ಹುಬ್ಬಳ್ಳಿ: ಹುಬ್ಬಳ್ಳಿ ಹಳೆ ಬಸ್ ನಿಲ್ದಾಣವನ್ನು ಆಗಸ್ಟ್ 30ಕ್ಕೆ ಪುನಃ ಆರಂಭ ಮಾಡಲಾಗುತ್ತಿದೆ. ಹೀಗಾಗಿ ನಿಲ್ದಾಣದ ಮುಂಭಾಗದಲ್ಲಿರುವ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೇ ಗಣೇಶ ವಿಸರ್ಜನೆಗೆ ಬಳಸಲಾಗುವ ಈ ಮಾರ್ಗವನ್ನು ಈ ಬಾರಿಯೂ ಮೆರವಣಿಗೆಗಳಿಗೆ ಅನುಕೂಲವಾಗಲೆಂದು ಅಧಿಕಾರಿಗಳು ಯೋಜಿಸುತ್ತಿದ್ದಾರೆ.
ಚೆನ್ನಮ್ಮಾ ಸರ್ಕಲ್ ನಿಂದ ಬಸವ ವನ ವರೆಗಿನ ಫ್ಲೈ ಓವರ್ ನಿರ್ಮಾಣ ಕಾಮಗಾರಿಗಾಗಿ ಕಳೆದ ಏಪ್ರಿಲ್ 20 ರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಆಗಸ್ಟ್ 20ರ ವರೆಗೆ ಗಡುವು ನೀಡಲಾಗಿತ್ತು. ಸದ್ಯ ಈ ನಾಲ್ಕು ತಿಂಗಳ ಅವಧಿ ಮುಕ್ತಾಯವಾಗಿದ್ದು, ಕಾಮಗಾರಿ ಮುಕ್ತಾಯವಾಗದ ಕಾರಣ ಆಗಸ್ಟ್ 30ರ ವರೆಗೆ ವಿಸ್ತರಿಸಲಾಗಿದೆ.
ನಿರಂತರ ಮಳೆ, ಕಾರ್ಮಿಕರ ಕೊರತೆ: ನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ಆಗಸ್ಟ್ 20 ರ ಗಡವು ದಾಟಲು ನಿರಂತರ ಮಳೆ ಮತ್ತು ಕಾರ್ಮಿಕರ ಕೊರತೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಗಣೇಶ ವಿಸರ್ಜನೆಗೆ ಪರ್ಯಾಯ ಮಾರ್ಗ: ಫ್ಲೈ ಓವರ್ ಕಾಮಗಾರಿ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಆದರೆ ಮೇಲ್ಸೇತುವೆಯ ಕೆಳಗೆ ಎತ್ತರದ ನಿರ್ಬಂಧಗಳಿದ್ದು, ಎತ್ತರದ ವಿಗ್ರಹಗಳು ಸಾಗುವುದು ಸಾಧ್ಯವಿಲ್ಲ. ಹೀಗಾಗಿ ಕಾರವಾರ ರಸ್ತೆ ಮಾರ್ಗವಾಗಿ ಮೆರವಣಿಗೆ ಸಾಗಿ ಇಂದಿರಾ ಗಾಜಿನ ಮನೆ ಬಳಿಯ ಬಾವಿಯಲ್ಲಿ ಎತ್ತರದ ವಿಗ್ರಹಗಳ ವಿಸರ್ಜನೆಗೆ ಯೋಜಿಸಲಾಗುತ್ತಿದೆ.
ಫ್ಲೈ ಓವರ್ ಮಾರ್ಗದಲ್ಲಿ ಕೇವಲ 18 ಅಡಿಗಿಂತ ಕಡಿಮೆ ಎತ್ತರದ ವಿಗ್ರಹಗಳನ್ನು ಮಾತ್ರ ತೆಗೆದುಕೊಂಡು ಹೋಗಬಹುದು. ಆದರೆ ಮರಾಠಾ ಗಲ್ಲಿಯ ಹುಬ್ಬಳ್ಳಿ ಚಾ ಮಹಾರಾಜ, ದಾಜಿಬಾನಪೇಟ್‌ನ ಹುಬ್ಬಳ್ಳಿ ಕಾ ರಾಜಾ ಸೇರಿದಂತೆ 18 ಅಡಿಗಿಂತ ಎತ್ತರದ ವಿಗ್ರಹಗಳ ಮೆರವಣಿಗೆಗೆ ಪರ್ಯಾಯ ಮಾರ್ಗವನ್ನು ಸಂಚಾರ ಪೊಲೀಸರು ಯೋಜಿಸುತ್ತಿದ್ದಾರೆ.
ಉದ್ಘಾಟನೆಗೊಂಡು ಮುಚ್ಚಿದ ಬಸ್ ನಿಲ್ದಾಣ: ಚೆನ್ನಮ್ಮಾ ವೃತ್ತದ ಬಳಿಯಿರುವ ಹಳೆ ಬಸ್ ನಿಲ್ದಾಣವನ್ನು ಅತ್ಯುತ್ತಮ ಮಾದರಿಯಲ್ಲಿ ನಿರ್ಮಿಸಿ ಜನವರಿಯಲ್ಲಿ ಉದ್ಘಾಟಿಸಲಾಯಿತು. ಆದರೆ, ನಂತರ ಕೆಲವೇ ದಿನಗಳಲ್ಲಿ ಫ್ಲೈಓವರ್ ಕಾಮಗಾರಿಗಾಗಿ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಅಂದಿನಿಂದ ಬಸ್ ನಿಲ್ದಾಣ ಮುಚ್ಚಲ್ಪಟ್ಟಿದೆ.
ಹಳೆ ಕೋರ್ಟ್ ವೃತ್ತದಿಂದ ಚೆನ್ನಮ್ಮಾ ವೃತ್ತಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಇನ್ನೂ ಕಾಮಗಾರಿ ನಡೆದಿದ್ದು, ಸಂಚಾರಕ್ಕೆ ಮುಕ್ತವಾಗಲು ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.
ಸೆಪ್ಟೆಂಬರ್ 10 ರಂದು ಮುಕ್ತಾಯ: “ಈಗಾಗಲೇ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಹೊಸೂರು ಹಾಗೂ ವಿಜಯಪುರ ರಸ್ತೆ ಕಡೆಗೆ ಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿಯು ಸೆಪ್ಟೆಂಬರ್ 10 ರಂದು ಮುಕ್ತಾಯವಾಗಲಿದೆ. ಶೇ. 90ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಉಳಿದ್ದ ಶೇ. 10ರಷ್ಟು ಕಾಮಗಾರಿಗೆ ಕಾಲಾವಕಾಶ ನೀಡಲಾಗಿದೆ. ಆಗಸ್ಟ 25 ರಂದು ಖುದ್ದಾಗಿ ಮೇಲ್ಸೇತುವೆ ಕಾಮಗಾರಿಯನ್ನು ಪರಿಶೀಲನೆ ಮಾಡಲಾಗುವುದು. ಅಲ್ಲದೇ ಆಗಸ್ಟ್ 30ಕ್ಕೆ ಹಳೆ ಬಸ್ ನಿಲ್ದಾಣವನ್ನು ಪುನಃ ಆರಂಭಿಸಲು ನಿರ್ಧರಿಸಲಾಗಿದೆ. ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ. ಟ್ರಾಫಿಕ್ ಸಮಸ್ಯೆ ಹಿನ್ನೆಲೆಯಲ್ಲಿ ಗದಗ ರಸ್ತೆಯ ಕಾಮಗಾರಿಯನ್ನು ಅಕ್ಟೋಬರ್ 1 ರಂದು ಪ್ರಾರಂಭಿಸಲಾಗುವುದು. ಮಳೆಯಿಂದ ಕಾಮಗಾರಿಗೆ ವಿಳಂಬವಾಗಿದೆ” ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾಹಿತಿ ನೀಡಿದ್ದಾರೆ.
