Home ನಮ್ಮ ಜಿಲ್ಲೆ ಮೈಸೂರು ಮೈಸೂರು ದಸರಾ 2025: ಅರಮನೆಯಲ್ಲಿ ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್

ಮೈಸೂರು ದಸರಾ 2025: ಅರಮನೆಯಲ್ಲಿ ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್

0

ಮೈಸೂರು ದಸರಾ 2025ಕ್ಕೆ ಚಾಲನೆ ಸಿಕ್ಕಿದೆ. ಸಂಪ್ರದಾಯದಂತೆ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯ ದರ್ಬಾರ್ ಹಾಲ್‍ನಲ್ಲಿ ರತ್ನಖಚಿತ ಸಿಂಹಾಸನವೇರಿ ದರ್ಬಾರ್ ನಡೆಸುವ ಮೂಲಕ ಈ ಹಿಂದಿನ ರಾಜ ವೈಭವದ ನೆನಪು ಮರುಕಳಿಸುವಂತೆ ಮಾಡಿದರು.

ನವರಾತ್ರಿ ಪೂಜಾ ಮಹೋತ್ಸವದಲ್ಲಿ ರಾಜವಂಶಸ್ಥರು ಅರಮನೆಯಲ್ಲಿ ನಡೆಸುವ ಧಾರ್ಮಿಕ ಕಾರ್ಯದಲ್ಲಿ ಖಾಸಗಿ ದರ್ಬಾರ್‌ಗೆ ಮಹತ್ವವಿವೆ. ಸೋಮವಾರ ಆರಂಭವಾದ ಖಾಸಗಿ ದರ್ಬಾರ್ ಆಯುಧ ಪೂಜೆಯ ದಿನವಾದ ಅಕ್ಟೋಬರ್ 1ರವರೆಗೂ ಪ್ರತಿದಿನ ಸಂಜೆ ನಡೆಯಲಿದೆ.

ಅರಮನೆಯ ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿ ಸೇರಿದಂತೆ ವಿವಿಧೆಡೆ ನಡೆದ ಧಾರ್ಮಿಕ ಕಾರ್ಯದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಆದ್ಯವೀರ್ ನರಸಿಂಹರಾಜ ಒಡೆಯರ್, ಯುಗಾದ್ಯಕ್ಷ ಕೃಷ್ಣರಾಜ ಒಡೆಯರ್ ಪಾಲ್ಗೊಂಡರು.

ನವರಾತ್ರಿ ಮೊದಲ ದಿನವಾದ ಸೋಮವಾರ ಅರಮನೆಯಲ್ಲಿ ವಿವಿಧ ಪೂಜಾ ಕಾರ್ಯ ಜರುಗಿದವು. ಮುಂಜಾನೆ 4.30ಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆ ಶಾಸ್ತ್ರ ಮಾಡಿಸಲಾಯಿತು. ಬೆಳಗ್ಗೆ 5.30ರಿಂದ 5.45ರೊಳಗೆ ದರ್ಬಾರ್ ಹಾಲ್‍ನಲ್ಲಿದ್ದ ಸಿಂಹಾಸನಕ್ಕೆ ಸಿಂಹ(ಸಿಂಹದ ತಲೆ) ಜೋಡಣೆ ನಡೆಯಿತು. ಬಳಿಕ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಬೆಳಿಗ್ಗೆ 9.55ರಿಂದ 10.15ರೊಳಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ, ವಾಣಿ ವಿಲಾಸ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು.

ಸಿಂಹಾಸನಾರೋಹಣಕ್ಕೂ ಮುನ್ನ ಕಳಸ ಪೂಜೆ, ಸಿಂಹಾಸನ ಪೂಜೆ ಜರುಗಿತು. ಸಿಂಹಾಸನದ ಸಮೀಪವೇ ನಡೆದ ಕಳಸ ಪೂಜೆಯಲ್ಲಿ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಲ್ಗೊಂಡು ವಿಧಿ ವಿಧಾನದಂತೆ ಪೂಜೆ ನೆರವೇರಿಸಿದರು. ಪೂಜೆ ಮುಗಿದ ನಂತರ ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಸಿಂಹಾಸನಕ್ಕೆ ಜೋಡಿಸಲಾಗಿದ್ದ ಸಿಂಹಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ನಂತರ ಮದ್ಯಾಹ್ನ 12.42ರಿಂದ 12.58ರ ನಡುವೆ ರತ್ನಖಚಿತ ಸಿಂಹಾಸನವೇರಿ ವೀರಾಜಮಾನರಾಗಿ ಕಂಗೊಳಿಸಿದರು.

ಖಾಸಗಿ ದರ್ಬಾರ್‌ಗೆ ಎಂದಿನಂತೆ ಪೊಲೀಸ್ ಬ್ಯಾಂಡ್ ವಾದನದ ಸದಸ್ಯರು ನುಡಿಸಿದ ಸಂಗೀತ ಖಾಸಗಿ ದರ್ಬಾರ್‌ಗೆ ರಾಜ ಕಳೆಯ ಮೆರಗು ಕಟ್ಟುವಂತೆ ಮಾಡಿತು. ಪ್ರತಿ ವರ್ಷವೂ ದರ್ಬಾರ್ ವೇಳೆ ಪೊಲೀಸ್ ಬ್ಯಾಂಡ್ ವಾದನ ಇರಲಿದ್ದು, ಇಂದು ಚಾಮರಾಜೇಂದ್ರ ಒಡೆಯರ್ ವಿರಚಿತ ಗೀತೆಗಳನ್ನು ನುಡಿಸಿ, ಗಮನ ಸೆಳೆದರು.

NO COMMENTS

LEAVE A REPLY

Please enter your comment!
Please enter your name here

Exit mobile version