ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಆಗಸ್ಟ್ 11ರಂದು ಪ್ರಧಾನಿ ನರೇಂದ್ರ ಲೋಕಾರ್ಪಣೆ ಮಾಡಿದರು. ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕದ ಮಾರ್ಗದಲ್ಲಿ ಸದ್ಯ 3 ರೈಲುಗಳು ಸಂಚಾರ ನಡೆಸುತ್ತಿವೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳಿವೆ. 19.15 ಕಿ.ಮೀ. ಮಾರ್ಗದ ಉದ್ಘಾಟನೆ ಬಳಿಕ ಟೆಕ್ಕಿಗಳಿಗೆ ಅನುಕೂಲವಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಎಷ್ಟು ಕಡಿಮೆಯಾಗಿದೆ? ಎಂಬುದು ಜನರ ಪ್ರಶ್ನೆ.
ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲು ಕೆಲಸ ಮಾಡುವ ಸಾವಿರಾರು ಜನರು ಖಾಸಗಿ ವಾಹನ ಬಿಟ್ಟು ನಮ್ಮ ಮೆಟ್ರೋ ರೈಲು ಹತ್ತಿದ್ದಾರೆ. ಆದ್ದರಿಂದ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ.
ಶೇ 10ರಷ್ಟು ಸಂಚಾರ ದಟ್ಟಣೆ ಕಡಿಮೆ: ಸದ್ಯದ ವರದಿಗಳ ಪ್ರಕಾರ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ಬಳಿಕ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಶೇ 10ರಷ್ಟು ಕಡಿಮೆಯಾಗಿದೆ.
ಬೆಂಗಳೂರು ನಗರ ಸಂಚಾರಿ ಪೊಲೀಸರ ASTRAM ಸಮೀಕ್ಷೆ ವರದಿ ಅಂಕಿ ಸಂಖ್ಯೆಗಳು ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದು ಹೇಳಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದ ನಡುವೆ ಸಂಚಾರ ದಟ್ಟಣೆ ಶೇ 10ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಬೆಳಗ್ಗೆ 7-11 ಗಂಟೆಯ ಅವಧಿಯಲ್ಲಿ ಶೇ 22ರಷ್ಟು, ಸಂಜೆ 4-9 ಗಂಟೆಯ ತನಕ ಶೇ 32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಪೀಕ್ ಅವರ್‌ನಲ್ಲಿ ಹೊಸೂರು ರಸ್ತೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಜನರು ಈಗ ಸುಲಭವಾಗಿ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಹೆಚ್ಚಿನ ರೈಲುಗಳು ಸಂಚಾರ ನಡೆಸಲು ಆರಂಭಿಸಿದರೆ ಸಂಚಾರ ದಟ್ಟಣೆ ಶೇ 20ರಷ್ಟು ಕಡಿಮೆಯಾಗಲಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಆದರೆ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲು ಮೆಟ್ರೋ ಫೀಡರ್ ಸೇವೆ ಹೆಚ್ಚಾಗಬೇಕು. ಸದ್ಯ 25 ನಿಮಿಷಗಳು ಇರುವ ರೈಲುಗಳ ಸಂಚಾರ ಇನ್ನಷ್ಟು ಕಡಿಮೆಯಾಗಬೇಕು. ಆಗ ಸಂಜೆಯ ವೇಳೆಯ ಸಂಚಾರ ದಟ್ಟಣೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.
ಪ್ರತಿ ಸಂಚಾರಿ ಸಿಗ್ನಲ್‌ಗಳಲ್ಲಿನ ಅಂಕಿ ಅಂಶಗಳನ್ನು ಗಮನಿಸಿ ಈ ವರದಿ ತಯಾರು ಮಾಡಲಾಗಿದೆ. ಪ್ರತಿದಿನದ ಅಂಕಿ ಅಂಶಕಗಳನ್ನು ಗಮನಿಸಲಾಗುತ್ತಿದೆ. ಖಾಸಗಿ ವಾಹನ ಬಿಟ್ಟು ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಬಿಎಂಟಿಸಿ 12 ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಆದರೆ ಇನ್ನಷ್ಟು ಬಸ್ ಸೇವೆಗಳು ಪ್ರಾರಂಭವಾದರೆ ಜನರು ಮೆಟ್ರೋ ನಿಲ್ದಾಣದಿಂದ ಸಂಚಾರ ನಡೆಸಲು ಸಹಕಾರಿಯಾಗಲಿದೆ. ಆಗ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ.
ಸದ್ಯ 25 ನಿಮಿಷಕ್ಕೊಂದು ರೈಲು ಹಳದಿ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿದೆ. ರೈಲುಗಳ ಕೊರತೆ ಕಾರಣ ಸದ್ಯ ಈ ಸಮಯ ಕಡಿತವಾಗುವುದಿಲ್ಲ. 4ನೇ ರೈಲು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ.
ಬಿಎಂಆರ್‌ಸಿಎಲ್ ವೇಳಾಪಟ್ಟಿಯ ಅನ್ವಯ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸೋಮವಾರದಿಂದ ಶನಿವಾರದ ತನಕ ಬೆಳಗ್ಗೆ 6.30ಕ್ಕೆ ರೈಲು ಸಂಚಾರ ಆರಂಭವಾಗಲಿದೆ. ಭಾನುವಾರ ಬೆಳಗ್ಗೆ 7ಕ್ಕೆ ರೈಲು ಸಂಚಾರ ಪ್ರಾರಂಭ.
ಈ ಮಾರ್ಗದಲ್ಲಿ ಒಟ್ಟು ಪ್ರಯಾಣದ ಸಮಯ ಒಂದು ದಿಕ್ಕಿಗೆ ಸುಮಾರು 35 ನಿಮಿಷ. ಬೆಳಗ್ಗೆ 6.30ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಗ್ಗೆ 7.10ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ನಡೆಸುತ್ತದೆ.