Home ನಮ್ಮ ಜಿಲ್ಲೆ ಧಾರವಾಡ SL Bhyrappa: ಎಸ್.ಎಲ್. ಭೈರಪ್ಪ… ಹುಬ್ಬಳ್ಳಿ ಜೊತೆಗಿನ ಯಾನ

SL Bhyrappa: ಎಸ್.ಎಲ್. ಭೈರಪ್ಪ… ಹುಬ್ಬಳ್ಳಿ ಜೊತೆಗಿನ ಯಾನ

0

ಬಿ. ಅರವಿಂದ
ಹುಬ್ಬಳ್ಳಿ: ಪಕ್ಕಾ ಹಳೇ ಮೈಸೂರಿನ ಎಸ್.ಎಲ್.ಭೈರಪ್ಪ ಮತ್ತು ಹುಬ್ಬಳ್ಳಿ… ಎರಡಕ್ಕೂ ಬಿಡಿಸಲಾಗದ ನಂಟು… ಹಾಸನ ಜಿಲ್ಲೆ ಸಂತೆಶಿವರದ ತೆಂಗು ಸೀಮೆಯ ಯುವಕ ಎರಡು ವರ್ಷ ಉತ್ತರ ಕರ್ನಾಟಕದ ರೊಟ್ಟಿ- ಚಟ್ನಿ ನೆಲದ ಭಾಗವಾಗಿದ್ದು… ಇವರ ಭವಿಷ್ಯದ ಖ್ಯಾತಿಗೆ ಹುಬ್ಬಳ್ಳಿಯೇ ಮುನ್ನಡಿ ಬರೆದದ್ದು ರೋಚಕ.
ಹೌದು… ಇನ್ನು ನೆನಪಿನ ಪುಟಗಳಲ್ಲಿ ಉಳಿಯಲಿರುವ ಕಾದಂಬರಿಕಾರ ಭೈರಪ್ಪನವರ ವೃತ್ತಿ ಬದುಕು ಹಾಗೂ ಸಾಹಿತ್ಯ ಯಾನ ಆರಂಭಗೊಂಡಿದ್ದೇ ವಾಣಿಜ್ಯ ರಾಜಧಾನಿಯಿಂದ.

ಹುಬ್ಬಳ್ಳಿಯ ಪ್ರಸಿದ್ಧ ಕಾಡಸಿದ್ದೇಶ್ವರ ಕಾಲೇಜಿನ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಉಪನ್ಯಾಸಕರಾಗಿ (1958, ಜುಲೈ 7) ಭೈರಪ್ಪ ತಮ್ಮ ವೃತ್ತಿ ಬದುಕನ್ನು ಈ ನೆಲದಿಂದ ಆರಂಭಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಎಂ.ಎ ಕೊನೇ ವರ್ಷದ ಪರೀಕ್ಷೆಗೆ ಮೊದಲೇ ಭೈರಪ್ಪನವರಿಗೆ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ನೇಮಕಾತಿ ಆಗಿತ್ತು. ಅವರ ಪ್ರತಿಭೆಯೇ ಇದಕ್ಕೆ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಸಂದರ್ಶನ ಮಾಡಿದವರು ಕಾಲೇಜಿನ ಅಂದಿನ ಪ್ರಾಚಾರ್ಯ ಮತ್ತು ಹೆಸರಾಂತ ಕನ್ನಡದ ಕವಿ ಡಾ.ಡಿ.ಎಸ್.ಕರ್ಕಿ. ನಾನು ಅಧ್ಯಯನ ಮಾಡಿದ ಸೌಂದರ್ಯ ಮೀಮಾಂಸೆಯ ಬಗ್ಗೆ ಕರ್ಕಿ ಅವರ ಆಸಕ್ತಿ ಹಾಗೂ ಈ ವಿಷಯದ ಮೇಲೆ ನನ್ನ ಪ್ರಭುತ್ವ ನೋಡಿ ಆಯ್ಕೆ ಮಾಡಿದರು' ಎಂದು ಭೈರಪ್ಪ ತಮ್ಮ ಆತ್ಮಕಥೆಭಿತ್ತಿ’ ಸೇರಿ ಹಲವೆಡೆ ನೆನಪು ಮಾಡಿಕೊಂಡಿದ್ದಾರೆ.

ಆರಂಭದಲ್ಲಿ `ಕೃಷ್ಣಭವನ’ ಲಾಜ್‌ನಲ್ಲಿ ಇದ್ದುದು, ಕೆಲ ದಿನಗಳ ನಂತರ ಬಾಡಿಗೆ ಕೋಣೆ ಹಿಡಿದದ್ದು; ಹುಬ್ಬಳ್ಳಿಯಲ್ಲಿದ್ದಾಗಲೇ ಸರಸ್ವತಿ ಅವರ ಜೊತೆ ವಿವಾಹವಾಗಿ ಹೊಸೂರಿನ ಸಣ್ಣ ಮನೆಯಲ್ಲಿ ವಾಸವಿದ್ದುದು ಅವಳಿನಗರದ ಅನೇಕ ಹಿರಿಯರ ನೆನಪಿನಲ್ಲಿದೆ.

ಭೈರಪ್ಪನವರ ವಿಷಯದಲ್ಲಿ ಇದಲ್ಲ ಮುಖ್ಯ. ಹುಬ್ಬಳ್ಳಿಯ ಕಾಲೇಜಿನ ವೃತ್ತಿಯ ಜೊತೆಗೆ, ಹೆಚ್ಚತೊಡಗಿದ ಅವರ ಆಳ ಅಧ್ಯಯನ, ಇದಕ್ಕಾಗಿ ತರಗತಿ ಸಮಯ ಹೊರತುಪಡಿಸಿ ಅವರು ತೊಡಗಿಕೊಳ್ಳುತ್ತಿದ್ದ ರೀತಿ, ಓದಿಗೆ ಪ್ರತ್ಯೇಕ ಸ್ಥಳ ದೊರಕದಿದ್ದಾಗ ಕಾಲೇಜು ಕ್ಯಾಂಪಸ್ಸಿನ ಬೇವಿನ ಮರವೊಂದರ ಕೆಳಗೆ ಓದುತ್ತಿದ್ದುದು, ತಮ್ಮ ಜ್ಞಾನ ಹಾಗೂ ಅಧ್ಯಯನದ ಪರಿಣಾಮವಾಗಿ ಕ್ರಮೇಣ ಅವಳಿನಗರದ ವಿದ್ವತ್ ವಲಯದ ಭಾಗವಾಗಿದ್ದು, ಒಳ್ಳೆಯ ವಾಕ್ಪಟುವಾಗಿದ್ದರಿಂದ ವಿದ್ವಾಂಸರು ಹಾಗೂ ವಿಚಾರ ಸಂಕಿರಣಗಳ ವೇದಿಕೆಯಲ್ಲಿ ಅವರ ಉಪನ್ಯಾಸಗಳು ಹೆಚ್ಚಿದ್ದು, ಇಲ್ಲಿದ್ದ ಎರಡೂ ವರ್ಷ ಅವರೊಬ್ಬ ಗಮನ ಸೆಳೆದ ವಿದ್ವಾಂಸರಾಗಿ ಶಾಶ್ವತ ಜನಪ್ರಿಯತೆ ಗಳಿಸಿದ್ದು ಹುಬ್ಬಳ್ಳಿ-ಧಾರವಾಡಕ್ಕೆ ಮರೆಯಲಾಗದ ಸಂಗತಿಗಳು.

ಹೀಗೆ ಅವಳಿನಗರ ಸಾರಸ್ವತ ಭಾಗವಾಗಿದ್ದಾಗಲೇ, ತಮ್ಮ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ ಎಂದು ಅವರಿಗೆ ಅನಿಸತೊಡಗಿತು. ಭೈರಪ್ಪನವರ ಹಿತೈಷಿಗಳೂ ಆಗಿದ್ದ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮತ್ತು ಹಿರಿಯ ಜಿ.ವಿ.ನಾಡಗೌಡರು, `ನಿಮ್ಮಂಥ ವಿದ್ವಾಂಸರು ಕರ್ನಾಟಕದ ಹೊರಗೇ ಇರಬೇಕು; ಆಗಲೇ ಬೆಳವಣಿಗೆ’ ಎಂದು ಹುರಿದುಂಬಿಸಿದರು.

ಅದೇ ವೇಳೆ, ಗುಜರಾತಿನ ಆನಂದ ನಗರದ `ಸರ್ದಾರ್ ವಲ್ಲಭಭಾಯಿ ವಿದ್ಯಾಪೀಠ’ದಲ್ಲಿ (ವಿವಿ) ತತ್ವಶಾಸ್ತ್ರ ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಹುದ್ದೆ ಅರ್ಜಿ ಕರೆಯಲಾಗಿತ್ತು. ಭೈರಪ್ಪನವರಂತೆ ನಾಡಗೌಡರೂ ಅದನ್ನು ನೋಡಿದ್ದರು. ಕಾರ್ಯನಿರತ ಉಪನ್ಯಾಸಕರು ತಮ್ಮ ಸಂಸ್ಥೆಯ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕೆಂಬ ನಿಯಮ ಇತ್ತು.

ಆದರೆ ಕಾಲೇಜು ಆಡಳಿತ ಮಂಡಳಿ ಒಪ್ಪುತ್ತಿರಲಿಲ್ಲವಾದ್ದರಿಂದ, ಪ್ರಾಚಾರ್ಯ ಡಿ.ಎಸ್.ಕರ್ಕಿ ಅವರು ಅರ್ಜಿ ರವಾನಿಸಿ, ಅನುಭವದ ಬಗ್ಗೆ ಪ್ರಮಾಣೀಕರಿಸುವ ಸಾಧ್ಯತೆ ಇರಲಿಲ್ಲ. ಈ ವಿಷಯದಲ್ಲೂ ನೆರವಿಗೆ ಬಂದದ್ದು ನಾಡಗೌಡರೇ ಎಂದು ಭೈರಪ್ಪ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.

`ಕರ್ಕಿಯವರು ಕರ್ತವ್ಯದ ಮೇರೆಗೆ ಹೋಗಿದ್ದಾಗ, ಉಸ್ತುವಾರಿಯಾಗಿದ್ದಾಗ ನಾಡಗೌಡರು ಧೈರ್ಯದಿಂದ ನನ್ನ ಅನುಭವದ ಬಗ್ಗೆ ಶಿಫಾರಸು ಮಾಡಿ ನನ್ನ ಅರ್ಜಿಯನ್ನು ರವಾನಿಸಿದರು. ಆಗಿನ ಖಾಸಗಿ ಕಾಲೇಜುಗಳ ಆಡಳಿತ ರೀತಿಗಳನ್ನು ತಿಳಿದವರಿಗೆ ಮಾತ್ರ, ನಾಡಗೌಡರು ನನಗಾಗಿ ಎಂತಹ ಗಂಡಾಂತರ ವಹಿಸಿ ಔದಾರ್ಯ ಮೆರೆದರು ಎಂಬುದು ಅರ್ಥವಾಗುತ್ತದೆ’ ಎಂದು ಭೈರಪ್ಪವರೇ ಹೇಳಿದ್ದಾರೆ.

ಮುಂದಿನದು ಇತಿಹಾಸ. ಭೈರಪ್ಪಗೆ ಆನಂದ ವಿವಿಯಲ್ಲಿ ಸಂದರ್ಶನಕ್ಕೆ ಕರೆ ಬಂತು. ಭೈರಪ್ಪನವರ ಪ್ರತಿಭೆಗೆ ಸಹಜವಾಗಿ ಅಲ್ಲಿಯೂ ಮನ್ನಣೆ ಸಿಕ್ಕಿ ಉನ್ನತ ಹಂತದ ಕೆಲಸವೂ ದೊರೆಯಿತು. ಈ ಸಂದರ್ಶನಕ್ಕೆ ಹೋಗಲು ದುಡ್ಡಿಲ್ಲದ್ದಿದ್ದರಿಂದ ನಾಡಗೌಡರೇ ಹಣವನ್ನೂ ಕೊಟ್ಟರು.

1960ರ ಅಕ್ಟೋಬರ್ 28ರಂದು ಭೈರಪ್ಪ ಹುಬ್ಬಳ್ಳಿಗೆ ವಿದಾಯ ಹೇಳಿದರು. ಆದರೆ ಕೊನೆಯ ಉಸಿರಿನವರೆಗೂ ಅವಳಿನಗರದ ಕಾರ್ಯಕ್ರಮಗಳಿಗೆ ತಪ್ಪದೇ ಬಂದು ಬೆರೆಯುತ್ತಿದ್ದರು. ಹುಬ್ಬಳ್ಳಿ ಅವರಿಗೆ ಅತ್ಯಂತ ಪ್ರೀತಿಯ ಸ್ಥಳವಾಗಿತ್ತು. ತಮ್ಮ ಭಾವಕೋಶದಲ್ಲಿ ಅಳಿಸಲಾಗದ ಸ್ಥಾನ ಹುಬ್ಬಳ್ಳಿಗಿದೆ; ಮೈಸೂರು ಬಿಟ್ಟರೆ ಹುಬ್ಬಳ್ಳಿಯಷ್ಟು ಬೇರೆ ಯಾವ ಊರಿನ ಮೇಲೂ ಪ್ರೀತಿ ಇಲ್ಲ ಎಂದು ಹೇಳುತ್ತಿದ್ದರು.

ಗುಜರಾತಿಗೆ ಹೊರಡುವಾಗ ರೈಲಿನಲ್ಲಿ ಕಣ್ಣುಗಳು ತುಂಬಿಕೊಂಡವು. ಕಿಟಕಿಯಿಂದ ದೇಶಪಾಂಡೆನಗರ, ಕೆಎಂಸಿ, ಕಾಡಸಿದ್ದೇಶ್ವರ ಕಾಲೇಜು, ಬಿವಿಬಿ ದಾಟುವಾಗ ಆ ಕಟ್ಟಡಗಳೂ ಕಾಣದಷ್ಟು ಕಣ್ಣೀರಿತ್ತು. ಪ್ರೀತಿಯ ಸಾಂದ್ರತೆ ಬೇರ್ಪಡುವಾಗ ಅರಿವಾಗುತ್ತದೆ' ಎಂದು ಭೈರಪ್ಪಭಿತ್ತಿ’ಯಲ್ಲಿ ಹೇಳುತ್ತಾರೆ.

ಮೊದಲ ಕಾದಂಬರಿಯ ಬೆಳಕು ತೋಫಖಾನೆ ಸ್ನೇಹದ ಮೆರಗು: ಭೈರಪ್ಪನವರ ಪ್ರಥಮ ಪ್ರಕಟಿತ ಕೃತಿ `ಧರ್ಮಶ್ರೀ’ ರೂಪುಗೊಂಡಿದ್ದು ಹುಬ್ಬಳ್ಳಿಯಲ್ಲಿ. ಉಪನ್ಯಾಸಕರಾಗಿದ್ದಾಗ ಇಲ್ಲಿನ ಆರ್ಯ ಸಮಾಜದವರು ಮಿಷನರಿಗಳ ಮತಾಂತರದ ವಿರುದ್ಧ ಭೈರಪ್ಪನವರಿಂದ ಸುದೀರ್ಘ ಲೇಖನವೊಂದನ್ನು ಬರೆಸಿಕೊಂಡಿದ್ದರು. ಅದೇ ವೇಳೆಗೆ ಹಿಂದೂಸ್ತಾನಿ ಸಂಗೀತದ ಕಡೆಗೆ ಆಕರ್ಷಿತರಾಗಿ ಕಸ್ತೂರಿ ಅವರಿಂದ ಕಲಿಯುತ್ತಲೂ ಇದ್ದ ಭೈರಪ್ಪನವರಿಗೆ ಈ ಸುದೀರ್ಘ ಬರಹವನ್ನೇ ಆಧರಿಸಿ ರಾಗಗಳ ಭಾವನಾತ್ಮಕ ಸೆಳೆತಗಳ ಹಿನ್ನೆಲೆಯಲ್ಲಿ ಕಾದಂಬರಿ ಬರೆಯಬೇಕು ಎನಿಸಿತು. ಈ ವಸ್ತುವನ್ನು ಕಾದಂಬರಿಯಾಗಿ ಬೆಳೆಸಿ ಹಸ್ತಪ್ರತಿ ಸಿದ್ಧಪಡಿಸಿದರು.

ವಿದ್ವಾಂಸರೂ ಆಗಿದ್ದ ಸಹೋದ್ಯೋಗಿ ಪ್ರೊ.ಶ್ರೀನಿವಾಸ ತೋಫಖಾನೆ ಅವರು ಆ ವೇಳೆಗೆ ಭೈರಪ್ಪನವರಿಗೆ ಆತ್ಮೀಯರು ಹಾಗೂ ಗುರುಗಳ ಸಮಾನರಾಗಿದ್ದರು. ಹಸ್ತಪ್ರತಿಯನ್ನು ತೋಫಖಾನೆ ಓದಿದ ನಂತರ ಆಗ ಹುಬ್ಬಳ್ಳಿಯಲ್ಲಿ ಮಾತ್ರ ಕೇಂದ್ರ ಕಚೇರಿ ಹೊಂದಿದ್ದ ಸಾಹಿತ್ಯ ಬಂಢಾರ ತಾನಾಗಿಯೇ ಇಷ್ಟಪಟ್ಟು ಪ್ರಕಟಿಸಿತು. ಇದಾದ ನಂತರ, ಬರಹದಲ್ಲಿನ ಇನ್ನಷ್ಟು ಶುದ್ಧಿಗಾಗಿ ಸಂಸ್ಕೃತ ಜ್ಞಾನ ಬೇಕು ಎಂಬ ತೋಫಖಾನೆಯವರ ಸೂಚನೆಯಂತೆ, ಭೈರಪ್ಪ ಸಂಸ್ಕೃತವನ್ನೂ ಕಲಿತರು. ತೋಫಖಾನೆಯವರೇ ಕಲಿಸಿದ್ದು ವಿಶೇಷ. ತೋಫಖಾನೆ ಮತ್ತವರ ಕುಟುಂಬದೊಂದಿಗೆ ಭೈರಪ್ಪ ಕೊನೆಯವರೆಗೂ ಅತ್ಯಂತ ಆತ್ಮೀಯರಾಗಿದ್ದರು.

ಗೋವಿಂದರಾಯರು ಮತ್ತು ಭೈರಪ್ಪ: ಭೈರಪ್ಪನವರ ಹುಬ್ಬಳ್ಳಿ ಸ್ನೇಹ ವಲಯದ ಬಗ್ಗೆ ಹೇಳುವಾಗ ಸಾಹಿತ್ಯ ಬಂಢಾರ' ಪ್ರಕಾಶನ ಸಂಸ್ಥೆಯ ಮಾಲೀಕ ಗೋವಿಂದರಾಯರು ಹಾಗೂ ಸಾಹಿತಿಯ ಸಂಬಂಧ ಹೇಳದಿದ್ದರೆ ಅಪೂರ್ಣ.ಧರ್ಮಶ್ರೀ’ಯನ್ನು ಓದಿ, ತಾವೇ ಖುದ್ದಾಗಿ ಉದಯೋನ್ಮುಖ ಲೇಖಕನನ್ನು ಭೇಟಿಯಾಗಿ ಪ್ರಕಟಿಸಿದ್ದಂತೂ ಸರಿ. ಆದರೆ ಆ ನಂತರ ಭೈರಪ್ಪ ದೇಶದೆಲ್ಲೆಡೆ ಖ್ಯಾತನಾಮರಾದ ನಂತರವೂ ಗೋವಿಂದರಾಯರು ಹಾಗೂ ಸಾಹಿತಿ ಸಂಬಂಧ ದಟ್ಟವಾಗಿತ್ತು. ಕೊನೇತನಕವೂ ಇತ್ತು. ಕೇವಲ ಪ್ರಕಾಶಕ- ಲೇಖಕರ ಸಂಬಂಧ ಆಗದೇ, ಪರಸ್ಪರ ಕೌಟುಂಬಿಕವಾಗಿ ಹತ್ತಿರರಾಗಿದ್ದರು.

ಒಮ್ಮೆ `ಪರ್ವ’ ಮತ್ತಿತರ ಬರಹಗಳ ನಂತರ ಭೈರಪ್ಪ ಸುಸ್ತಾದರು. ನಿದ್ರೆ ದೂರವಾಗಿತ್ತು. ವಿಷಯ ತಿಳಿದ ಗೋವಿಂದರಾಯರು ಭೈರಪ್ಪನವರಿಗೆ ಕೂಡಲೇ ಬರುವಂತೆ ಆಗ್ರಹಿಸಿ, ತಮ್ಮ ಮನೆಯಲ್ಲಿಟ್ಟುಕೊಂಡು ಉಪಚರಿಸಿದ್ದರು.

`ನನ್ನನ್ನು ಉಳಿಸಿಕೊಂಡು ದಾಜಿಬಾನಪೇಟೆಯ ಸಿಟಿ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆಗ ಚಿಕಿತ್ಸೆಗೆಂದು ಹೋದಾಗ ಅಲ್ಲಿನ ವೈದ್ಯರು- ನರ್ಸ್‌ಗಳು ನನ್ನನ್ನು ಅತಿಥಿಯಂತೆ ಸ್ವಾಗತಿಸಿ, ಸನ್ಮಾನಿಸಿ ಚಿಕಿತ್ಸೆ ಕೊಟ್ಟಿದ್ದು ಇನ್ನೂ ನೆನಪಿದೆ’ ಎಂದು ಭೈರಪ್ಪ ಕೊನೇ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದಾಗ (2024) ನೆನಪಿಸಿಕೊಂಡಿದ್ದರು.

ಸಾಹಿತ್ಯ ಪ್ರಕಾಶನದ ಸುಬ್ಬು'ನೊಂದಿಗೆ ಗೋವಿಂದರಾಯರು ಹಾಗೂ ಬಂಢಾರ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಹುಬ್ಬಳ್ಳಿಯಲ್ಲಿರುವ ಆ ಸಂಸ್ಥೆಯ ಕವಲು ಎನ್ನಬಹುದಾದಸಾಹಿತ್ಯ ಪ್ರಕಾಶನ’ ಭೈರಪ್ಪನವರ ಹೃದಯಕ್ಕೆ ಹತ್ತಿರದ್ದಾಗಿತ್ತು. ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಅವರ ಪಾಲಿಗೆ `ಸುಬ್ಬು’.

ಯಾವಾಗಲೇ ಹುಬ್ಬಳ್ಳಿಗೆ ಬಂದರೂ ವಿಜಯನಗರದಲ್ಲಿರುವ ಸುಬ್ರಹ್ಮಣ್ಯ ಮನೆಯ ಮಹಡಿಯ ಕೋಣೆಯಲ್ಲಿ ಭೈರಪ್ಪ ಇರುತ್ತಿದ್ದರು. ಗೋವಿಂದರಾಯರಂತೆ, ಸುಬ್ರಹ್ಮಣ್ಯ ಕುಟುಂಬ ಕೂಡ ಭೈರಪ್ಪನವರ ಆಪ್ತವಲಯದ್ದಾಗಿತ್ತು. ಭೈರಪ್ಪನವರನ್ನು ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಬರುವುದೂ ಸೇರಿದಂತೆ ಇಲ್ಲಿರುವಷ್ಟು ದಿನವೂ ಓಡಾಡಿಸುವುದು ಸುಬ್ರಹ್ಮಣ್ಯರದ್ದೇ ಪ್ರೀತಿಯ ಕೆಲಸವಾಗಿತ್ತು.

ಕೊನೇ ಭೇಟಿ… ರೈಲಿನಲ್ಲಿ ಒಬ್ಬರೇ…: ಭೈರಪ್ಪನವರು ತಮ್ಮ ನೆಚ್ಚಿನ ಹುಬ್ಬಳ್ಳಿಗೆ ಕೊನೇ ಭೇಟಿ ನೀಡಿದ್ದು 2024ರ ಸೆಪ್ಟೆಂಬರ್‌ನಲ್ಲಿ. ಅಷ್ಟು ವಯಸ್ಸಾಗಿದ್ದರೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಬ್ಬರೇ ರೈಲಿನಲ್ಲಿ ಬಂದಿದ್ದರು.

ಅವರನ್ನು ಕರೆತರಲು ನಿಲ್ದಾಣಕ್ಕೆ ಹೋಗಿದ್ದ ಸುಬ್ರಹ್ಮಣ್ಯ ಅವರೊಂದಿಗೆ ಕಾರಿನಲ್ಲಿ ಸಂಚರಿಸುವಾಗ, `ಏನಿದು ಈ ನಗರದ ರಸ್ತೆಗಳು? ಇಲ್ಲಿನ ಕಾರ್ಪೋರೇಟರ್‌ಗಳು, ಶಾಸಕರು, ಸಂಸದರಿಗೆ ಜನ ಏಕೆ ಬಲವಾಗಿ ಪ್ರಶ್ನಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದೇ ಮಾತನ್ನು ಪತ್ರಿಕೆಗಳ ಮುಂದೆಯೂ ಹೇಳಿ, `ಹಳೇ ಮೈಸೂರು ಭಾಗದಲ್ಲಿ ಕೊನೇ ಪಕ್ಷ ಜನಾಕ್ರೋಶ ಪ್ರತಿಭಟನೆಯಲ್ಲಿ ಕೊನೆಗೊಳ್ಳುತ್ತದೆ; ಹೀಗಾಗಿ ರಸ್ತೆಯಂತಹ ವಿಷಯಗಳಿಗೆ ಗಮನವನ್ನು ಜನಪ್ರತಿನಿಧಿಗಳು ಕೊಡಬೇಕಾಗುತ್ತದೆ’ ಎಂದಿದ್ದರು. ತಮ್ಮ ಕೊನೇ ಭೇಟಿಯಲ್ಲಿ ಇಡೀ ಅವಳಿನಗರವನ್ನು ಸುತ್ತಿ ತಮ್ಮ ತಲೆಮಾರಿನ ಅನೇಕ ಪರಿಚಿತರನ್ನು ಭೇಟಿಯಾಗಿದ್ದರು. ಅಲ್ಲದೇ, ಅನೇಕ ಕೆಲ ಕಲಾವಿದರನ್ನು ಸುಬ್ರಹ್ಮಣ್ಯ ಅವರ ಮನೆಗೆ ಕರೆಸಿಕೊಂಡು ತಮ್ಮ ಮೆಚ್ಚಿನ ಹಿಂದೂಸ್ತಾನಿ ಸಂಗೀತವನ್ನು ಕೇಳಿ ಆನಂದಿಸಿದ್ದರು.

ಸಂಯುಕ್ತ ಕರ್ನಾಟಕ ಜೊತೆ ಹುಬ್ಬಳ್ಳಿಯಲ್ಲಿ ಇರುವಷ್ಟೂ ದಿನ ತಪ್ಪದೇಸಂಯುಕ್ತ ಕರ್ನಾಟಕ’ವನ್ನು ಓದುತ್ತಿದ್ದೆ; ಹುಬ್ಬಳ್ಳಿಗೂ ಮೊದಲು ರಾಣೆಬೆನ್ನೂರು ಹೋಟೆಲ್ ಒಂದರಲ್ಲಿ ಕೆಲಸದಲ್ಲಿದ್ದಾಗ, `ಸಂಯುಕ್ತ ಕರ್ನಾಟಕ’ದಿಂದ ವಿದ್ಯಮಾನಗಳನ್ನು ಆ ಸಣ್ಣ ವಯಸ್ಸಿನಲ್ಲೇ ತಿಳಿದುಕೊಳ್ಳುತ್ತಿದ್ದೆ. ಆ ನಂತರ ರಾಜ್ಯಕ್ಕೆ ಮರಳಿದ ಮೇಲೆ ಪುನಃ ಬಿಡದೇ ಓದುತ್ತಿದ್ದೆ ಎಂದು ಭೈರಪ್ಪ ತಮ್ಮ ಕೊನೇ ಭೇಟಿಯಲ್ಲಿ, ಪತ್ರಿಕೆಗೆ ವಿಶೇಷ ಸಂದರ್ಶನ ನೀಡುವಾಗ ಹೇಳಿದ್ದರು.

ನಾಡಿನ ಅತ್ಯಂತ ಹಿರಿಯ ಪತ್ರಿಕೆ ಇಂದಿಗೂ ತನ್ನ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ನಡೆಯುತ್ತಿರುವುದು, ವಿಶೇಷವಾಗಿ ಸಾಹಿತ್ಯದಂತಹ ಸೃಜನಾತ್ಮಕ ವಲಯಗಳಲ್ಲಿ ಇಸಂಗಳಿಗೆ (ವಾದ) ಬೆಲೆ ಕೊಡದೇ ಪಾತ್ರರನ್ನು ಗುರುತಿಸುತ್ತಿರುವುದು ನನಗೆ ಸಂತೋಷದ ವಿಷಯ ಎಂದು ಮನದುಂಬಿ ಹೇಳಿದ್ದರು.

ಭೈರಪ್ಪನವರ ಕಾದಂಬರಿಗಳ ಬಗ್ಗೆ ಸಂಯುಕ್ತ ಕರ್ನಾಟಕ' ಕಾರ್ಯಾಲಯದಲ್ಲಿ ದೊಡ್ಡ ವಿಚಾರ ಸಂಕಿರಣವೊಂದು ಕೆಲ ವರ್ಷಗಳ ಹಿಂದೆ ನಡೆದಿತ್ತು. ಇಡೀ ದಿನ ಕೂತು ಆಲಿಸಿದ ಭೈರಪ್ಪ ಸಾಹಿತ್ಯ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಂದು ಕೊಪ್ಪೀಕರ ರಸ್ತೆಯಸಂಯುಕ್ತ ಕರ್ನಾಟಕ’ದ ಕಬ್ಬೂರು ಸಭಾಭವನದಲ್ಲಿ ಸಾಹಿತ್ಯ ಜಾತ್ರೆಯೇ ಉಂಟಾಗಿತ್ತು.

ಮುಂಬೈ, ಗದಗ, ರಾಣೆಬೆನ್ನೂರು ಸಂಪರ್ಕ: ಎಂ.ಎ ಮುಗಿಸಿದ ನಂತರ ಉಪನ್ಯಾಸಕರಾಗಿ ಹುಬ್ಬಳ್ಳಿಯಲ್ಲಿ ವೃತ್ತಿ ಆರಂಭಿಸುವ ಮೊದಲೇ ಭೈರಪ್ಪನವರಿಗೆ ಉತ್ತರ ಕರ್ನಾಟಕ ಹಾಗೂ ಈ ಭಾಗದ ಕೇಂದ್ರ ಸ್ಥಾನವಾಗಿದ್ದ ಮುಂಬೈಗಳ ಪರಿಚಯವಿತ್ತು !

ಭೈರಪ್ಪ ಒಂಬತ್ತನೇ ತರಗತಿಯಲ್ಲಿದ್ದಾಗ ಕಷ್ಟದ ಬೇಗೆ, ತಾಯಿಯನ್ನು ಕಳೆದುಕೊಂಡ ಅನಾಥ ಪ್ರಜ್ಞೆ ಹಾಗೂ ಜೀವನದ ಒತ್ತಡ ನಿರ್ವಹಿಸಲು ಆ ಸಣ್ಣ ವಯಸ್ಸಿಗೆ ಆಗುವ ಗೊಂದಲಗಳಿಂದ ಊರು ಬಿಟ್ಟು ಸ್ನೇಹಿತನೊಂದಿಗೆ ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಮಿಲಿಟರಿ ಭರ್ತಿಗೆ ಯತ್ನಿಸಿ ವಿಫಲರಾಗಿ ಇಬ್ಬರೂ ರೈಲ್ವೆ ಹಳಿಗಳ ಗುಂಟ ನಡೆಯುತ್ತ ಮುಂಬೈಗೆ ಹೊರಟರು. ಮಾರ್ಗ ಮಧ್ಯೆ ಕುಂದಗೋಳದಲ್ಲಿ ವ್ಯಕ್ತಿಯೊಬ್ಬರು ಅವರ ಸಂಕಷ್ಟ ಕೇಳಿ, ರಾಣೆಬೆನ್ನೂರಿಗೆ ಕರೆದೊಯ್ದರು. ರಾಣೆಬೆನ್ನೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಭೈರಪ್ಪನವರ ಮೇಲೆ ಆ ಹೋಟೆಲ್ ಮಾಲೀಕ ಹಣ ಕಳವು ಆರೋಪ ಹೊರಿಸಿದ್ದರಿಂದ ಒಂದು ದಿನ ಪೊಲೀಸ್ ಠಾಣೆಯ ಅನುಭವವೂ ಬಾಲಕ ಭೈರಪ್ಪಗೆ ಆಯಿತೆನ್ನಿ.

ಅದಾದ ನಂತರ ಪುನಃ ಮುಂಬೈಗೆ ಹೋಗೋದೇ ಸರಿ ಎಂದು ಮುಂಬೈಗೆ ರೈಲನ್ನೇರಿದರು. ಮುಂಬೈ ಸೆಂಟ್ರಲ್ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿದರು. ನಂತರ ಕನ್ನಡಿಗ ಹುಡುಗರು ಸಿಕ್ಕಿದ್ದರಿಂದ ಅವರ ಕೋಣೆಯಲ್ಲಿ ಉಳಿದು ದುಡಿಯುತ್ತಿದ್ದರು. ಅದೇ ವೇಳೆಗೆ ಕೆಲ ಕನ್ನಡದ ಸಾಧುಗಳ ಸಂಪರ್ಕ ಏರ್ಪಟ್ಟು, ಅವರೊಂದಿಗೆ ಕಾವಿ ತೊಟ್ಟು ರೈಲಿನಲ್ಲಿ ಹುಬ್ಬಳ್ಳಿ ಮೂಲಕ ಗದಗ ತಲುಪಿದರು. ಗದುಗಿನಲ್ಲಿದ್ದಾಗ ತಾವು ಮಾಡುತ್ತಿರುವುದೇನು? ಎಂಬ ಪ್ರಶ್ನೆ ಮೂಡಿತು. ಎಂಟು ತಿಂಗಳ ಹಿಂದೆ ಊರು ಬಿಟ್ಟು, ಮೈಸೂರಿನಲ್ಲಿ ಮುಂದಿನ ವ್ಯಾಸಂಗ ಮಾಡೋದನ್ನು ಬಿಟ್ಟು ಎಂತಹ ಕೆಲಸ ಮಾಡಿದೆ ಎಂಬ ಉತ್ಸಾಹನಷ್ಟದ ಮಾನಸಿಕ ಸ್ಥಿತಿ ಆವರಿಸಿತು. ಕಾವಿ ಬಿಚ್ಚೆಸೆದು ಪುನಃ ಮೈಸೂರಿನತ್ತ ಮುಖ ಮಾಡಿದರು. ವ್ಯಾಸಂಗ ಮುಂದುವರಿಸಿದರು. ತಮ್ಮ ಸಂಕಷ್ಟದ ಬದುಕಿನಲ್ಲಿ ಇದೊಂದು ಮರೆಯಲಾಗದ ಅನುಭವ ಎನ್ನುತ್ತಿದ್ದರು ಭೈರಪ್ಪ.

ಭೈರಪ್ಪ ಮತ್ತು ಕಸ್ತೂರಿಯವರ ಸಂಗೀತ: ಎಸ್.ಎಲ್. ಭೈರಪ್ಪನವರು ಅಂಚಟಗೇರಿ ಓಣಿಯ ಕಸ್ತೂರಿ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದರು. ಆಗ ಅವರೊಂದಿಗೆ ಇದೇ ಶಿಕ್ಷಕರ ಬಳಿ ಡಾ. ಗೋವಿಂದ ಮಣ್ಣೂರ ತಬಲಾ ಕಲಿಯುತ್ತಿದ್ದರು. ಇನ್ನೂ ವಿವಾಹ ಆಗದಿದ್ದ ಭೈರಪ್ಪನವರು ಆಗ ನಿಷ್ಠೆಯಿಂದ, ನಿಯಮಿತವಾಗಿ ಕಸ್ತೂರಿ ಅವರ ಬಳಿ ಸಂಗೀತ ಹೇಳಿಸಿಕೊಳ್ಳುತ್ತಿದ್ದರು ಎಂದು ಡಾ. ಮಣ್ಣೂರ ಪತ್ರಿಕೆಯೊಂದಿಗೆ ಮಾತನಾಡುತ್ತ ನೆನಪು ಮಾಡಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version