
ಹುಬ್ಬಳ್ಳಿ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಫೆಬ್ರವರಿ 28 ( ಶನಿವಾರದಂದು) ಶ್ರೀ ಸಿದ್ದಾರೂಢ ಸ್ವಾಮೀಜಿ (ಎಸ್ಎಸ್ಎಸ್) ಹುಬ್ಬಳ್ಳಿ ನಿಲ್ದಾಣದಿಂದ ಪುಣೆಗೆ ಏಕಮುಖ ಕಾಯ್ದಿರಿಸದ (Unreserved) ವಿಶೇಷ ಎಕ್ಸ್ಪ್ರೆಸ್ ರೈಲನ್ನು ಓಡಿಸಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ – ಪುಣೆ ಏಕಮುಖ ವಿಶೇಷ ಎಕ್ಸ್ಪ್ರೆಸ್ ರೈಲು ( ರೈಲು ಸಂಖ್ಯೆ 07343) ಶನಿವಾರ ರಾತ್ರಿ 11:45ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 11:00 ಗಂಟೆಗೆ ಪುಣೆ ತಲುಪಲಿದೆ.
ಈ ವಿಶೇಷ ರೈಲು ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ರೈಲು ಒಟ್ಟು 19 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 15 ಸಾಮಾನ್ಯ ದ್ವಿತೀಯ ದರ್ಜೆ/ಸ್ಲೀಪರ್ ಕ್ಲಾಸ್ ಬೋಗಿಗಳು, 02 ಎಸಿ ಬೋಗಿಗಳು (ಎಸಿ ಬೋಗಿಗಳು ಬೀಗ ಹಾಕಿದ ಸ್ಥಿತಿಯಲ್ಲಿರುತ್ತವೆ) ಮತ್ತು 02 ಲಗೇಜ್ ಹಾಗೂ ಬ್ರೇಕ್ ವ್ಯಾನ್ (SLR) ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.