Home News ಹಿಂಜಾವೇ ಮುಖಂಡ ದರೆಗುಡ್ಡೆಗೆ 15 ದಿನ ನ್ಯಾಯಾಂಗ ಬಂಧನ

ಹಿಂಜಾವೇ ಮುಖಂಡ ದರೆಗುಡ್ಡೆಗೆ 15 ದಿನ ನ್ಯಾಯಾಂಗ ಬಂಧನ

ಮೂಡುಬಿದಿರೆ: ಮೈಟ್ ಕಾಲೇಜು ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲೀಕ ಸ್ಥಳದಲ್ಲಿಯೇ ಪರಿಹಾರ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ್ದ ಹಿಂದೂ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆಯನ್ನು ಮೂಡುಬಿದಿರೆ ಪೊಲೀಸರು ಗುರುವಾರ ಕಾರ್ಕಳದ ವಾಣಿಜ್ಯ ಸಂಕೀರ್ಣವೊಂದರಿಂದ ಬಂಧಿಸಿ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
2024ರ ನವಂಬರ್ 11ರಂದು ಮಿಜಾರು ಬಳಿ ಘಟನೆ ನಡೆದಿತ್ತು. ಘಟನೆಯಲ್ಲಿ ಖಾಸಗಿ ಬಸ್ ‘ಮಾಸ್ಟರ್” ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರಾದ ಸುಮಿತ್ರಾ ಮತ್ತು ಅವರ ಮಗಳು ಸಾನ್ವಿ ಗಾಯಗೊಂಡಿದ್ದರು. ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಘಟನೆ ಸಂಭವಿಸಿದೆಂದು ಈ ಸಂದರ್ಭ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ ಹಿಂದೂ ಪರ ಸಂಘಟನೆಯ ಕಾರ್ಯರ್ತರು ಹೋರಾಟಕ್ಕೆ ಇಳಿದಿದ್ದರು.
ಆ ಹೋರಾಟದಲ್ಲಿ ಸಮಿತ್‌ರಾಜ್ ದರೆಗುಡ್ಡೆ ಮುಂಚೂಣಿಯಲ್ಲಿದ್ದು ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಅಪಘಾತ ಸಂಭವಿಸಿದ ಕೆಲವೇ ಗಂಟೆಗೊಳಗಾಗಿ ಬಸ್ ಮಾಲೀಕ 5 ಲಕ್ಷ ರೂ.ಗಳನ್ನು ಗಾಯಾಳುಗಳಿಗೆ ಪರಿಹಾರ ನೀಡಿದ್ದರು.
ಇತ್ತ ಬಸ್ಸಿನ ಮಾಲೀಕ ಬಸ್ಸಿಗೆ ಹಾನಿಗೊಳಿಸಿರುವುದಲ್ಲದೆ ತನ್ನಿಂದ 5 ಲಕ್ಷ ರೂ. ಬೇಡಿಕೆ ಮುಂದಿಟ್ಟು ವಸೂಲಿ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಷಯವನ್ನು ಮುಂದಿಟ್ಟು ಪೊಲೀಸರು ತನಿಖೆ ನಡೆಸಿ ಸಮಿತ್ ರಾಜ್‌ನನ್ನು ಬಂಧಿಸಲಾಗಿದೆ.

Exit mobile version