ಸಂಯುಕ್ತ ಕರ್ನಾಟಕ ಪತ್ರಿಕೆಯ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ಹಿರಿಯ ವರದಿಗಾರರಿಗೆ ಕಾರ್ಯನಿರ್ವಹಿಸುತ್ತಿದ್ದ ಮಹದೇವ ಮಂಗಳವಾರ ನಿವೃತ್ತಿಯಾಗಿದ್ದು ಆತ್ಮೀಯವಾಗಿ ಬಿಳ್ಕೋಡುಗೆ ನೀಡಲಾಯಿತು.
ಮೈಸೂರಿನ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹದೇವ ಅವರಿಗೆ ಮುಖ್ಯ ವರದಿಗಾರ ಎನ್.ಎಂ. ಬಸವರಾಜು ಶಾಲು ಹೊದಿಸಿ, ಹಾರ ಹಾಕಿ ಫಲ ತಾಂಬೂಲ ನೀಡಿ ಗೌರವಿಸಿದರು.
ಈ ವೇಳೆ ಸನ್ಮಾನಕ್ಕೆ ಉತ್ತರಿಸಿದ ಮಹದೇವ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಗೊಳ್ಳುತ್ತಿದ್ದೇನೆ. ಆರಂಭದ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರಿಗೆ ಕಚೇರಿಗೆ ಪ್ರತಿನಿತ್ಯ ಓಡಾಡಿಕೊಂಡು ಕೆಲಸ ಮಾಡಬೇಕಾಗಿತ್ತು.
ಸುನಾಮಿ, ಡಾ.ರಾಜ್‌ಕುಮಾರ್ ಅಪಹರಣ, ಚುನಾವಣೆ ನಡೆದಂತಹ ಸಂದರ್ಭದಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಆ ವೇಳೆ ನನ್ನ ಸಹದ್ಯೋಗಿಗಳು ನನಗೆ ಹೆಚ್ಚು ಬೆಂಬಲ ನೀಡಿದ್ದರು. ನಂತರ ಮೈಸೂರಿನಲ್ಲಿಯೇ ಕಚೇರಿ ಆರಂಭವಾಯಿತು. ಆ ಬಳಿಕ ಕೆಲಸ ಸ್ವಲ್ಪ ಸುಲಭವಾಯಿತು ಎಂದು ಹಿಂದಿನ ಕರ್ತವ್ಯದ ದಿನಗಳನ್ನು ಸ್ಮರಿಸಿದರು.
ಸಂಸ್ಥೆಯಲ್ಲಿ ಇಷ್ಟು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ತೃಪ್ತಿ ತಂದಿದೆ. ಹಲವರೊಂದಿಗೆ ನಾನು ಕೆಲಸ ನಿರ್ವಹಿಸಿದ್ದೇನೆ. ಎಲ್ಲರು ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ತಿಳಿಸಿದರು.
ನಂತರ ಬಸವರಾಜು ಮಾತನಾಡಿ, ಮಹದೇವ ಅವರು ನನಗೆ 2001ರಿಂದಲೂ ಪರಿಚಯಸ್ಥರು. ತುಂಬ ಸರಳ ವ್ಯಕ್ತಿತ್ವದವರು. ಪತ್ರಿಕಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವುಳ್ಳವರಾಗಿರುವ ಮಹದೇವ ಸಂಸ್ಥೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇಂದಿಗಿಂತಲೂ ಹೆಚ್ಚು ಲವಲವಿಕೆಯಿಂದ ಇರಬಹುದು ಎಂದು ತಿಳಿಸಿದರು.
ಈ ವೇಳೆ ಪತ್ರಿಕೆಯ ಜಾಹೀರಾತು ವಿಭಾಗದ ಗಿರೀಶ್, ಫೋಟೋ ಗ್ರಾಫರ್ ನಂದನ್, ಚಾಮರಾಜನಗರ ಜಿಲ್ಲಾ ವರದಿಗಾರ ಎಸ್. ಪ್ರತಾಪ್, ಸಿಬ್ಬಂದಿಗಳಾದ ಯೋಗೇಶ್, ಶಿವಕುಮಾರ್ ಇದ್ದರು.