Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: DJ ಇಲ್ಲದೆ ಇದ್ರು ಮಹಾಗಣಪನಿಗೆ ಅದ್ಧೂರಿ ವಿದಾಯ

ದಾವಣಗೆರೆ: DJ ಇಲ್ಲದೆ ಇದ್ರು ಮಹಾಗಣಪನಿಗೆ ಅದ್ಧೂರಿ ವಿದಾಯ

0

ದಾವಣಗೆರೆ: ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಭಕ್ತರು, ಡಿಜೆಯಿಲ್ಲದಿದ್ದರೂ ಆರ್ಕೇಸ್ಟ್ರಾ ಹಾಡಿಗೆ ಹೆಜ್ಜೆ ಹಾಕಿದ ಯುವಜನರು, ಗಣಪ ಮೂರ್ತಿ ಹೊರಗೆ ಬರುತ್ತಿದ್ದಂತೆ ವರುಣನ ಸಿಂಚನ. ಹೀಗೆ ದಾವಣಗೆರೆಯ ಹಿಂದೂ ಮಹಾಗಣಪತಿಯ ಶೋಭಾಯಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಾಗಿತು.

ಶನಿವಾರ ಮಧ್ಯಾಹ್ನ ಸುಮಾರು 12ರಹೊತ್ತಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮತ್ತು ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮೆರವಣಿಗೆಗೆ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಗಣಪನ ಶೋಭಾಯಾತ್ರೆಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯೂ ಸಾಗಿದ್ದು, ಎಲ್ಲರ ಗಮನ ಸೆಳೆಯಿತು.

ಈ ವರ್ಷ ಡಿಜೆ ನಿಷೇಧವಿದ್ದ ಕಾರಣಕ್ಕೆ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟಿನಿಂದ ಯುವಕ-ಯುವತಿಯರಿಗೆ ಪ್ರತ್ಯೇಕವಾಗಿಯೇ ಆರ್ಕೇಸ್ಟ್ರಾ ನಿಯೋಜನೆಗೊಳಿಸಲಾಗಿತ್ತು. ನೆರೆದಿದ್ದ ಜನರಲ್ಲಿ ಶೇ.75ರಷ್ಟು ಯುವಜನರೇ ಇದ್ದಿದ್ದು ವಿಶೇಷ. ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೂ ಶೋಭಾಯಾತ್ರೆಗೆ ಶೋಭೆ ತಂದಿತ್ತು.

ನಾಸಿಕ್ ಡೋಲು, ಸಮ್ಮಾಳ, ವಿವಿಧ ವೇಷಧಾರಿಗಳು ನೋಡುಗರ ಕಣ್ಮನ ಸೆಳೆಯಿತು. ಯುವತಿಯರು ಕುಣಿದು ಕುಪ್ಪಳಿಸಲು ಪ್ರತ್ಯೇಕ ಆರ್ಕೇಸ್ಟ್ರಾ ವ್ಯವಸ್ಥೆ ಮಾಡಿದ್ದರಿಂದ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡು ಹೆಜ್ಜೆಹಾಕಿ ಸಂಭ್ರಮಿಸಿದರು. ಯುವಕರು ತಾವೇನು ಕಡಿಮೆಯಿಲ್ಲ ಎಂಬಂತೆ ಕುಣಿದು ಕುಪ್ಪಳಿಸಿದರು.

ಸಂಭ್ರಮ ಇಮ್ಮಡಿಗೊಳಿಸುತ್ತಿದ್ದ ಡಿಜೆ ಈ ವರ್ಷ ನಿಷೇಧವಿದ್ದ ಕಾರಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಪಾಲ್ಗೊಳ್ಳದಿರುವುದು ಕಂಡುಬಂತು. ಪ್ರತಿವರ್ಷ ಸರಿ ಸುಮಾರು ಲಕ್ಷ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದ ಭಕ್ತರು ಈ ಸಲ ಸಾವಿರಾರು ಸಂಖ್ಯೆಗೆ ಕುಸಿದಿದ್ದರು. ಇದೇ ಕಾರಣಕ್ಕಾಗಿ ಬೆಳಿಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಮೆರವಣಿಗೆ ಭಕ್ತರ ಸಂಖ್ಯೆ ಏರುಮುಖವಾಗಲು ಕಾದು ಮಧ್ಯಾಹ್ನ 12ಕ್ಕೆ ಶೋಭಾಯಾತ್ರೆಗೆ ಚಾಲನೆ ನೀಡಬೇಕಾಯಿತು.

ಮೆರವಣಿಗೆಯು ಸಾಗುತ್ತಿದ್ದ ದಾರಿಯುದ್ದಕ್ಕೂ ಅಲ್ಲಲ್ಲಿ ಪ್ರಸಾದ ಮತ್ತು ಪಾಲಿಕೆಯಿಂದ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ವ್ಯಾಪಾರಸ್ಥರು ಕೇಸರಿ ಶಾಲುಗಳನ್ನ ಮಾರಾಟ ಮಾಡುತ್ತಿದ್ದು ಹಿಂದೂ ಯುವಕರು ಕೇಸರಿ ಶಾಲು ಧರಿಸಿ ಸ್ನೇಹಿತರಿಗೆ ಕೊಳ್ಳುವಂತೆ ಉತ್ತೇಜಿಸುತ್ತಿರುವುದು ಕಂಡುಬಂತು.

ಮಳೆ ಸಿಂಚನವಾದಾಗ ಮಳೆ ಆಗಬಹುದೇನೊ ಎಂದು ನಿರೀಕ್ಷಿಸಲಾಯಿತಾದರೂ ಕಟ್ಟಿದ ಮೋಡ ಸರಿದು, ಬಿಸಿಲು ಹೆಚ್ಚಾಯಿತು. ಕುಡಿಯುವ ನೀರಿನ ಬಾಟಲ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ವ್ಯಾಪಾರವೂ ಜೋರಾಗಿಯೇ ನಡೆಯಿತು.

ಈ ವರ್ಷ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಹಾಗಣಪತಿಯ ಮಾರ್ಗವನ್ನು ಬದಲಿಸಿ ಆದೇಶಿಸಿದ್ದ ಕಾರಣಕ್ಕೆ ಇಲಾಖೆ ತಿಳಿದಿ ಬದಲಿ ಮಾರ್ಗದಲ್ಲಿಯೇ ಶೋಭಾಯಾತ್ರೆ ಸಾಗಿತು. ಸುಮಾರು 25ಸಾವಿರದಷ್ಟು ಜನರು ಮಾತ್ರ ಸೇರಿ ಗಣೇಶನಿಗೆ ವಿದಾಯ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version