ವಿಲಾಸ ಜೋಶಿ
ಬೆಳಗಾವಿ: ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ಜನರು ಅನುಮಾನ ಪಡುವಂತಹ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಹೋಟೆಲ್‌ನಲ್ಲಿ ಮಾಲಿಕರಿಂದ ಹಲ್ಲೆಗೊಳಗಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎನ್ನಲಾದ ಪ್ರಕರಣದಲ್ಲಿ ಪೊಲೀಸರು ಮೊದಲಿಗೆ ದೂರು ದಾಖಲಿಸಿಕೊಳ್ಳದೆ ಮೃತನ ಮನೆಯವರನ್ನು ದಾರಿ ತಪ್ಪಿಸಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
ಘಟನೆ ನಡೆದ ದಿನವೇ ದೂರು ದಾಖಲಿಸಿ ಬಡಜೀವ ಬಲಿ ತೆಗೆದುಕೊಂಡವರನ್ನು ಕಂಬಿ ಹಿಂದೆ ನಿಲ್ಲಿಸಬೇಕಾಗಿದ್ದ ಪೊಲೀಸರು, ದೂರು ನೀಡಲು ಬಂದವರ ಬಳಿ ರಾಜಿ ಸಂಧಾನದ ಮಾತನಾಡಿ ವಾಪಸ್ ಕಳಿಸಿದ್ದರು ಎಂದು ಹೇಳಲಾಗಿದೆ.
ರಾಜಿ ಸಂಧಾನಕ್ಕೆ ಪೊಲೀಸ್ ಯತ್ನ: ಮಾಣಿಕವಾಡಿ ನಿವಾಸಿ ವೆಂಕಪ್ಪ ಮಯ್ಯೇಕರ (18) ಎಂಬ ಯುವಕ ಖಾನಾಪುರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಆತನ ಮೇಲೆ ಕಳ್ಳತನದ ಆರೋಪ ಹೊರಿಸಿ ಹೋಟೆಲ್ ಮಾಲಿಕರು ಕಳೆದ ತಿಂಗಳ 16ರಂದು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಆ ದಿನವೇ ಯುವಕನ ಕುಟುಂಬಸ್ಥರು ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರು ರಾಜಿ ಸಂಧಾನದ ಮಾತುಗಳನ್ನು ಆಡಿ ವಾಪಸ್ಸು ಕಳಿಸಿದ್ದರು ಎನ್ನಲಾಗಿದೆ. ಮತ್ತೊಂದು ಕಡೆ, ಹಲ್ಲೆಗೊಳಗಾದ ವೆಂಕಪ್ಪ ಮಯ್ಯೇಕರನನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿ ಆಸ್ಪತ್ರೆಯವರು ಇದು ಅಪರಾಧ ಪ್ರಕರಣ ಎಂದು ಗೊತ್ತಿದ್ದರೂ ಅದರ ಮಾಹಿತಿಯನ್ನು ಸಂಬಂಧಿಸಿದ ಠಾಣೆಯವರಿಗೆ ಏಕೆ ತಿಳಿಸಲಿಲ್ಲ ಎನ್ನುವ ಪ್ರಶ್ನೆ ಕೂಡ ಕೇಳಿಬರುತ್ತಿದೆ.
ನಂತರದಲ್ಲಿ ಗಾಯಗೊಂಡ ವೆಂಕಪ್ಪನ ಆರೋಗ್ಯ ಮತ್ತಷ್ಟು ಕ್ಷೀಣಿಸಿದಾಗ ಬಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಎಂಎಲ್‌ಸಿ ದಾಖಲಿಸಿ ಠಾಣೆಗೆ ಕಡ್ಡಾಯ ಮಾಹಿತಿ ನೀಡಬೇಕಿತ್ತು. ಒಂದು ವೇಳೆ ಹಾಗೆ ಮಾಡಿದ್ದರೆ ತಕ್ಷಣ ಬೆಳಗಾವಿಗೆ ಬಂದು ಪೊಲೀಸರು ಕ್ರಮ ಜರುಗಿಸುವ ಕೆಲಸ ಮಾಡಬೇಕಿತ್ತು. ಆದರೆ ಖಾನಾಪುರ ಪೊಲೀಸರು ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದರು ಎನ್ನುವ ದೂರು ಕೇಳಿಬರುತ್ತಿದೆ.
ಶವ ಹಸ್ತಾಂತರ ಹೇಗೆ?: ವೆಂಕಪ್ಪ ಸಾವನ್ನಪ್ಪಿದ ಬಳಿಕ ಶವವನ್ನು ಹೇಗೆ ಹಸ್ತಾಂತರ ಮಾಡಿದರು ಎಂಬುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ಮೊದಲು ಶವವನ್ನು ಖಾನಾಪುರದತ್ತ ಕೊಂಡೊಯ್ದು ನಂತರ ಮತ್ತೆ ಬೆಳಗಾವಿಗೆ ತಂದು ಪ್ರಕ್ರಿಯೆ ಮುಗಿಸಿ ಕುಟುಂಬಕ್ಕೆ ನೀಡಲಾಗಿದೆ. ಅದಕ್ಕೂ ಮೊದಲು ಪೊಲೀಸರ ನಡೆ ವಿರೋಧಿಸಿ ಮೃತನ ಗ್ರಾಮಸ್ಥರು ಪೊಲೀಸ್ ಠಾಣೆಗೆ ತೆರಳಿದ್ದರು. ಅದನ್ನು ಅರಿತ ಪೊಲೀಸರು ಖಾನಾಪುರದತ್ತ ಬರುತ್ತಿದ್ದ ಶವವನ್ನು ಮತ್ತೆ ಬೆಳಗಾವಿಗೆ ಕಳಿಸಿ, ಕುಟುಂಬಕ್ಕೆ ಹಸ್ತಾಂತರ ಮಾಡಿಸಿದರು ಎಂದು ಗೊತ್ತಾಗಿದೆ. ಶವವನ್ನು ಅತ್ತಿಂದಿತ್ತ ತಿರುಗಿಸಿದ್ದು ಏಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಕ್ರಮ ಕೈಗೊಳ್ಳುತ್ತಾರಾ ಎಸ್ಪಿ?: ಈ ಪ್ರಕರಣವು ನಟ ದರ್ಶನ್ ಗ್ಯಾಂಗ್ ನಡೆಸಿದ ರೇಣುಕಾ ಸ್ವಾಮಿಯ ಕೊಲೆ ಪ್ರಕರಣವನ್ನು ನೆನಪಿಸುವಂತಿದೆ. ದರ್ಶನ್ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರಭಾವಿಗಳನ್ನು ಬಂಧಿಸಿದ್ದರು. ಖಾನಾಪುರದಲ್ಲೂ ಇದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಪ್ಪು ಮಾಡಿದ ಖಾಕಿ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತಾರಾ ಎಂದು ಮೃತನ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.