕ್ಕೆ ಈ ಒಟಿಟಿ ಯೋಜನೆ ಸಾಕ್ಷಿಯಾಗಿದೆ.

ನೆರೆಯ ಕೇರಳದಲ್ಲಿ ಈಗಾಗಲೇ ‘ಸಿ ಸ್ಪೇಸ್’ ಎಂಬ ಸರ್ಕಾರಿ ಒಟಿಟಿ ವೇದಿಕೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಮಲಯಾಳಂ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದ್ದು, ʼಪೇ-ಪರ್-ವ್ಯೂʼ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗಳಿಸಿದ ಆದಾಯದಲ್ಲಿ 50% ಅನ್ನು ನಿರ್ಮಾಪಕರಿಗೆ ಹಂಚಲಾಗುತ್ತದೆ. ಇದೇ ಮಾದರಿಯನ್ನು ಕನ್ನಡ ಒಟಿಟಿ ವೇದಿಕೆಯಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

ಇದು ಕನ್ನಡ ಸಿನಿಮಾಗಳಿಗೆ ಉತ್ತಮ ಪ್ರದರ್ಶನ ವೇದಿಕೆ ಒದಗಿಸುವುದಲ್ಲದೆ, ನಿರ್ಮಾಪಕರಿಗೆ ಆರ್ಥಿಕವಾಗಿ ಬಲ ತುಂಬಿ, ಇನ್ನಷ್ಟು ಗುಣಮಟ್ಟದ ಸಿನಿಮಾಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತದೆ. ಸರ್ಕಾರಿ ಒಟಿಟಿ ವೇದಿಕೆಯು ಕನ್ನಡ ಚಿತ್ರರಂಗದ ಸುಸ್ಥಿರ ಬೆಳವಣಿಗೆಗೆ ದಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version