Home ನಮ್ಮ ಜಿಲ್ಲೆ ಬೆಂಗಳೂರಲ್ಲಿ ನಕಲಿ ಭೂ ದಾಖಲೆಗಳ ಸೃಷ್ಟಿಗೆ ಬಿತ್ತು ಬ್ರೇಕ್

ಬೆಂಗಳೂರಲ್ಲಿ ನಕಲಿ ಭೂ ದಾಖಲೆಗಳ ಸೃಷ್ಟಿಗೆ ಬಿತ್ತು ಬ್ರೇಕ್

0

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕಂದಾಯ ಇಲಾಖೆ ವತಿಯಿಂದ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ‘ಭೂ ಸುರಕ್ಷಾ ಯೋಜನೆ’ ಪ್ರಾರಂಭಿಸಲಾಗಿದೆ. ನಗರದಲ್ಲಿ ಇನ್ನು ಮುಂದೆ ನಕಲಿ ಎಂಟ್ರಿಗಳು ಹಾಗೂ ಸುಳ್ಳು ದಾಖಲೆಗಳು ಸೃಷ್ಟಿ ಆಗುವುದಕ್ಕೆ ತಡೆ ಬೀಳಲಿದೆ.

ಈ ಯೋಜನೆ ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, “ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿಗಳು ಹಾಗೂ ಸುಳ್ಳು ದಾಖಲೆಗಳು ಸೃಷ್ಟಿ ಆಗುವುದನ್ನು ತಡೆಯಲು ಭೂ ದಾಖಲೆಗಳ ಡಿಜಿಟಲೀಕರಣ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.

“ಹಿಂದೆ ಹೊರ ಬಂದಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಯೊಂದು ಅನುಮಾನಾಸ್ಪದ ಪ್ರಕರಣಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಫೋರೆನ್ಸಿಕ್ ಲ್ಯಾಬ್‌ಗೆ ಕಳಿಸಿ ದಾಖಲೆಗಳ ನೈಜತೆ ಕುರಿತು ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.

“ಸ್ಕ್ಯಾನಿಂಗ್ ಮೂಲಕ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ರಕ್ಷಿಸುವುದರಿಂದ ಭವಿಷ್ಯದಲ್ಲಿ ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ ಹಾಕಿದಂತಾಗುತ್ತದೆ. ಬೆಂಗಳೂರಿನ ತಹಶೀಲ್ದಾರ್ ಕಚೇರಿಗಳಲ್ಲಿ ಕಳೆದ ತಿಂಗಳು ಸರಾಸರಿ ಪ್ರತಿದಿನ 9 ರಿಂದ 10 ಸಾವಿರ ಪುಟ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಬರುವ ಡಿಸೆಂಬರ್ ಅಂತ್ಯದೊಳಗೆ ಈ ಕಾರ್ಯವನ್ನು ಸಮಾರೋಪದಿಯಲ್ಲಿ ನಿರ್ವಹಿಸಿ ಪೂರ್ಣಗೊಳಿಸಲು ಸೂಚಿಸಲಾಗಿದೆ” ಎಂದು ತಿಳಿಸಿದರು.

ಹೇಗೆ ನಡೆಯಲಿದೆ ಪ್ರಕ್ರಿಯೆ?: ಭೂ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿ ಕಂದಾಯ ಇಲಾಖೆ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಶಾಶ್ವತವಾಗಿ ಸಂರಕ್ಷಿಸಲಾಗುತ್ತಿದೆ. 246 ತಾಲೂಕುಗಳ ಪೈಕಿ 26 ತಾಲೂಕುಗಳಲ್ಲಿ ‘ಎ’ ಮತ್ತು ‘ಬಿ’ ಕ್ಯಾಟಗರಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ.

ತಾಲ್ಲೂಕು ಕಚೇರಿಗಳಲ್ಲಿರುವ ಹಳೆಯ ದಾಖಲಾತಿಗಳನ್ನು ಡಿಜಿಟಲೀಕರಿಸುವ ಮೂಲಕ ಸಾರ್ವಜನಿಕರಿಗೆ ತಮ್ಮ ಭೂ ದಾಖಲಾತಿಗಳನ್ನು ಸುಲಭವಾಗಿ ಪಡೆಯಲು ಈ ಯೋಜನೆಯು ಸಹಕಾರಿಯಾಗಿದೆ. ರಾಜ್ಯದಲ್ಲಿ 100 ಕೋಟಿ ಪುಟಗಳ ದಾಖಲೆ ಪೈಕಿ 35.36 ಕೋಟಿ ಸ್ಕ್ಯಾನ್ ಮಾಡಲಾಗಿದ್ದು, ಆದರಲ್ಲಿ 65 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕೆಂದು ಅಂದಾಜಿಸಲಾಗಿದ್ದು, ಈ ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಸಾರ್ವಜನಿಕರು ಭೂ ಸುರಕ್ಷಾ ವೆಬ್‌ಸೈಟ್ ಮೂಲಕ ತಮ್ಮ ಭೂ ದಾಖಲೆಗಳಿಗೆ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನೇರವಾಗಿ ತಮ್ಮ ಮನೆಯಲ್ಲಿ ದಾಖಲೆಗಳನ್ನು ಪಡೆಯಬಹುದಾಗಿದೆ. ಕಂದಾಯ ದಾಖಲೆಗಳು ಅಥವಾ ಕಡತಗಳು ಕಳುವಾಗುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಸಾರ್ವಜನಿಕರ ಕೈಬೆರಳ ತುದಿಯಲ್ಲೇ ಅವರ ಜಮೀನಿನ ದಾಖಲೆ ಸುಲಭವಾಗಿ ಲಭ್ಯವಾಗಿಸುವ ಉದ್ದೇಶವಿದೆ.

ಸ್ಕ್ಯಾನ್ ಮಾಡಿ ಕಾಂಪ್ಯಾಕ್ಟರ್ ವಿಧಾನವನ್ನು ಅನುಸರಿಸಿ ರೆಕಾರ್ಡ್ ರೂಮ್ ಆಧುನೀಕರಿಸಿ ದಾಖಲೆಗಳನ್ನು ರಕ್ಷಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿಗೆ ಸರ್ಕಾರವು 5 ಕೋಟಿ ರೂ. ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1 ಕೋಟಿ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ.

ಇನ್ನೂ ಮುಂದೆ ದಾಖಲೆಗಳನ್ನು ಸ್ಕ್ಯಾನ್ ಮಾಡುವಾಗ ಅನುಮಾನಾಸ್ಪದವಾದ ದಾಖಲೆಗಳನ್ನು ಫೋರೆನ್ಸಿಕ್ ಮೂಲಕ ತನಿಖೆ ಮಾಡಿಸಿ ಕ್ರಮ ವಹಿಸಲಾಗುತ್ತದೆ. ರಾಜ್ಯದ ಎಲ್ಲಾ ಎಸಿ, ಡಿಸಿ ಕಚೇರಿಯ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ದೇಶದಲ್ಲಿ ಇತರೆ ಕೆಲವು ರಾಜ್ಯಗಳಲ್ಲಿ ಕಂದಾಯ ದಾಖಲೆಗಳ ಇಂಡೆಕ್ಸಿಂಗ್ ಮಾತ್ರ ಮಾಡಲಾಗಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ 100-120 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಿಸಲಾಗುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version