2.5 ಲಕ್ಷ ಖಾಲಿ ಹುದ್ದೆಗಳ ಭರ್ತಿ : ಸರ್ಕಾರ ಭರವಸೆ

0
931

“ಅಭಯ ಹಸ್ತ” ಕಾರ್ಯಕ್ರಮದಲ್ಲಿ 1,000 ಮಂದಿಗೆ ನೇಮಕಾತಿ ಆದೇಶ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಆರೋಗ್ಯ ಇಲಾಖೆಗೆ 1,000 ಮಂದಿ ನೇಮಕಾತಿ ಆದೇಶಗಳನ್ನು ಪಡೆದು ಸೇವೆಗೆ ಸೇರ್ಪಡೆಯಾಗಿರುವುದು ಸಂತೋಷದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಅಭಯ ಹಸ್ತ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ನೇಮಕಾತಿ ಆದೇಶಗಳನ್ನು ವಿತರಿಸಿದರು.

ಆರೋಗ್ಯ ಸೇವೆ ಕೇವಲ ಉದ್ಯೋಗವಲ್ಲ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವೃಂದಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಆದೇಶ ಪತ್ರಗಳನ್ನು ನೀಡಿದ ಸಿಎಂ, “ಇದು ಕೇವಲ ವೃತ್ತಿಯಲ್ಲ; ಜೀವ ಉಳಿಸುವ ಹಾಗೂ ರೋಗ ತಡೆಯುವ ಸಾರ್ಥಕ ಕಾರ್ಯ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ

2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ : ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ನೇಮಕಾತಿ ಪ್ರಕ್ರಿಯೆಯಲ್ಲಿದ್ದ ಅಡೆತಡೆಗಳನ್ನು ಬಗೆಹರಿಸಿ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದ ವಿವಿಧ ಇಲಾಖೆಗಳಲ್ಲೂ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಅವುಗಳನ್ನು ಕ್ರಮೇಣ ಭರ್ತಿ ಮಾಡುವುದಾಗಿ ಭರವಸೆ ನೀಡಿದರು.

ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದರು.

ಕೌನ್ಸೆಲಿಂಗ್ ಮೂಲಕ ನೇಮಕಾತಿ – ಭ್ರಷ್ಟಾಚಾರಕ್ಕೆ ಅಡ್ಡಿ : ನೇಮಕಾತಿ ಹಾಗೂ ವರ್ಗಾವಣೆಗಳನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಇದರಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವಾಗಿದೆ. ಈಗಾಗಲೇ 5,700 ವೈದ್ಯರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ನ್ಯಾಯಾಂಗ ಬಂಧನ

ವರ್ಗಾವಣೆ ಏಜೆಂಟ್‌ಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಯಾವುದೇ ಮಧ್ಯವರ್ತಿಗಳ ಮಾತಿಗೆ ಒಳಗಾಗಬಾರದು ಎಂದು ಎಚ್ಚರಿಸಿದರು.

ಮಾನವೀಯತೆ ಮುಖ್ಯ – ಜಾತಿ, ಧರ್ಮ ಬೇಧ ಬೇಡ : ಆರೋಗ್ಯ ಇಲಾಖೆಯಲ್ಲಿ ವೈದ್ಯಕೀಯೇತರ ಸಿಬ್ಬಂದಿಯೂ ವೈದ್ಯರಷ್ಟೇ ಮಹತ್ವದ್ದಾಗಿದ್ದಾರೆ ಎಂದು ಸಿಎಂ ಒತ್ತಿ ಹೇಳಿದರು. “ರೋಗಿಗಳು ಚಿಕಿತ್ಸೆ ಪಡೆಯುವಾಗ ಜಾತಿ-ಧರ್ಮಗಳನ್ನು ಪರಿಗಣಿಸುವುದಿಲ್ಲ. ಆರೋಗ್ಯ ಸೇವೆಯಲ್ಲಿ ಮಾನವೀಯತೆ ಮುಖ್ಯ” ಎಂದು ಅವರು ಹೇಳಿದರು.

ಇದನ್ನೂ ಓದಿ: ರಜನೀ–ಕಮಲ್ ಮಹಾ ಸಂಗಮ: ‘KHxRK’ ಚಿತ್ರಕ್ಕೆ ಐತಿಹಾಸಿಕ ಚಾಲನೆ

ರೋಗ ತಡೆಗಟ್ಟುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಆರೋಗ್ಯ ಸಿಬ್ಬಂದಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಆರೋಗ್ಯ ಇಲಾಖೆಯ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದ್ದು, ಶೀಘ್ರದಲ್ಲೇ ಇನ್ನೂ ಸಾವಿರಾರು ಹುದ್ದೆಗಳ ಭರ್ತಿ ಸಂಬಂಧ ಪ್ರಕಟಣೆ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಆರೋಗ್ಯ ಮೂಲಸೌಕರ್ಯ ಬಲಪಡಿಸಲು ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುವ ಸನ್ನಾಹದಲ್ಲಿದೆ.