Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ: ಪ್ರವಾಸೋದ್ಯಮಕ್ಕೆ ಹದಗೆಟ್ಟ ರಸ್ತೆ ಶಾಪ, ಪ್ರವಾಸಿಗರ ಪರದಾಟ

ದಾಂಡೇಲಿ: ಪ್ರವಾಸೋದ್ಯಮಕ್ಕೆ ಹದಗೆಟ್ಟ ರಸ್ತೆ ಶಾಪ, ಪ್ರವಾಸಿಗರ ಪರದಾಟ

0

ದಾಂಡೇಲಿಯಲ್ಲಿ ಕಳೆದ ಮೂರು ತಿಂಗಳಿಂದ ಜಲಸಾಹಸ ಕ್ರೀಡೆಗಳ ನಿಷೇಧದಿಂದ ಪ್ರವಾಸೋದ್ಯಮಿಗಳು ಮತ್ತು ಅದರ ಅವಲಂಬಿತರು ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆಗೆ ಪರದಾಡುವಂತಾಗಿತ್ತು. ಈಗ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಜಲಕ್ರೀಡೆಗಳಿಗೆ ಅನುಮತಿ ನೀಡಿದ್ದು, ಪ್ರವಾಸೋದ್ಯಮ ಚಿಗುರೊಡೆಯುತ್ತಿದೆ, ಪ್ರವಾಸಿಗರು ದಾಂಡೇಲಿಯತ್ತ ಮುಖ ಮಾಡಿದ್ದಾರೆ.

ಬರುವ ದಿನಗಳಲ್ಲಿ ದಸರಾ ಮತ್ತು ಶಾಲಾ ರಜಾದಿನಗಳು ಪ್ರಾರಂಭವಾಗಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರಲಿದ್ದಾರೆ. ಆದರೆ, ದಾಂಡೇಲಿ ಪ್ರವೇಶಿಸುವ ಎಲ್ಲ ರಸ್ತೆಗಳು ಹದಗೆಟ್ಟಿವೆ. ದಾಂಡೇಲಿ ಮತ್ತು ಜೋಯಡಾ ತಾಲ್ಲೂಕುಗಳ ನಗರ ಹಾಗೂ ಗ್ರಾಮೀಣ ರಸ್ತೆಗಳೆಲ್ಲ ದೊಡ್ಡ ಗುಂಡಿಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ಕಷ್ಟಕರವಾಗಿದೆ. ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಬಂದ ಪ್ರವಾಸಿಗರು ಹದಗೆಟ್ಟ ರಸ್ತೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಾರವಾರದಿಂದ ದಾಂಡೇಲಿ, ಹಳಿಯಾಳದಿಂದ ದಾಂಡೇಲಿ, ರಾಮನಗರದಿಂದ ದಾಂಡೇಲಿ, ಶಿರಸಿ, ಯಲ್ಲಾಪುರದಿಂದ ದಾಂಡೇಲಿಯ ಎಲ್ಲ ಮುಖ್ಯ ರಸ್ತೆಗಳು ಹದಗೆಟ್ಟು ದೊಡ್ಡ ಗುಂಡಿಗಳು ಮತ್ತು ಕೆಸರಿನಿಂದ ಕೂಡಿರುವುದು ವಾಹನ ಚಾಲಕರಿಗೆ ಹಾಗೂ ಪ್ರವಾಸಿಗರಿಗೆ ಸಾಕಷ್ಟು ಬೇಸರ ತಂದಿದೆ.

ಹಲವರು ಅಪಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದರೆ, ಇನ್ನೂ ಕೆಲವರ ಆರೋಗ್ಯ ಹದಗೆಟ್ಟು ಚಿಕಿತ್ಸೆ ಪಡೆದಿದ್ದಾರೆ. ಎಡೆಬಿಡದೆ ಸುರಿದ ಮಳೆಯ ಅತಿವೃಷ್ಟಿಯಿಂದ ರಸ್ತೆಗಳೆಲ್ಲ ಕಿತ್ತುಹೋಗಿ ಗುಂಡಿಮಯವಾಗಿವೆ. ಗ್ರಾಮೀಣ ರಸ್ತೆಗಳಂತೂ ತೀರಾ ಹದಗೆಟ್ಟು ಕೆಸರಿನಿಂದ ತುಂಬಿವೆ.

ಮಳೆ ನಿಲ್ಲದ ಹೊರತು ತಾತ್ಕಾಲಿಕ ರಿಪೇರಿ ಕೂಡ ಸಾಧ್ಯವಾಗುತ್ತಿಲ್ಲ. ಕೆಲವೆಡೆ ರಸ್ತೆ ಗುಂಡಿಗಳಿಗೆ ಖಡಿ, ಮಣ್ಣುಗಳನ್ನು ಹಾಕಿ ಮುಚ್ಚಲಾಗುತ್ತಿದ್ದರೂ, ನೂರಾರು ಸಂಖ್ಯೆಯಲ್ಲಿ ಓಡಾಡುವ ವಾಹನಗಳಿಂದ ಮತ್ತೆ ಕೆಸರು ಗುಂಡಿಗಳಾಗಿ ಮಾರ್ಪಡುತ್ತಿವೆ.

ಸಂಬಂಧಪಟ್ಟ ಶಾಸಕರ ಗಮನಕ್ಕೆ ತಂದರೆ, ಮಳೆ ನಿಂತ ನಂತರವೇ ರಸ್ತೆ ಕಾಮಗಾರಿ ನಡೆಸಲು ಸಾಧ್ಯವೆಂದು ಹೇಳಿದ್ದಾರೆ. ಅತಿವೃಷ್ಟಿಯಾಗಿ ಸುರಿದ ಮಳೆಯಿಂದ ಗುಂಡಿ ಬಿದ್ದಿದೆ. ಅದನ್ನು ಮುಚ್ಚಿದರೂ ಮತ್ತೆ ಅದೇ ಪರಿಸ್ಥಿತಿ ಮರುಕಳಿಸುತ್ತದೆ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯು ಜಿಲ್ಲೆಯಾದ್ಯಂತ ಹದಗೆಟ್ಟಿರುವ ರಸ್ತೆಗಳಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ನೀಡಿದೆ.

ಸರ್ಕಾರ ಮಳೆ ನಿಂತ ನಂತರ ರಸ್ತೆಗಳ ಕಾಮಗಾರಿ ನಡೆಸಲಿದೆ. ಪ್ರವಾಸೋದ್ಯಮ ಬೆಳವಣಿಗೆಗಾಗಿ ದಾಂಡೇಲಿಗೆ ಬರುವ ಎಲ್ಲ ಪ್ರಮುಖ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಬೇಕೆಂಬುದು ಸ್ಥಳೀಯ ಪ್ರವಾಸೋದ್ಯಮಿಗಳು ಮತ್ತು ಅವಲಂಬಿತ ಕಾರ್ಮಿಕರ ಆಗ್ರಹವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version