
ಆಲಮಟ್ಟಿಯಲ್ಲಿ ಜಲ ಮನೋರಂಜನಾ ಉದ್ಯಾನವನ ಲೋಕಾರ್ಪಣೆ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ–3ರ ಅನುಷ್ಠಾನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಭಾನುವಾರ ಆಲಮಟ್ಟಿಯಲ್ಲಿ ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ಸಹಯೋಗದಲ್ಲಿ ನಿರ್ಮಿತ ‘ಜಲ ಮನೋರಂಜನಾ ಉದ್ಯಾನವನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಭಾರೀ ದಾಳಿ: ಐಆರ್ಜಿಸಿ ಪ್ರಧಾನ ಕಚೇರಿ ಧ್ವಂಸ, 9 ನೌಕಾ ಹಡಗುಗಳ ನಾಶ
ಡಿಸ್ನಿ ಪಾರ್ಕ್ ಮಾದರಿಯ ಸೌಲಭ್ಯ: ಜಲ ಮನೋರಂಜನಾ ಉದ್ಯಾನವನ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು ಆಲಮಟ್ಟಿಯಲ್ಲಿ ನಿರ್ಮಿತ ಜಲ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ವಿವಿಧ ಜಲಕ್ರೀಡೆಗಳು, ಮಕ್ಕಳಿಗೆ ವಿಶೇಷ ಆಟೋಪಕರಣಗಳು ಹಾಗೂ ಕುಟುಂಬ ಸಮೇತ ವಿಶ್ರಾಂತಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದು ಕೇವಲ ಮನರಂಜನಾ ಕೇಂದ್ರವಷ್ಟೇ ಅಲ್ಲದೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜಿಲ್ಲೆಯ ಆರ್ಥಿಕತೆಗೆ ಉತ್ತೇಜನ ನೀಡುವ ಯೋಜನೆಯಾಗಿದೆ.
ಮುಂದಿನ ದಿನಗಳಲ್ಲಿ ಡಿಸ್ನಿ ಪಾರ್ಕ್ ಮಾದರಿಯ ಸೌಲಭ್ಯಗಳು, ಯಾತ್ರಿನಿವಾಸ, ಡಾರ್ಮಿಟರಿ, ಕೇಬಲ್ ಕಾರ್, ಪ್ಲಾನೇಟರಿಯಂ, ಡ್ಯಾಶ್ ಕಾರ್ ಹಾಗೂ ಮ್ಯೂಸಿಕಲ್ ಫೌಂಟೇನ್ ನಿರ್ಮಾಣದ ಯೋಜನೆಗಳಿವೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿದ ಧಾರವಾಡದವರ ನೆರವಿಗೆ ಹೆಲ್ಪ್ಲೈನ್
ಯುಕೆಪಿ ಹಂತ–3 ಅನುಷ್ಠಾನಕ್ಕೆ ಭರವಸೆ: ಯುಕೆಪಿ 3ನೇ ಹಂತದ ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದೂಡದೇ ಮುಂದಿನ 2–3 ವರ್ಷಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್ನಿಂದ 524 ಮೀಟರ್ವರೆಗೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಈ ಮೂಲಕ ಈಗಿರುವ 130 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವು 233 ಟಿಎಂಸಿಗೆ ಏರಿಕೆಯಾಗಲಿದೆ ಎಂದು ವಿವರಿಸಿದರು.
ಇದರಿಂದ ರಾಜ್ಯದ ಪಾಲಿನ ಶೇ.90ರಷ್ಟು ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿದ್ದು, ರೈತರಿಗೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಲಿದೆ ಎಂದರು.
ರೈತರಿಗೆ ಲಾಭ – ಭೂಮುಳುಗಡೆ ಸವಾಲು: ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ಸುಮಾರು 75 ಸಾವಿರ ಎಕರೆ ಭೂಮಿ ಮುಳುಗಡೆಯಾಗಲಿದೆ ಹಾಗೂ 20 ಹಳ್ಳಿಗಳು ಸ್ಥಳಾಂತರಗೊಳ್ಳಲಿವೆ. ಯೋಜನೆಗೆ ಭಾರಿ ಅನುದಾನ ಅಗತ್ಯವಿದ್ದು, ಅವಳಿ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಸಚಿವ ಸಂಪುಟದಲ್ಲಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಬ್ರಿಜೇಶ್ ಕುಮಾರ್ ತೀರ್ಪಿನ ಅನ್ವಯ 6 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಬರಲಿದೆ. ಹೆಚ್ಚುವರಿ 90 ಟಿಎಂಸಿ ನೀರಿನಿಂದ ಸುಮಾರು 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ.
ರಾಷ್ಟ್ರೀಯ ಯೋಜನೆಗೆ ಒತ್ತಾಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಪಾಟೀಲ ಮಾತನಾಡಿ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು. ಆಲಮಟ್ಟಿ ಜಲಾಶಯ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ನಾಲ್ಕು ರಾಜ್ಯಗಳಿಗೆ ಸಹಾಯಕವಾಗುವ ಬೃಹತ್ ಯೋಜನೆಯಾಗಿದೆ. ಆದ್ದರಿಂದ ರಾಷ್ಟ್ರೀಯ ಹುದ್ದೆ ನೀಡುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.
ಸಚಿವ ಎಂ.ಬಿ. ಪಾಟೀಲ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಆಲಮಟ್ಟಿಯ ಜಲವಿನೋದ ಉದ್ಯಾನದಲ್ಲಿ ಸಂಭ್ರಮ ಹರಿದಾಡಲಿದೆ. ಬಣ್ಣ ಬಣ್ಣದ ಜಲಸ್ಲೈಡ್ ಗಳು, ಹರಿಯುವ ನೀರಿನ ಝರಿಗಳು, ಆಕರ್ಷಕ ವಿನ್ಯಾಸಗಳು ಎಲ್ಲವೂ ಸೇರಿ ಕುಟುಂಬ ಸಮೇತ ಸಂಭ್ರಮಿಸಲು ಅದ್ಭುತ ವಾತಾವರಣ ಸೃಷ್ಟಿಸಿವೆ. ಬೇಸಿಗೆಗೆ ತಂಪಿನ ತಾಣವಾಗಿ, ಮನರಂಜನೆಗೆ ಹೊಸ ವಿಳಾಸವಾಗಿ ಆಲಮಟ್ಟಿ ವಾಟರ್ ಪಾರ್ಕ್ ಗಮನಸೆಳೆಯುತ್ತಿದೆ. ಆನಂದ, ಆಟ, ಚೈತನ್ಯ ಎಲ್ಲವೂ ಒಂದೇ ವೇದಿಕೆಯಲ್ಲಿ ಸಿಗಲಿದೆ ಎಂದಿದ್ದಾರೆ.