ಹುಬ್ಬಳ್ಳಿ: ರಾಣಿ ಚೆನ್ನಮ್ಮ(ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ಶುಕ್ರವಾರ ಅದ್ದೂರಿ ಮೆರವಣಿಗೆ ಮೂಲಕ ಸಂಭ್ರಮದಿಂದ ವಿಸರ್ಜಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಗಣೇಶಮೂರ್ತಿ ವಿಸರ್ಜನಾ ಮರವಣೆಗೆ ಸಂಜೆ 7ರವರೆಗೆ ನಡೆದು ಹೊಸೂರು ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
ಮೂರು ದಿನಗಳವರೆಗೆ ಪ್ರತಿಷ್ಠಾಪಿಸಿದ್ದ ರಾಣಿ ಚೆನ್ನಮ್ಮ ಮೈದಾನ ಉತ್ಸವ ಮಹಾಮಂಡಳಿ ಕಾರ್ಯಕರ್ತರು ಹಾಗೂ ಹತ್ತಾರು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಿಸಿದ್ದರು. ಮೂರನೇ ದಿನವಾದ ಶುಕ್ರವಾರ ಮಾಜಿ ಸಂಸದ ಪ್ರತಾಪಸಿಂಹ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಪಂಚವಾದ್ಯ, ಯಕ್ಷಗಾನ ಕುಣಿತ, ಡೋಲು, ಕುಂಭ, ಚಂಡೆ, ಶಹನಾಯಿ, ತಮಟೆ, ಕೋಲಾಟ, ಡೋಲ್ ತಾಶ್, ಜಗ್ಗಲಗಿ, ಗೊಂಬೆ ಕುಣಿತ, ಕಂಸಾಳೆ, ಝಾಂಜ್ ಸೇರಿದಂತೆ ಸುಮಾರು 22 ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ರಸ್ತೆಯುದ್ದಕ್ಕೂ ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಸಂಗೀತಕ್ಕೆ ತಕ್ಕಂತೆ ಭಗವಾಧ್ವಜ ಹಾರಾಡಿಸುತ್ತ ಯುವಕರೂ ನಾಚುವಂತೆ ವೃದ್ಧರು ಹಾಗೂ ಮಹಿಳೆಯರು ಹೆಜ್ಜೆ ಹಾಕಿದರು. ನೆರೆದವರು ಗಣೇಶ, ಹನುಮಾನ್ ಹಾಗೂ ಶ್ರೀರಾಮನಿಗೆ ಜೈಕಾರ ಮೊಳಗಿಸಿದರು.
ಗಣಪತಿ ಬಪ್ಪಾ ಮೋರಯಾ… ಎಂದು ಕೇಕೆ ಹಾಕಿದರು. ಮೆರವಣಿಗೆಯು ಚನ್ನಮ್ಮ ಮೈದಾನದಿಂದ ಆರಂಭವಾಗಿ ನಿಲಿಜನ್ ರಸ್ತೆ, ಕಾಟನ್ ಮಾರುಕಟ್ಟೆ ಮಾರ್ಗವಾಗಿ ಇಂದಿರಾ ಗಾಜಿನ ಮನೆಯವರೆಗೆ ಸಾಗಿತು. ನಂತರ ಹೊಸೂರು ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಹಿಂದೂಗಳೆಲ್ಲರೂ ಒಂದಾಗಿರಿ: ಗಣೇಶ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹ ಅವರು, ಜಾತಿ ಮೇಲೆ ನಾಯಕರಾಗದೇ ಹಿಂದು ಧರ್ಮದ ನಾಯಕರಂತಾಗಿ ಜಾತಿ ವ್ಯವಸ್ಥೆ ಮನೋಭಾವದಿಂದ ಹಿಂದುಗಳು ದೂರ ಬರಬೇಕು. ಎಲ್ಲ ಹಿಂದೂಗಳು ಒಂದಾಗಿರಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ನಡೆಸಿದ ಹೋರಾಟ ವಿವರಿಸಿದ ಅವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಹಿಂದು ಧಾಮಿಕ ಶ್ರದ್ಧಾ ಕೇಂದ್ರಗಳ ಬಗ್ಗೆ ಷಡ್ಯಂತ್ರ ಮಾಡಿ ಅಪಮಾನ ಮಾಡುತ್ತಿದ್ದರೂ ಏನೂ ಕ್ರಮ ಜರುಗಿಸಿರಲಿಲ್ಲ. ಹೋರಾಟದ ಧ್ವನಿ, ಭಕ್ತರ ಆಕ್ರೋಶ ವ್ಯಕ್ತವಾದ ಮೇಲೆ ಎಚ್ಚೆತ್ತುಕೊಂಡು ತನಿಖೆಗೆ ಮುಂದಾಯಿತು ಎಂದು ವಾಗ್ದಾಳಿ ನಡೆಸಿದರು.