Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ರಾಜ್ಯಕ್ಕೆ ಯುಪಿ ಮಾದರಿ ಆಡಳಿತ ಬೇಕು – ಯತ್ನಾಳ್

ರಾಜ್ಯಕ್ಕೆ ಯುಪಿ ಮಾದರಿ ಆಡಳಿತ ಬೇಕು – ಯತ್ನಾಳ್

0

ಚಿಕ್ಕಬಳ್ಳಾಪುರ: ದೇಶದಲ್ಲಿ ಕೆಲವು ಕಡೆಗಳಲ್ಲಿ ಗೋ ಹಂತಕ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿದ್ದು, ಇವರಿಂದ ಸನಾತನ ಧರ್ಮ ಮತ್ತು ಸ್ವಾಮೀಜಿಗಳಿಗೆ ಅಪಮಾನ ಮಾಡಲಾಗುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ತಾಲೂಕಿನ ಕವರವನಹಳ್ಳಿಯಲ್ಲಿ ಹರಿಕೃಷ್ಣ ಫೌಂಡೇಶನ್ ಭಾನುವಾರ ಹಮ್ಮಿಕೊಂಡಿದ್ದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದಲ್ಲಿ ರೈಲ್ವೆ ಆಸ್ತಿ 15 ಲಕ್ಷ ಎಕರೆ ಇದೆ. ಆದರೆ ಮೂರು ಪಾಕಿಸ್ತಾನ ಆಗುವಷ್ಟು ವಕ್ಫ್ ಆಸ್ತಿ ಭಾರತದಲ್ಲಿ ಇದೆ. ಪ್ರಧಾನಿ ಮೋದಿ ಈ ಕಾಯ್ದೆಗೆ ತಿದ್ದುಪಡಿ ತರದಿದ್ದರೆ ನಮ್ಮ ಜಮೀನು, ದೇಗುಲಗಳು ಉಳಿಯುತ್ತಿರಲಿಲ್ಲ ಎಂದರು.

ಶಿವಾಜಿ ಮಹಾರಾಜರು, ಅಂಬೇಡ್ಕರ್ ಅವರ ಇತಿಹಾಸ ನಮಗೆ ಕಲಿಸಲಿಲ್ಲ. ಕಾಂಗ್ರೆಸ್‌ನವರು ಟಿಪ್ಪುಸುಲ್ತಾನ್, ಔರಂಗಜೇಬ್ ಇತಿಹಾಸವನ್ನು ಕಲಿಸಿದರು. ನನ್ನ ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಲೋಕಸಭೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇರಲಿಲ್ಲ. ನವದೆಹಲಿಯಲ್ಲಿ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಭಾರತ ರತ್ನ ಗೌರವವನ್ನು ಕಾಂಗ್ರೆಸ್ ನೀಡಲಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಂಕುಮ, ಭಂಡಾರ ಹಚ್ಚಿಕೊಳ್ಳಲು ಅವರಿಗೆ ನಾಚಿಕೆ ಆಗುತ್ತದೆ. ಅದೇ ಮುಸ್ಲಿಮರ ಕಾರ್ಯಕ್ರಮದಲ್ಲಿ ಅರಬರ ವೇಷವನ್ನು ಧರಿಸುವರು. ಅದು ಅವರಿಗೆ ಖುಷಿ ಎಂದು ಲೇವಡಿ ಮಾಡಿದರು.

ಹಬ್ಬದ ವೇಳೆ ದೇಶದ ಯಾವುದೇ ಭಾಗದಲ್ಲಿ ಹಿಂದೂಗಳು ಅಶಾಂತಿಯನ್ನುಂಟು ಮಾಡಿಲ್ಲ. ಆದರೆ ರಾಜ್ಯದಲ್ಲಿನ ಮದ್ದೂರು, ನಾಗಮಂಗಲ ಇನ್ನಿತರೆ ಪ್ರದೇಶಗಳಲ್ಲಿ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು ಎಂದು ಹೇಳಿದರು.

ರಾಜ್ಯದಲ್ಲಿ 2028ಕ್ಕೆ ಹಿಂದೂ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾನೇ ಕರ್ನಾಟಕದ ಮುಖ್ಯಮಂತ್ರಿಯಾಗುವೆ. ಆಗ ವಿಧಾನಸೌಧದ ಮುಂದೆ ಜೆಸಿಬಿ ಯಂತ್ರಗಳ ಸಾಲು ನಿಲ್ಲಿಸುತ್ತೇನೆ. ಗೋರಕ್ಷಣೆ ಮಾಡಬೇಕು ಎನ್ನುವುದನ್ನು ಸನಾತನ ಧರ್ಮ ಹೇಳುತ್ತದೆ. ವಿಪರ್ಯಾಸವೆಂದರೆ ದೇಶದಲ್ಲಿ ಗೋ ಹಂತಕ ಮತ್ತು ಮಠಾಧೀಶರು, ಸಾಧು, ಸಂತರನ್ನು ಅಪಮಾನಿಸುವ ಸರ್ಕಾರ ಅಧಿಕಾರಕ್ಕೆ ಬರುತ್ತಿವೆ ಎಂದರು.

ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹರೀಶ್ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ ನೀಡಿ, ಮದ್ಯದ ಹೊಳೆಯನ್ನೇ ರಾಜ್ಯದಲ್ಲಿ ಹರಿಸುವ ಮೂಲಕ ಆ ಕುಟುಂಬಗಳಿಂದ ದುಪ್ಪಟ್ಟು ಹಣ ಸುಲಿಯುತ್ತಿದೆ. ಜನರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಬಾರದು ಎಂದು ಹೇಳಿದರು.

ಗೋ ಶಾಪದಿಂದ ಸರ್ಕಾರ ಪತನ: ರಾಜ್ಯ ಸರ್ಕಾರ ಪ್ರತಿ ಗ್ರಾಮದಲ್ಲಿ ಹಸು ವಿತರಣೆ ಮಾಡುವ ಬದಲು ಹಸುವಿನ ಕೆಚ್ಚಲು ಕೊಯ್ದವರಿಗೆ, ಗೋವಧೆ ಮಾಡುವವರಿಗೆ, ಗೋ ಕಳ್ಳತನ ಮಾಡುವವರಿಗೆ ಬೆಂಬಲ ನೀಡಿ ಗೋವಿನ ಶಾಪಕ್ಕೆ ಗುರಿಯಾಗುತ್ತಿದೆ. ಇದೇ ಗೋ ಶಾಪದಿಂದಲೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ಹರಿಕೃಷ್ಣ ಚಾರಿಟೇಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಹೆತ್ತಮಾತೆ, ಭಾರತಮಾತೆ ಮತ್ತು ಗೋಮಾತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗೋಮಾತೆಗೆ ರಕ್ಷಣೆ ನೀಡಿದ ಕಾರಣಕ್ಕೆ ಪ್ರಧಾನಿ ಮೋದಿಯವರಿಗೆ ವಿಶ್ವ ವ್ಯಾಪಿ ಗೌರವ ಸಿಗುತ್ತಿದೆ. ಇದೇ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮಾಡಲಿ ಎಂದು ಸವಾಲೆಸೆದರು.

NO COMMENTS

LEAVE A REPLY

Please enter your comment!
Please enter your name here

Exit mobile version