Home ನಮ್ಮ ಜಿಲ್ಲೆ ರಾಮನಗರ ರಾಮನಗರ ಡಿಸಿಗೆ ಜಾಲಿವುಡ್ ಸ್ಟುಡಿಯೋಸ್ ಪತ್ರ, ವಿವರ

ರಾಮನಗರ ಡಿಸಿಗೆ ಜಾಲಿವುಡ್ ಸ್ಟುಡಿಯೋಸ್ ಪತ್ರ, ವಿವರ

0

ರಾಮನಗರ: ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಮೇರೆಗೆ ಸೀಜ್ ಆಗಿರುವ ಖಾಸಗಿ ವಾಹಿನಿ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿಯವರು ಬೀಗ ಮುದ್ರೆ ತೆಗೆಯುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಭೇಟಿ ಮಾಡಿದ ಜಾಲಿವುಡ್ ಸ್ಟುಡಿಯೋಸ್‌ನ ವ್ಯವಸ್ಥಾಪಕ ಹಾಗೂ ಇತರೆ ಸಿಬ್ಬಂದಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ತಮ್ಮ ತಪ್ಪು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಬೇಕು. ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಕೂಡ ನಡೆಯುತ್ತಿದೆ. ಸ್ಟುಡಿಯೋಗೆ ಬೀಗ ಹಾಕಿರುವುದರಿಂದ, ಅವರೆಲ್ಲರ ಕೆಲಸಕ್ಕೆ ತೊಂದರೆಯಾಗಲಿದೆ ಎಂದು ಮನವಿ ಮಾಡಿದರು.

ಷರತ್ತುಬದ್ದ ಅನುಮತಿ ನೀಡುವಂತೆ ಆಡಳಿತ ಮಂಡಳಿಯವರು ಮನವಿ ಮಾಡಿದರು. ಆದರೆ, ಜಿಲ್ಲಾಧಿಕಾರಿಗಳು ಮನವಿ ಪತ್ರವನ್ನು ಪಡೆಯದೇ ಕಾಯಲು ಹೊರಗೆ ಕಳುಹಿಸಿದರು. ಕೆಲ ಸಮಯದ ನಂತರ ಆಡಳಿತ ಮಂಡಳಿಯವರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ನಾವು ಪಾಲಿಸಿದ್ದೇವೆ. ಹಾಗಾಗಿ, ಮಂಡಳಿಗೆ ನೀವು ಮನವಿ ಮಾಡಿ. ಅವರು ನೀಡುವ ಆದೇಶದಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬಿಗ್ ರಿಲೀಫ್: ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , “ಜಾಲಿವುಡ್ ಸ್ಟುಡಿಯೋ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳಲು 10 ದಿನಗಳ ಕಾಲಾವಕಾಶ ಕೇಳಿ ಮನವಿ ಮಾಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಆ ಮನವಿಯನ್ನು ವರ್ಗಾವಣೆ ಮಾಡಿದ್ದೇನೆ. ನಿರ್ಧಾರವನ್ನು ಮಂಡಳಿಗೆ ಬಿಟ್ಟಿದ್ದೇನೆ” ಎಂದು ತಿಳಿಸಿದರು.

ಇದೀಗ ರಿಯಾಲಿಟಿ ಶೋಗೆ ರಿಲೀಫ್ ಸಿಕ್ಕಂತಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಧಾರದ ಮೇಲೆ ಶೋನ ಭವಿಷ್ಯ ನಿಂತಿದೆ. ಈಗ 10 ದಿನಗಳ ಕಾಲಾವಕಾಶ ಸಿಕ್ಕಿರುವುದರಿಂದ, ಶೋ ಮತ್ತೆ ಪ್ರಸಾರವಾಗುವ ನಿರೀಕ್ಷೆ ಮೂಡಿದೆ. ವಾಸ್ತವವಾಗಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ್ದಕ್ಕೂ, ಶೋಗೂ ನೇರ ಸಂಬಂಧ ಇರಲಿಲ್ಲ. ಆದರೆ, ಸ್ಟುಡಿಯೋ ಬಂದ್ ಆಗಿದ್ದರಿಂದ ಶೋಗೂ ಅಡಚಣೆ ಉಂಟಾಗಿತ್ತು.

ರಿಲ್ಯಾಕ್ಸ್ ಮೂಡ್‌ನಲ್ಲಿ ಸ್ಪರ್ಧಿಗಳು: ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದಿರುವ ಕಾರಣ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್‌ಗೆ ರಿಯಾಲಿಟಿ ಶೋ ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದೆ. ಬುಧವಾರ ಸ್ಪರ್ಧಿಗಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಮಂಗಳವಾರ ರಾತ್ರಿಯೇ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಯಿತು. ರಾತ್ರಿಯಿಂದಲೇ ವಾಸ್ತವ್ಯ ಹೂಡಿರುವ ಸ್ಪರ್ಧಿಗಳು ಬೆಳಗ್ಗೆ ರೆಸಾರ್ಟ್ ಬಾಲ್ಕನಿಯಲ್ಲಿ ನಿಂತು ಮಾತಾಡಿಕೊಳ್ಳುತ್ತಿದ್ದರು.

ಜಾಲಿವುಡ್ ಮನವಿಯಲ್ಲಿ ಏನಿದೆ?: ನಾವು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲನೆ ಮಾಡುತ್ತೇವೆ. ವೆಲ್ಸ್ ಸ್ಟುಡಿಯೋದಲ್ಲಿ ನೂರಾರು ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಏಕಾಏಕಿ ಬೀಗ ಹಾಕಿರುವ ಕಾರಣ ನೂರಾರು ಜನರ ಭವಿಷ್ಯ ಅತಂತ್ರವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶೋ ನಡೆಸಲಾಗುತ್ತಿದೆ. ಹಠಾತ್ ಸ್ಥಗಿತಗೊಳಿಸಿದ ಕಾರಣ ನಷ್ಟವಾಗಿದೆ. ನೀವು 15 ದಿನಗಳ ಕಾಲಾವಕಾಶ ಕೊಡಬೇಕು. 15 ದಿನದೊಳಗೆ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳುತ್ತೇವೆ.

ಡಿಕೆಶಿ ಹೆಸರು ಬೇಡ: “ನಟ್ಟು ಬೋಲ್ಟ್ ವಿಚಾರಕ್ಕೂ ಶೋ ಬಂದ್ ಆಗಿದ್ದಕ್ಕೂ ಯಾವುದೇ ಸಂಬಂಧ ಇಲ್ಲ. ಈ ವಿಚಾರದಲ್ಲಿ ನಟ ಸುದೀಪ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯೆ ತಂದಿಡೋದು ಬೇಡ” ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟು ಬೋಲ್ಟ್ ಮಿನಿಸ್ಟರ್ ಎಂಬ ಜೆಡಿಎಸ್ ಟ್ವೀಟ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಬಾಲಕೃಷ್ಣರವರು, “ನಟ್ಟು ಬೋಲ್ಟಿಗೂ ಶೋ ಬಂದ್ ಆಗಿದ್ದಕ್ಕೂ ಏನು ಸಂಬಂಧ?. ನಟ್ಟು ಬೋಲ್ಟ್ ವಿಚಾರಕ್ಕೂ ಇದ್ದಕ್ಕೂ ಸಂಬಂಧವೇ ಇಲ್ಲ. ನಟ ಸುದೀಪ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ತಂದಿಡೋದು ಬೇಡ” ಎಂದರು.

“ಜಿಲ್ಲಾಡಳಿತವು ಜಾಲಿವುಡ್ ಸ್ಟುಡಿಯೋದವರಿಗೆ ನೋಟಿಸ್ ಕೊಟ್ಟು, ಬೀಗ ಹಾಕಿದ್ದಾರೆ. ಜಾಲಿವುಡ್ ಅವರು ಎನ್‍ಓಸಿ ಪಡೆದು ಕಾರ್ಯಕ್ರಮ ನಡೆಸಲಿ. ಶೋ ಅನ್ನು ಒಂದು ತಿಂಗಳು ಮುಂದಕ್ಕೆ ಹಾಕಿದರೆ ಪ್ರಾಣ ಹೋಗಲ್ಲ. ಕಾನೂನಾತ್ಮಕವಾಗಿ ಅನುಮತಿ ಪಡೆದುಕೊಳ್ಳಲಿ” ಎಂದು ಬಾಲಕೃಷ್ಣ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version