ಧಾರವಾಡ: ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಯಾವುದೇ ತಾರತಮ್ಯವಾಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨ಎ ಮೀಸಲಾತಿಗಾಗಿ ಹೋರಾಟ ನಿರಂತರ ನಡೆಯುತ್ತಿದೆ. ಲಿಂಗಾಯತರ ಜೊತೆಗೆ ಇನ್ನೂ ಅನೇಕ ಸಮುದಾಯದವರು ಮೀಸಲಾತಿ ಕೇಳಿದ್ದಾರೆ. ಸರಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದನ್ನು ನೋಡಬೇಕು. ಕಾಂಗ್ರೆಸ್ ವಿಚಾರ ಬಿಟ್ಟು ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಕಾರಜೋಳ ಹೇಳಬೇಕು ಎಂದು ಪ್ರಶ್ನಿಸಿದರು.
ವೀರಶೈವ ಲಿಂಗಾಯತರನ್ನು ಕೇಂದ್ರದಲ್ಲಿ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು, ಇನ್ನೊಂದು ಇಲ್ಲಿ ನಿಗಮ ಮಾಡಿದ್ದು, ಅದಕ್ಕೆ ಹೆಚ್ಚಿನ ಹಣ ನೀಡಬೇಕು ಎಂಬ ಬೇಡಿಕೆ ಇದೆ. ಅದನ್ನು ಸರಕಾರಕ್ಕೆ ಕೇಳುತ್ತಿದ್ದೇವೆ. ಇದರಲ್ಲಿ ತಪ್ಪೇನು ಇಲ್ಲ. ಎಲ್ಲ ಸಮುದಾಯಕ್ಕೆ ಸ್ವಾಭಿಮಾನ ಇಂದು ಬಂದಿದೆ. ಜೊತೆಗೆ ಮುಖ್ಯಮಂತ್ರಿ, ಸಚಿವರು ಆಗಬೇಕು ಎಂದು ಎಲ್ಲರಿಗೂ ಆಶಯವಿರುತ್ತದೆ. ಆದರೆ, ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದರು.