Home ತಾಜಾ ಸುದ್ದಿ ಬೆಣ್ಣೆ ಹಳ್ಳ ಪ್ರವಾಹ: ಶಾಶ್ವತ ಪರಿಹಾರದ ಭರವಸೆ

ಬೆಣ್ಣೆ ಹಳ್ಳ ಪ್ರವಾಹ: ಶಾಶ್ವತ ಪರಿಹಾರದ ಭರವಸೆ

0

ಹುಬ್ಬಳ್ಳಿ : ಬೆಣ್ಣೆ ಹಳ್ಳ ಪ್ರವಾಹ ಸಮಸ್ಯೆ ಪರಿಹಾರಕ್ಜೆ ಈಗಾಗಲೇ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗಿದೆ. ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಅನುದಾನ ಪಡೆದು ಶೀಘ್ರ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಬುಧವಾರ ಅವರು ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮಕ್ಕೆ, ಹೇಮನೂರು ಸಮೀಪದ ಬೆಣ್ಣೆಹಳ್ಳ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ 10-12 ದಿನದಿಂದ ಸತತ ಮಳೆ ಸುರಿದು ತೊಂದರೆಯಾಗಿದೆ. ಮನೆಗಳು ಬೀಳುತ್ತಿವೆ. ರಸ್ತೆಗಳು ಹಾಳಾಗುತ್ತಿವೆ. ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲಿಯೇ ಮನೆ ಬಿದ್ದರೂ ವರದಿ ನೀಡಬೇಕು. ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ತಹಶೀಲ್ದಾರ, ಪಿಡಿಓಗಳಿಗೆ ತಾಕೀತು ಮಾಡಲಾಗಿದೆ ಎಂದರು.
ಬೆಣ್ಣೆ ಹಳ್ಳಕ್ಕೆ ನೀರು ಹರಿದು ಬರುತ್ತಿದೆ. ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲ. ಆದರೆ, ಸಂದರ್ಭ ಬಂದರೆ ತಕ್ಷಣ ಸುರಕ್ಷತೆ ಕ್ರಮ ಕೈಗೊಳ್ಳಲು ಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಕಲಘಟಗಿ ತಾಲ್ಲೂಕಿನ ಕೆಲ ಕಡೆ, ಅಳ್ನಾವರ ಭಾಗದ ಕೆಲ ಗ್ರಾಮಕ್ಕೆ ಭೇಟಿ ನೀಡಿದ್ದೆ. ಇಂದು ನವಲಗುಂದ ಮತ್ತು ಕುಂದಗೋಳ ತಾಲ್ಲೂಕಿಗೆ ಭೇಟಿ ನೀಡುತ್ತಿದ್ದೇನೆ. ಎಲ್ಲೆಲ್ಲಿ ಮನೆಗಳು ಬಿದ್ದಿವೆ, ರಸ್ತೆ ಹಾಳಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ಶಾಸಕರು ಮುಖ್ಯಮಂತ್ರಿಗೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಿನ್ನೆಯಷ್ಟೇ ಈ ಬಗ್ಗೆ ಮುಖ್ಯಮಂತ್ರಿ ಉತ್ತರಿಸಿದ್ದಾರೆ. ನಾಳೆ ಶಾಸಕರ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಲಿದ್ದಾರೆ. ಅಂತಹದ್ದೇನೆ ಸಮಸ್ಯೆ ಇದ್ದರೂ ಮುಖ್ಯಮಂತ್ರಿ ಪರಿಹರಿಸುತ್ತಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು

https://twitter.com/samyuktakarnat2/status/1684097447407108098

Exit mobile version