Home News ಮಲ್ಪೆ-ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ: ಅಪ್‌ಡೇಟ್ ಮಾಹಿತಿ

ಮಲ್ಪೆ-ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ: ಅಪ್‌ಡೇಟ್ ಮಾಹಿತಿ

ಮಲ್ಪೆಯಿಂದ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169-ಎ ಕಾಮಗಾರಿಯ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಆದಿ ಉಡುಪಿ ಭಾಗದಲ್ಲಿ ಸುಮಾರು ಒಂದು ವರ್ಷದಿಂದ ಕಾಮಗಾರಿ ಪ್ರಗತಿಯಲ್ಲಿದ್ದು 135 ಭೂ ಮಾಲೀಕರಿಗೆ ಸುಮಾರು 24.86 ಕೋಟಿ ರೂಪಾಯಿ ಪರಿಹಾರದ ಹಣ ಪಾವತಿಯಾಗಿದೆ.

ತಕರಾರು ಇರುವಲ್ಲಿ ನಾನೇ ಅಧಿಕಾರಿಗಳೊಂದಿಗೆ ಕರಾವಳಿ ಜಂಕ್ಷನ್‌ನಿಂದ ಮಲ್ಪೆಯವರೆಗೆ ವಿವಿಧ ಸ್ಥಳಗಳಿಗೆ ಹಲವು ಬಾರಿ ಭೇಟಿ ಕೊಟ್ಟು ಕಾಮಗಾರಿಗೆ ವೇಗ ನೀಡಲು ಪ್ರಯತ್ನಿಸಿದ್ದೆ. ಸುಮಾರು 90ರಷ್ಟು ಸಣ್ಣ ಸಣ್ಣ ಭೂಭಾಗಗಳ ಸರ್ವೆ ಮುಗಿಸಿ ಹಣ ಪಾವತಿಸಲು ವಿವಿಧ ಅಧಿಕಾರಿಗಳ ಸಭೆ ಕರೆದು ಪ್ರಗತಿ ಗಮನಿಸಿದ್ದೆ ಮತ್ತು ಸರ್ವೆ ಅಧಿಕಾರಿಗಳ ಮೂಲಕ ಈ ಬಗ್ಗೆ 3D ವರದಿ ಸಲ್ಲಿಸಲು ಸೂಚಿಸಿದ್ದೆ ಎಂದು ಹೇಳಿದ್ದಾರೆ.

ಸ್ವತಃ ನಾನೇ ಬೆಂಗಳೂರಿನ ಆರ್.ಓ. ಕಚೇರಿಗೆ ಭೇಟಿಕೊಟ್ಟು ಭೂಮಾಲಿಕರಿಗೆ ಹಣ ಪಾವತಿ ಮಾಡುವ ಬಗ್ಗೆ ಚರ್ಚಿಸಿದ್ದೆ. ಇಲ್ಲಿಯವರೆಗೆ ದಾಖಲೆಗಳನ್ನೇ ನೀಡದಿರುವ 70 ಭೂ ಮಾಲೀಕರನ್ನು ಸಂಪರ್ಕಿಸಿ ಕೋರ್ಟ್ ಮೂಲಕ ಠೇವಣಿ ಇರಿಸಿ ಕಾಮಗಾರಿ ಮುನ್ನಡೆಸಲು ಪ್ರಯತ್ನಿಸಲಾಗಿದೆ.

ಮರಗಳನ್ನು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಒಂದಷ್ಟು ಸಮಯ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಇದೀಗ ಮಲ್ಪೆ ಕರಾವಳಿ ಜಂಕ್ಷನ್ ಕಾಮಗಾರಿ ಮತ್ತು ಭೂ ಪರಿಹಾರದ ಚಟುವಟಿಕೆ ವೇಗವಾಗಿ ನಡೆಯುತ್ತಿದೆ. ಮುಂದುವರಿದು ಪರ್ಕಳದ ಕಾಮಗಾರಿಯ ಬಗ್ಗೆ ಪ್ರಮುಖ ಪತ್ರಿಕೆಗಳಲ್ಲಿಯೂ ಏಕಮುಖದ ವರದಿ ಪ್ರಕಟವಾದಂತಿದೆ ಎಂದು ಸಂಸದರು ತಿಳಿಸಿದ್ದಾರೆ.
ವಾಸ್ತವಿಕವಾಗಿ ಪರ್ಕಳದ ತಿರುವು ನೇರಗೊಳಿಸಿ ಕಾಮಗಾರಿ ನಡೆಯುತ್ತಿರುವಾಗ 11 ಮಂದಿ ಭೂ ಮಾಲೀಕರು ರಾಜ್ಯದ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿ ಒಂದು ವರ್ಷದ ಅವಧಿಯ ನಂತರ ತನಿಖೆಗೆ ದಿನಾಂಕ ನಿಗದಿಗೊಳಿಸಿತ್ತು.

ನನ್ನ ಗಮನಕ್ಕೆ ಬರುತ್ತಲೇ, ಪರ್ಕಳದ ರಸ್ತೆಯ ತಿರುವಿನಿಂದ ಆಗುವ ರಸ್ತೆ ಅಪಘಾತಗಳ ಅಂಕೆ ಸಂಖ್ಯೆಗಳನ್ನು ದಾಖಲೆ ಸಮೇತವಾಗಿ ರಾಷ್ಟ್ರೀಯ ಹೆದ್ದಾರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ, ಹೆದ್ದಾರಿಯ ಕಾಮಗಾರಿಯ ಅಗತ್ಯತೆ ವಿವರಿಸಿದ್ದೆವು. ನ್ಯಾಯಾಲಯ ಸರಕಾರ ಮಂಡಿಸಿದ ವಾದಗಳನ್ನು ಪುರಸ್ಕರಿಸಿ ತಡೆಯಾಜ್ಞೆಯನ್ನು ವರ್ಷದ ಒಳಗೆ ತೆರವುಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ ನೀಡಿತ್ತು. ಮತ್ತು 11 ಮಂದಿಗೆ ನ್ಯಾಯಾಲಯದ ಮೂಲಕ ರೂಪಾಯಿ 8 ಕೋಟಿ ಸರಕಾರದ ವತಿಯಿಂದ ಪರಿಹಾರ ಠೇವಣಿಯಾಗಿರಿಸಿದ್ದು ಪುನಃ ಕಾಮಗಾರಿ ಮುಂದುವರಿಸುತ್ತಿರುವಾಗಲೇ ಮತ್ತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಸಂಬಂಧಿತ ಭೂಮಾಲೀಕರು ತಂದಿದ್ದರು.

ನಾನೇ ಸ್ವತಃ ರಾಷ್ಟ್ರೀಯ ಹೆದ್ದಾರಿ ಪರವಾಗಿ ವಾದಿಸುವ ವಕೀಲರನ್ನು ಸಂಪರ್ಕಿಸಿ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸಿದ್ದೆ. ಸದ್ಯದಲ್ಲಿ ತೆರವಾಗುತ್ತದೆ ಎಂಬ ನಂಬಿಕೆ ಇದೆ. ನ್ಯಾಯಾಲಯದ ತಡೆಯಾಜ್ಞೆ ಮುಗಿಯುತ್ತಲೇ ಕೆಲಸ ಪ್ರಾರಂಭವಾಗುತ್ತದೆ. ಇವೆಲ್ಲವೂ ಕೆಲವೇ ತಿಂಗಳೀಚೆಗೆ ನಡೆದಿರುವ ಚಟುವಟಿಕೆಗಳು ಎಂದು ಸಂಸದರು ವಿವರಣೆ ನೀಡಿದ್ದಾರೆ.

ಕಲ್ಯಾಣಪುರದ ಅಂಡರ್ ಪಾಸ್ ಬಗ್ಗೆ ರಾಜಕೀಯ ಕಾರಣಗಳಿಗಾಗಿ ಟೀಕಿಸುವವರು ರಸ್ತೆ ಪ್ರದೇಶದಲ್ಲಿ ನಿಂತ ಬಂಡೆ ಹೊಡೆಯಲು ತಂದಿರುವ ನ್ಯಾಯಾಲಯದ ತಡೆಯಾಜ್ಞೆಯಿಂದ ಸ್ಪೋಟಕದ ಬದಲು ಬಂಡೆ ಕೊರೆದು ತೆಗೆಯಲು ಸಮಯವಾಗಿತ್ತು ಎಂಬುದನ್ನು ಗಮನಿಸಬೇಕಾಗಿದೆ. ಅದಾಗಿಯೂ ಇದೀಗ ರಸ್ತೆ ಸಂಚಾರಕ್ಕೆ ಸುಗಮವಾಗಿದ್ದು ಎರಡು ಕಡೆಯ ಮೇಲ್ ಸೇತುವೆ ಡಾಂಬರೀಕರಣವಾಗಿ ಸರಾಗ ಸಂಚಾರಕ್ಕೆ ತೆರೆದುಕೊಂಡಿದೆ ಎಂದು ಅರ್ಥೈಸಿಕೊಳ್ಳಬೇಕಾಗಿದೆ, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.

ಇಂದ್ರಾಳಿಯ ಮೇಲ್ಸೇತುವೆ ಸೇತುವೆಯ ಬಗ್ಗೆ ನಿರಂತರ ಪ್ರತಿಭಟನೆ, ಶವದ ಮೆರವಣಿಗೆ, ತಲೆ ಬೋಳಿಸುವಿಕೆ ನಡುವೆಯೂ ಹತ್ತಾರು ಬಾರಿ ಸ್ಥಳದಲ್ಲಿ ನಿಂತು ಕಾಮಗಾರಿಗೆ ವೇಗ ಕೊಟ್ಟಿದ್ದೆ. ನನ್ನನ್ನು ಟೀಕಿಸುವ ಹಿರಿಯ ಮನೋವೈದ್ಯರ ಸಹಿತ ಪ್ರತಿಭಟನಾಕಾರರು ಗಮನಿಸಬೇಕಾದ ವಿಷಯವೇನೆಂದರೆ, ಸಂಬಂಧಿತ ಇಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಎಫ್ಐಆರ್ ದಾಖಲಿಸಿ ಗಾರ್ಡರ್ ಕಾಮಗಾರಿಗೆ ಅವಧಿ ನಿಗದಿಕರಿಸಿದ್ದು ಸರಕಾರಿ ವ್ಯವಸ್ಥೆಯಲ್ಲಿಯೇ ಅಪರೂಪ.

ಇದೀಗ ಗಾರ್ಡರ್‌ಗಳ ಜೋಡಣೆಯಾಗಿ ಕ್ರಿಪ್ಸ್‌ ಗಳನ್ನು ತೆರವುಗೊಳಿಸಿ ಇಂದ್ರಾಳಿ ಮೇಲ್ಸೇತುವೆ ಕಾಂಕ್ರೀಟೀಕರಣಕ್ಕೆ ಅಣಿಗೊಂಡಿದೆ. ಬಹುತೇಕ ದಿನಂಪ್ರತಿ ಕಾಮಗಾರಿಯ ಪ್ರಗತಿಯ ತನಿಖೆಯನ್ನು ಸ್ವತಃ ನಾನೇ ಗಮನಿಸುತ್ತಿದ್ದೇನೆ. ಇಂದೂ ಕೂಡ ಇಂದ್ರಾಳಿಗೆ ಭೇಟಿಕೊಟ್ಟು ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಕಾಂಕ್ರೀಟೀಕರಣ ಬೇಗ ಮುಗಿಸಲು ಆಗ್ರಹಿಸಿದ್ದೆ.

ಪ್ರತಿಭಟನೆಯ ಹೆಸರಿನಲ್ಲಿ ಶವದ ಮೆರವಣಿಗೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡಿದ್ದು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಗೆ ವಿರುದ್ಧವಾಗಿದ್ದರೂ ಕೂಡ ನಾನದನ್ನು ಮೌನವಾಗಿ ಸಹಿಸಿಕೊಂಡಿದ್ದೆ. ಅದಾಗಿಯೂ ಪ್ರಜಾತಂತ್ರ ವ್ಯವಸ್ಥೆಯಡಿ ಮಾಡುವ ಎಲ್ಲಾ ಪ್ರತಿಭಟನೆಯನ್ನು ಗೌರವಿಸುತ್ತೇನೆ ಹಾಗೂ ವಿರೋಧಿಸುವವರು ಮೆಚ್ಚುವಂತೆ ಮೇಲಿನ ಎಲ್ಲಾ ಕಾಮಗಾರಿಗಳನ್ನು ಮುಗಿಸುವುದು ನನ್ನ ಗುರಿ. ಪರ್ಕಳ ರಸ್ತೆಯನ್ನು ತಕ್ಷಣ ಸರಿಪಡಿಸಲು ಇಂಜಿನಿಯರ್‌ಗಳನ್ನು ಕರೆದು ನಿರ್ದೇಶಿಸಿದ್ದೇನೆ ಎಂದು ಸಂಸದರು ಹೇಳಿದ್ದಾರೆ.

Exit mobile version