Home ನಮ್ಮ ಜಿಲ್ಲೆ ಕಾವೇರಿ ನೀರಿಗಾಗಿ ನಾಳೆಯಿಂದ ಧರಣಿ

ಕಾವೇರಿ ನೀರಿಗಾಗಿ ನಾಳೆಯಿಂದ ಧರಣಿ

0

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಮತ್ತೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ರೈತರು, ರಾಜಕೀಯ ಪಕ್ಷಗಳು. ಸಂಘ ಸಂಸ್ಥೆಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಇದರ ಜೊತೆ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಕರೆ ನೀಡಿರುವುದರಿಂದ ಕಾವೇರಿ ಕಿಚ್ಚು ಮತ್ತಷ್ಟು ಹೆಚ್ಚಾಗಲಿದೆ.
ಮಳೆ ಕೊರತೆ ಹಿನ್ನಲೆಯಲ್ಲಿ ಕೆ ಆರ್ ಎಸ್ ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಡೆಡ್ ಸ್ಟೋರೇಜ್ ಹಂತಕ್ಕೆ ಹೋಗಿತ್ತು, ತಡವಾಗಿ ಮುಂಗಾರು ಆರಂಭಗೊಂಡು ಕಾವೇರಿ ಉಗಮ ಸ್ಥಳ ಕೊಡಗು ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ಕೆ ಆರ್ ಎಸ್ ನಲ್ಲಿ ನೀರಿನ ಮಟ್ಟ 113 ಅಡಿಗೆ ಹೆಚ್ಚಳವಾಗಿತ್ತು ಇದೇ ವೇಳೆ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆದು ಒತ್ತಡ ಹಾಕಿತ್ತು, ಅಷ್ಟೇ ಅಲ್ಲದೆ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಒತ್ತಡದ ಹಿನ್ನೆಲೆಯಲ್ಲಿ ಕರ್ನಾಟಕ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹತ್ತಕ್ಕೂ ಹೆಚ್ಚು ದಿನ ನೀರು ಹರಿಸಿತ್ತು. ಇದರ ಪರಿಣಾಮ ಕೆ ಆರ್ ಎಸ್ ನಲ್ಲಿ ನೀರಿನ ಪ್ರಮಾಣ 102 ಅಡಿಗೆ ಕುಸಿಯಿತು.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ನೀರು ಬಿಡುಗಡೆ ವಿಚಾರವಾಗಿ ಯಾವುದೇ ಆದೇಶ ಹೊರಡಿಸಲಿಲ್ಲ. ಇದಾದ ತರುವಾಯ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂ ಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿತು. ಇದರ ಬೆನ್ನಲ್ಲೇ ಕಾವೇರಿ ನೀರು ನಿರ್ವಹಣಾ ಸಭೆ ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿ ಹಿಡಿದು ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂ ಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು.
ರಾಜ್ಯ ಸರ್ಕಾರ ಮಂಗಳವಾರ ರಾತ್ರೋರಾತ್ರಿ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣ ನೀರನ್ನು ಕೃಷ್ಣರಾಜಸಾಗರ ಜಲಾಶಯದಿಂದ ಹೊರ ಬಿಟ್ಟಿದ್ದು. ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಿಸಲಾಗಿದೆ.
ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ಜಿಲ್ಲೆಯಲ್ಲಿ ಅಕ್ರೋಶ ಹೆಚ್ಚಾಗಿದ್ದು, ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದು, ಮಂಡ್ಯ ಯೂತ್ ಗ್ರೂಪ್ ಕಾವೇರಿ ಅನ್ಯಾಯ ಕಣ್ಣಿಲ್ಲದ ಕಾನೂನು ಎಂಬ ಘೋಷಣೆಯಡಿ ಪ್ರತಿಭಟನಾ ಮೆರವಣಿಗೆ ನಡೆಸಿದೆ.
ಜಾತ್ಯತೀತ ಜನತಾದಳ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರೆ, ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಜಿಲ್ಲಾ ಕೇಂದ್ರ ಮಂಡ್ಯ ನಗರದಲ್ಲಿ ಗುರುವಾರದಿಂದ ಧರಣಿ ನಡೆಸುವುದಾಗಿ ಘೋಷಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಗೆ ಸಿದ್ಧತೆ ಕೈಗೊಂಡಿದ್ದು, ತಾಲೂಕು ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಸಲು ಮುಂದಾಗಿವೆ. ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿವೆ. ತಮಿಳುನಾಡಿಗೆ ಮತ್ತೆ ನೀರು ಹರಿಸುತ್ತಿರುವುದಕ್ಕೆ ವಿರೋಧ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಲಿದೆ.

Exit mobile version