Home ನಮ್ಮ ಜಿಲ್ಲೆ ಕೊಪ್ಪಳ ಕೊಪ್ಪಳ: ಅಂಜನಾದ್ರಿ ಭಕ್ತರಿಗೆ ಬಂಪರ್ ಕೊಡುಗೆ ಕೊಟ್ಟ ರಾಜ್ಯ ಸರ್ಕಾರ

ಕೊಪ್ಪಳ: ಅಂಜನಾದ್ರಿ ಭಕ್ತರಿಗೆ ಬಂಪರ್ ಕೊಡುಗೆ ಕೊಟ್ಟ ರಾಜ್ಯ ಸರ್ಕಾರ

0

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಭಕ್ತರಿಗೆ ಕರ್ನಾಟಕ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

2024-25ನೇ ಸಾಲಿನ ಬಜೆಟ್ ಘೋಷಣೆಯಂತೆ ಅಂಜನಾದ್ರಿ ಬೆಟ್ಟವೂ ಒಳಗೊಂಡಂತೆ ರಾಜ್ಯದ 11 ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಅನುಮೋದನೆ ನೀಡಿದೆ.

ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.‌ ಯಾತ್ರಿಕರು ಉಳಿದುಕೊಳ್ಳಲು ಡಾರ್ಮೆಟರಿ ವ್ಯವಸ್ಥೆ, ಹಿರಿಯ ಭಕ್ತಾಧಿಗಳು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ, ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತ ಮುತ್ತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಈ ಕ್ಷೇತ್ರಕ್ಕೆ ಹಂತ-1 ಮತ್ತು ಹಂತ-2ರಲ್ಲಿ ರೂ.200 ಕೋಟಿಗಳ ಕಾಮಗಾರಿಗಳು ಮಂಜೂರಾಗಿದ್ದು, ಈವರೆಗೆ ಈ ಕಾಮಗಾರಿಗಳಿಗೆ ರೂ.10 ಕೋಟಿಗಳನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದು, ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ.

ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಿ ಜಮೀನಿನ ಕೊರತೆ ಇರುವುದರಿಂದ, ಪ್ರಸ್ತಾಪಿಸಿರುವ 77.28 ಖಾಸಗಿ ಜಮೀನನ್ನು ಅನುದಾನದ ಕೊರತೆಯಿರುವುದರಿಂದ ಈವರೆಗೂ ಭೂ-ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.

ಆದ್ದರಿಂದ, ಹೆಚ್ಚುವರಿ ಜಮೀನು ಒಳಗೊಂಡಂತೆ ಒಟ್ಟು 101 ಎಕರೆ 30 ಗುಂಟೆ ಖಾಸಗಿ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಾಗಿರುವ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಒದಗಿಸಲಾಗುವುದು ಎಂದು ಚರ್ಚೆ ನಡೆಯಿತು.

ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ NOC ನೀಡಬೇಕಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಶಾಸಕರ ಪೋಸ್ಟ್: ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ನೀಡಿದ ಕುರಿತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪೋಸ್ಟ್ ಹಾಕಿದ್ದಾರೆ.

ಶಾಸಕರು ತಮ್ಮ ಪೋಸ್ಟ್‌ನಲ್ಲಿ, ‘ಹನುಮ ಜನ್ಮಭೂಮಿ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದಿರುವ ಕುರಿತು ಮೊನ್ನೆಯ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಗಮನ ಸೆಳೆಯಲಾಗಿತ್ತು. ಅದರಂತೆ, ಇಂದು ಶ್ರೀ Siddaramaiah ಅವರು ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಂಡಿದ್ದಾರೆ’ ಎಂದು ಹೇಳಿದ್ದಾರೆ.

‘ಈ ಕಾರ್ಯಕ್ಕಾಗಿ ಗಂಗಾವತಿಯ ಜನತೆಯ ಪರವಾಗಿ ನಾನು ಶ್ರೀ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಾವು ನೀಡಿದ ಮಾತಿನಂತೆ ಒಂದು ದಿನವೂ ವ್ಯರ್ಥ ಮಾಡದೆ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ಒದಗಿಸಿ, ಹನುಮಂತನ ಕೃಪೆಗೆ ಹಾಗೂ ಗಂಗಾವತಿ ಜನತೆಯ ಮೆಚ್ಚುಗೆಗೆ ತಾವು ಮತ್ತು ತಮ್ಮ ಸರ್ಕಾರ ಪಾತ್ರರಾಗಬೇಕಾಗಿ ನಾನು ವಿನಮ್ರವಾಗಿ ವಿನಂತಿಸುತ್ತೇನೆ’ ಎಂದು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version