ಕೋಲಾರ: ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭ್ರಮೆ ಬೇಡ. ಕುರ್ಚಿ ಸಿಗದಿದ್ದರೂ ಇದ್ದ ಅವಕಾಶದಲ್ಲೇ ಸಾಧ್ಯವಾದಷ್ಟು ದೋಚಬೇಕೆಂಬುದೇ ಇವರ ಗುರಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಭಾನುವಾರ ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಳೆದ ಎರಡುವರೆ ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ನೆಪದಲ್ಲಿ 54 ಲಕ್ಷ ಕೋಟಿ ರೂ. ಸಾಲ ಮಾಡಿ ರಾಜ್ಯದ ಜನರ ಮೇಲೆ ಹೊರೆ ಹಾಕಿದ್ದಾರೆ. ಇದೇ ಅವರ ಸಾಧನೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಜಾತಿ ಗಣತಿ ನಡೆಸಲಿಲ್ಲ ಎಂದು ಟೀಕಿಸುತ್ತಿದ್ದ ಸಿದ್ದರಾಮಯ್ಯ ಎರಡೂವರೆ ವರ್ಷದಲ್ಲಿ ಸಾಧಿಸಿದ್ದೇನು. ಹಿಂದುಳಿದ ವರ್ಗಗಳ ಮೂವರು ಆಯೋಗದ ಅಧ್ಯಕ್ಷರ ಮೂಲಕ ಪ್ರತ್ಯೇಕ ವರದಿಗಳನ್ನು ತೆಗೆದುಕೊಂಡಿದ್ದೆ ಇವರ ಸಾಧನೆ. ಎರಡು ತಿಂಗಳಲ್ಲಿ ಜಾತಿಗಣತಿ ವರದಿ ಪಡೆದು ಜಾರಿ ಮಾಡುವುದಾಗಿ ಹೇಳಿಕೊಂಡವರು ಈಗ ಏಕೆ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆಯಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಬಂದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆ ಎಂದು 2013ರಲ್ಲಿ ನಾನು ಶಪಥ ಮಾಡಿದ್ದೆ. ಹತ್ತು ವರ್ಷ ಕಳೆದಿದೆ ಇವತ್ತಿಗೂ ನೀರು ಬಂದಿಲ್ಲ ಮತ್ತು ಬರುವುದು ಇಲ್ಲ. ಆದರೆ ಬೋಳಿಸಿಕೊಳ್ಳಲು ನನ್ನ ತಲೆಯಲ್ಲಿ ಕೂದಲೇ ಇಲ್ಲ, ಎಲ್ಲವೂ ಉದುರಿ ಹೋಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
