ನವದೆಹಲಿ: ಕಾಂಗ್ರೆಸ್ ಪಕ್ಷ ʼಮತಗಳ್ಳತನ ವಿರುದ್ಧ ಅಭಿಯಾನʼ ನೆಪದಲ್ಲಿ ಪ್ರಚಾರ ಪಡೆಯಲು ನೋಡುತ್ತಿದ್ದು, ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹಿರಿಯ CSDS ಸೆಫಾಲಜಿಸ್ಟ್ ಒಬ್ಬರು ಮಹಾರಾಷ್ಟ್ರ ಮತದಾರ ಪಟ್ಟಿ ಕುರಿತು ಪ್ರತಿಕ್ರಿಯಿಸಿ, ಚುನಾವಣಾ ಡೇಟಾವನ್ನು ತಪ್ಪಾಗಿ ಓದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಕ್ಷಮೆಯಾಚಿಸಿದ್ದಾರೆ. ಆದರೆ, ಇತ್ತ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಪಕ್ಷಪಾತ ಮತ್ತು ʼಮತದಾನ ಚೋರಿ” ಎಂಬ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಜೋಶಿ ಆಕ್ಷೇಪಿಸಿದ್ದಾರೆ.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆಧಾರ ರಹಿತವಾದ ಆರೋಪ ಮಾಡುತ್ತಲೇ ಇದ್ದಾರೆ. ʼಪ್ರಜಾಪ್ರಭುತ್ವ ರಕ್ಷಣೆ ಹೋರಾಟʼ ಎನ್ನುತ್ತ ಅಭಿಯಾನ ಹಮ್ಮಿಕೊಂಡ ಇವರು ಪ್ರಜಾಪ್ರಭುತ್ವ ರಕ್ಷಿಸುತ್ತಿಲ್ಲ ಬದಲಿಗೆ ಅತ್ಯಂತ ಪಾರದರ್ಶಕವಾಗಿರುವ ಒಂದು ಸಂವಿಧಾನಿಕ ಸಂಸ್ಥೆ ಬಗ್ಗೆ ತಪ್ಪು ಸಂದೇಶ ಸಾರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಹಾರಾಷ್ಟ್ರದ ಹಿರಿಯ CSDS ಚುನಾವಣಾ ಡೇಟಾವನ್ನು ತಪ್ಪಾಗಿ ಓದಲು ಕಾರಣವೇನು? ಮತ್ತು ಈ ದೋಷಪೂರಿತ ಡೇಟಾವನ್ನು ಹೇಗೆ ಪ್ರಚಾರ ಮಾಡಲಾಯಿತು? ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆ ಆಗಬೇಕು. ಇದರಿಂದ ನಿಜವಾದ ಅಪರಾಧಿಯ ಬಹಿರಂಗವಾಗುತ್ತದೆ ಎಂದಿದ್ದಾರೆ ಸಚಿವ ಜೋಶಿ.
ಇತ್ತೀಚೆಗೆ ರಾಹುಲ್ ಗಾಂಧಿ ʼರಂಜು ದೇವಿʼ ಹೆಸರು ಪ್ರಸ್ತಾಪಿಸಿ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲವೆಂದು ಆರೋಪಿಸಿ ಪ್ರಚಾರ ಮಾಡಿದರು. ಆದರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರೂ ಇದೆ. ಆದರೂ ಬರೀ ಸುಳ್ಳಿನ ಮನೆ ಕಟ್ಟುತ್ತಿದ್ದಾರೆ. ಇದೀಗ ಇವರ ರಾಜಕೀಯ ದುರುದ್ದೇಶ ಬಹಿರಂಗವಾಗಿದೆ ಎಂದಿದ್ದಾರೆ.
ಮತ ಕಳ್ಳತನ, ವೋಟ್ ಚೋರಿ ಎಂಬುದೆಲ್ಲ ಕಾಂಗ್ರೆಸ್ ಪಕ್ಷದ ನಾಟಕವಾಗಿದೆ. ರಾಹುಲ್ ಗಾಂಧಿ ರಾಷ್ಟ್ರವನ್ನು ಅದೆಷ್ಟರ ಮಟ್ಟಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
eb1f0x