ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾವಿರಾರು ರೋಗಿಗಳು ಹಾಗೂ ಅವರೊಂದಿಗೆ ಇರುವವರಿಗಾಗಿ ಸಂತೋಷದ ಸುದ್ದಿ. ಆಸ್ಪತ್ರೆಗಳಲ್ಲಿ ನೀಡುವ ಉಚಿತ ಆಹಾರದ ಮೆನು ಬದಲಾಗಿದ್ದು, ಹೆಚ್ಚು ಪೌಷ್ಟಿಕಾಂಶ, ರುಚಿ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಾಗುತ್ತಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್‌ನ ‘ಪೌಷ್ಟಿಕ ಆಹಾರ’ ಯೋಜನೆಗೆ ಚಾಲನೆ ನೀಡಿದರು. ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್ ಮೂಲಕ ರುಚಿಕರ ಹಾಗೂ ಆರೋಗ್ಯಕರ ಊಟ ಸಿಗಲಿದೆ. ಇದುವರೆಗೆ ಸಿಗುತ್ತಿದ್ದ ಸಾಮಾನ್ಯ ಅನ್ನ–ಸಾಂಬಾರ್–ಬಟರ್ ಮಿಲ್ಕ್ ಮೆನುಗೆ ಬದಲಾಗಿ, ರೋಗಿಗಳ ದೇಹದ ಸ್ಥಿತಿಗೆ ತಕ್ಕಂತೆ ಸಮತೋಲನ ನೀಡಲು ಹೊಸ ಪೌಷ್ಟಿಕ ಆಹಾರ ಯೋಜನೆಗೆ ಚಾಲನೆ ನೀಡಿದರು.
ಹೊಸ ಮೆನು ವಿವರ:
ಬೆಳಗಿನ ಉಪಹಾರ: ಇಡ್ಲಿ, ಶ್ಯಾವಿಗೆ ಬಾತ್, ಉಪ್ಮಾ, ಅಕ್ಕಿ ರೊಟ್ಟಿ, ಅವಶ್ಯಕ ದಿನಗಳಲ್ಲಿ ಡೋಸೆ.
ಮಧ್ಯಾಹ್ನ: ಸಾಂಪ್ರದಾಯಿಕ ಅನ್ನ-ಸಾಂಬಾರ್ ಜೊತೆಗೆ ಪಲ್ಯ, ಚಪಾತಿ, ತಾಜಾ ಹಣ್ಣುಗಳು, ಬಟರ್ ಮಿಲ್ಕ್.
ಸಂಜೆ: ಹಾಲು ಅಥವಾ ಬೇಳೆ ಪಾನೀಯ, ಬಿಸ್ಕತ್.
ರಾತ್ರಿ: ಅನ್ನ, ರಾಗಿ ಮುದ್ದೆ, ಸಾರು, ಪಲ್ಯ, ಚಪಾತಿ.
ಮೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಸ್ಕಾನ್ ಊಟ: ಇಂದಿರಾನಗರದಲ್ಲಿರುವ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಸದ್ಯ ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಇಸ್ಕಾನ್ ಊಟ ಸಿಗಲಿದೆ. ಸುಮಾರು 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ 1.37 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಯ ಉದ್ದೇಶವೆಂದರೆ ಆಸ್ಪತ್ರೆಗೆ ಬರುವ ರೋಗಿಗಳ ಸುರಕ್ಷಿತ ಗುಣಮುಖತೆಗಾಗಿ ಪೌಷ್ಟಿಕಾಂಶದ ಆಹಾರ ಅತ್ಯಗತ್ಯ. ಇದಕ್ಕಾಗಿ ಆಹಾರದಲ್ಲಿ ಬೇಳೆ, ತರಕಾರಿ, ಹಣ್ಣು, ರಾಗಿ ಸೇರಿಸಿ, ಪ್ರೋಟೀನ್ ಹಾಗೂ ವಿಟಮಿನ್ ಸಮತೋಲನ ಕಾಯ್ದುಕೊಳ್ಳಲಾಗುತ್ತಿದೆ.
ಸಚಿವರ ಮಾತು: ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದೇ ಮಾದರಿಯ ಪೌಷ್ಟಿಕ ಆಹಾರ ಪೂರೈಕೆ ಜಾರಿಗೆ ಬಂದಿದೆ. ರೋಗಿಗಳ ಆರೋಗ್ಯ ಚೇತರಿಕೆಗೆ ಇದು ಬಹಳ ನೆರವಾಗಲಿದೆ. ಪ್ರತಿಯೊಬ್ಬ ರೋಗಿಗೆ ಉತ್ತಮ ಗುಣಮಟ್ಟದ, ಶುದ್ಧ ಹಾಗೂ ಆರೋಗ್ಯಕರ ಊಟ ದೊರಕಬೇಕು ಎಂಬುದು ನಮ್ಮ ಗುರಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಶೇಷ ಕ್ರಮಗಳು: ಊಟದ ಗುಣಮಟ್ಟವನ್ನು ಪ್ರತಿದಿನ ಪರಿಶೀಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೂರೈಕೆದಾರರು ಆಹಾರವನ್ನು ಶುದ್ಧವಾಗಿ, ನಿಗದಿತ ಸಮಯಕ್ಕೆ ಒದಗಿಸಬೇಕೆಂಬ ಕಟ್ಟುನಿಟ್ಟಿನ ನಿಯಮ. ರೋಗಿಗಳ ಪ್ರತಿಕ್ರಿಯೆ ದಾಖಲಿಸಲು ಫೀಡ್‌ಬ್ಯಾಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯಿಂದಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ದೊರೆಯಲಿದೆ.
ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸುವ ತೀರ್ಮಾನ: ಪ್ರಥಮ ಹಂತದಲ್ಲಿ ಮೂರು ಆಸ್ಪತ್ರೆಯಲ್ಲಿ ಸೇವೆ ಆರಂಬಿಸಲಾಗಿದೆ. ಯಾವ ಭಾಗದಲ್ಲಿ ಇಸ್ಕಾನ್ ಇದೆ, ಅಲ್ಲಿಯ ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸೋದಕ್ಕೆ ತೀರ್ಮಾನ ಮಾಡುತ್ತೇವೆ. ಬೆಳಗಾವಿ, ಬಳ್ಳಾರಿ, ಧಾರವಾಡ, ಮೈಸೂರು ಹಲವು ಕಡೆ ವಿಸ್ತರಣೆ ಮಾಡುತ್ತೇವೆ. ಕೆ.ಆರ್ ಪುರಂ ಆಸ್ಪತ್ರೆಗೂ ವಿಸ್ತರಣೆಯನ್ನ ಮಾಡುವ ಚಿಂತನೆ ಇದೆ ಎಂದು ಸಚಿವರು ಹೇಳಿದ್ದಾರೆ.