ಪಣಜಿ: ಗೋವಾದಲ್ಲಿ ಗುರುವಾರ ೩೭ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮಡಗಾಂವನ ಜವಾಹರಲಾಲ್ ನೆಹರು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳು ಮಧ್ಯಾಹ್ನ ಬಂದ್ ಆಗಲಿವೆ. ಈ ಕುರಿತು ಗೋವಾ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮಡಗಾಂವ ಫತೋರ್ಡಾದಲ್ಲಿ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯುತ್ತಿರುವುದರಿಂದ ಗುರುವಾರ ಮಧ್ಯಾಹ್ನ ೧ ಗಂಟೆಯ ನಂತರ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್ ಆಗಲಿದೆ. ನಗರದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಗತ್ಯ ಸೇವೆಗಳಿಗೆ ಪ್ರಸ್ತುತ ನಿಯಮ ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸಂಜೆ ೬.೩೦ಕ್ಕೆ ಫಟೋರ್ಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ೩೭ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನೆಗೆ ಗೋವಾದ ವಿಂಡ್‌ಸರ್ಫರ್ ಕಟ್ಯಾ ಕೊಯೆಲ್ಹೋ ಅವರು ಜ್ಯೋತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಲಿದ್ದಾರೆ. ಉದ್ಘಾಟನೆಗೆ ಸುಖವಿಂದರ್ ಸಿಂಗ್, ಹೇಮಾ ಸರ್ದೇಸಾಯಿ ಸೇರಿದಂತೆ ಖ್ಯಾತ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.