Home News ದಾಂಡೇಲಿ: ಕಾಡಿನಲ್ಲಿ ರಾಯಭಾಗ ವಕೀಲನ ಸುಪಾರಿ ಕೊಲೆ – ಆರೋಪಿಗಳು ನ್ಯಾಯಾಂಗ ವಶಕ್ಕೆ

ದಾಂಡೇಲಿ: ಕಾಡಿನಲ್ಲಿ ರಾಯಭಾಗ ವಕೀಲನ ಸುಪಾರಿ ಕೊಲೆ – ಆರೋಪಿಗಳು ನ್ಯಾಯಾಂಗ ವಶಕ್ಕೆ

ದಾಂಡೇಲಿ: ದಾಂಡೇಲಿ ಸಮೀಪದ ಗಣೇಶಗುಡಿ ಕಾಡಿನಲ್ಲಿ ವಕೀಲನೊರ್ವನನ್ನು ರಾಯಭಾಗದಿಂದ ಅಪಹರಿಸಿ ತಂದು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಮೃತ ದೇಹವನ್ನು ಪೆಟ್ರೋಲ್ ಹಾಕಿ ಸುಟ್ಟು ರಾಮನಗರ ಅರಣ್ಯ ಪ್ರದೇಶದಲ್ಲಿ ಎಸೆದು ಹೋದ ಘಟನೆ ಕಳೆದ ಎರಡೂವರೆ ತಿಂಗಳ ಹಿಂದೆ ನಡೆದಿತ್ತೆನ್ನಲಾಗಿದೆ.

ಮೃತ ವ್ಯಕ್ತಿ ಬೆಳಗಾವ ಜಿಲ್ಲೆಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ವಕೀಲ ಸಂತೋಷ ಅಶೋಕ ಪಾಟೀಲ ಎನ್ನುವ ವ್ಯಕ್ತಿಯಾಗಿದ್ದಾರೆ. ಮೃತ ವ್ಯಕ್ತಿ ಹಾಗೂ ರಾಯಭಾಗದ ಹಿರಿಯ ವಕೀಲ ಶಿವಗೌಡ ಬಸಗೌಡ ಪಾಟೀಲ ಕುಟುಂಭದ ನಡುವೆ ರಾಯಬಾಗ ಪಟ್ಟಣದಲ್ಲಿರುವ ಆಸ್ತಿಗಾಗಿ ಜಗಳವಿತ್ತೆನ್ನಲಾಗಿದೆ. ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದ ವಕೀಲ ಸಂತೋಷ ಅಶೋಕ ಪಾಟೀಲರನ್ನು ಕೊಲೆ ಮಾಡುವ ಉದ್ದೇಶದಿಂದ ಕುಪಿತಗೊಂಡಿದ್ದ ಶಿವಗೌಡ ಹಾಗೂ ಸಂಗಡಿಗರು ಸೇರಿ ವಕೀಲ ಸಂತೋಷ ಅವರನ್ನು ಅಪಹರಿಸಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಗಣೇಶ ಗುಡಿ ಕಾಡಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪೆಟ್ರೊಲ್ ಹಾಕಿ ಸುಟ್ಟು ಮೃತ ದೇಹವನ್ನು ಗುರುತು ಸಿಗದಂತೆ ಅಲ್ಲಿಂದ ರಾಮನಗರ ಕಾಡಿನಲ್ಲಿ ಎಸೆದು ಹೋಗಿದ್ದಾರೆನ್ನಲಾಗಿದೆ.

ಅಪಹರಣ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ರಾಯಭಾಗ ಪೋಲಿಸರಿಗೆ ಸಿಕ್ಕ ಸುಳುವಿನ ಮೇರೆಗೆ ರಾಮನಗರ ಕಾಡಿನಲ್ಲಿ ಹುಡುಕಾಡಿದಾಗ ಮೃತದೇಹದ ಸುಟ್ಟ ಶರ್ಟು, ಚಪ್ಪಲಿ, ಕೆಲವು ಮೂಳೆಗಳು ಸಿಕ್ಕಿದ್ದವು. ಅವುಗಳನ್ನು ರಾಯಭಾಗ ಪೋಲಿಸರು ಮಹಜರು ಮಾಡಿ ಕಾನೂನು ಪ್ರಕಾರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು. ಅಲ್ಲಿಂದ ಬಂದ ತ್ವರಿತ ವರದಿಯಲ್ಲಿ ಡಿ.ಎನ್.ಎ ಪರೀಕ್ಷೆಯಲ್ಲಿ ಇದು ವಕೀಲ ಸಂತೋಷ ಪಾಟೀಲದ್ದೇ ಎಂದು ದ್ರಢಪಟ್ಟಿದೆ. ಈ ಹಿನ್ನಲೆಯಲ್ಲಿ ಕೊಲೆಗೆ ಸಂಚು ಹೂಡಿ, ಕೊಲೆಗೆ 14 ಲಕ್ಷ ರೂಪಾಯಿ ಸುಪಾರಿ ನೀಡಿದ ಆರೋಪಿತರಾದ ರಾಯಭಾಗದ ಹಿರಿಯ ವಕೀಲರಾದ ಶಿವ ಗೌಡ ಬಸಗೌಡ ಪಾಟೀಲ,ಬಸ್ತವಾಡ ಗ್ರಾಮದ ವಕೀಲ ಭರತ ಕೋಳಿ,ಬಿರನಾಳ ಗ್ರಾಮದ ವಕೀಲ ಕಿರಣ ಕೆಂಪವಾಡೆ, ಬೆಳಗಾವಿ ತಾಲೂಕಿನ ಚಂದೂರು ಗ್ರಾಮದ ಸುರೇಶ ಭೀಮಪ್ಪ ನಂದಿ, ಗೋಕಾಕ ತಾಲೂಕಿನ ಗುಜನಾಳ ಗ್ರಾಮದ ಉದಯ ಭೀಮಪ್ಪಾ ಮುಶೆನ್ನವರ, ಬೈಲಹೊಂಗಲ ತಾಲೂಕಿನ ವನ್ನೂರು ಗ್ರಾಮದ ಸಂಜಯ ಕುಮಾರ ಯಲ್ಲಪ್ಪ ಹಳಬನ್ನವರ, ಗಜಮನಾಳ ಗ್ರಾಮದ ರಾಮು ಭೀಮಪ್ಪ ದಂಡಾಪೂರೆ, ಬೆಳಗಾವಿ ತಾಲೂಕಿನ ಹೊನ್ನಿ ಹಾಳ ಗ್ರಾಮದ ಮಂಜುನಾಥ ತಳವಾರ ಎಂಬುವರನ್ನು ರಾಯಭಾಗ ಪೋಲಿಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.ಆರೋಪಿ ವಕೀಲ ಮಹಾವೀರ ಸುಭಾಷ ಹಂಜೆ ಮತ್ತು ನಾಗರಾಜ ಪರಸಪ್ಪ ನಾಯಕ ತಲೆಮರೆಸಿಕೊಂಡಿದ್ದು ಅವರಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆನ್ನಲಾಗಿದೆ.

Exit mobile version