Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮುಳ್ಳಯ್ಯನಗಿರಿ ಪ್ರವಾಸ: ಸೆ. 1ರಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಮುಳ್ಳಯ್ಯನಗಿರಿ ಪ್ರವಾಸ: ಸೆ. 1ರಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

0

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ವಾಹನ ದಟ್ಟಣೆ ನಿಯಂತ್ರಣಕ್ಕೆ ಪ್ರವಾಸೋದ್ಯಮ ಇಲಾಖೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೇ ಈ ಸ್ಥಳಗಳಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಆನ್‌ಲೈನ್‌ನಲ್ಲಿ ಮೊದಲೇ ಬುಕ್ಕಿಂಗ್‌ ಮಾಡುವುದು ಕಡ್ಡಾಯವಾಗಲಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರ ಪ್ರವಾಸಿ ತಾಣಗಳಿಗೆ ಬರುವವರು ಆನ್‌ಲೈನ್‌ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡು ಬರಬೇಕು. ಈ ವ್ಯವಸ್ಥೆ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.

ಆನ್‌ಲೈನ್‌ ಬುಕ್ಕಿಂಗ್ ಮಾಡಿಕೊಳ್ಳಲು ಜಿಲ್ಲಾಡಳಿತದ ವೆಬ್‌ಸೈಟ್ ಲಿಂಕ್ https://chikkamagaluru.nic.in/en/tourism ನಲ್ಲಿ ಎಲ್ಲ ಮಾಹಿತಿ ಇದ್ದು, ಇಲ್ಲಿಯೇ ದಿನಾಂಕ ಮತ್ತು ಸಮಯವನ್ನು ನಿಗದಿಗೊಳಿಸಿ ಶುಲ್ಕ ಪಾವತಿಸಿಬೇಕಾಗಿದೆ.

ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಾಗಿ ಪ್ರವಾಸಿ ತಾಣಗಳಲ್ಲಿ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಪ್ರತಿದಿನ ಎರಡು ಸ್ಲಾಟ್‌ಗಳಲ್ಲಿ ಪ್ರವಾಸಿಗರು ತಮ್ಮ ಸಮಯವನ್ನು ನಿಗದಿ ಮಾಡಬಹುದು. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆ ತನಕ ಸ್ಲಾಟ್‌-1 ಮತ್ತು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆ ತನಕ ಸ್ಲಾಟ್‌-2 ಎಂದು ಸಮಯ ನಿಗದಿ ಮಾಡಲಾಗಿದೆ. ಒಂದು ಅವಧಿಗೆ 600 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ದ್ವಿಚಕ್ರ ವಾಹನ/ಆಟೋ 100, ಸ್ಥಳೀಯ ಟ್ಯಾಕ್ಸಿ 100, ಟೆಂಪೊ ಟ್ರಾವೆಲರ್ 50, 10 ಸೀಟ್‌ ತೂಫಾನ್ ವಾಹನ 50, ಪ್ರವಾಸಿಗರ ಕಾರು/ಜೀಪು/ಎಸ್‌ಯುವಿ 300 ಸೇರಿ ಒಂದು ಸ್ಲಾಟ್‌ನಲ್ಲಿ 600 ವಾಹನಗಳಿಗೆ ಅವಕಾಶ ಇರಲಿದೆ. ಇದರಲ್ಲಿ ಮೊದಲು ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ ದೊರೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version