Home ಅಂಕಣ ಆಚಾರವಿಲ್ಲದ ನಾಲಗೆಗೆ ಆಡಿ ತಣಿಯುವ ವಿಕೃತಿ

ಆಚಾರವಿಲ್ಲದ ನಾಲಗೆಗೆ ಆಡಿ ತಣಿಯುವ ವಿಕೃತಿ

0

ವಿಜ್ಞಾನಿ ಮತ್ತು ವಿಜ್ಞಾನವನ್ನೇ ರೈ ಗೇಲಿ ಮಾಡಿದಂತಿದೆ. ಕೆ.ಶಿವನ್ ಚಂದ್ರಯಾನ- ೨ ಕೊನೇ ಕ್ಷಣದಲ್ಲಿ ವಿಫಲವಾದಾಗ, ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ಗಳಗಳ ಅತ್ತಿದ್ದರು. ಮೋದಿ ಕೆ.ಶಿವನ್ ಅವರನ್ನು ಸಂತೈಸಿ, ಇನ್ನಷ್ಟು ಉತ್ಸಾಹ ತುಂಬಿ, ಚಂದ್ರಯಾನ- ೩ಕ್ಕೆ ಅಣಿಯಾಗುವಂತೆ ಹುರಿದುಂಬಿಸಿದ್ದರು. ಬಹುಶಃ ಈ ಕಾರಣಕ್ಕೇನೋ ರೈ ಶಿವನ್ ವ್ಯಂಗ್ಯಚಿತ್ರ ರಚಿಸಿ ಯಾನವನ್ನೇ ಟೀಕಿಸಿರಬಹುದೇ? ಇದು ಎಲ್ಲರಿಗೂ ಮೂಡುತ್ತಿರುವ ಅನಿಸಿಕೆ.

ಇವರದ್ದು ಸುಮ್ಮನೆ ತೆವಲಿಗಾಡಿದ, ಹದ್ದುಮೀರಿದ ವರ್ತನೆ ಎಂದು ಸುಮ್ಮನಾಗಬಹುದಾ? ಅಥವಾ ಅವರೇ ಹೇಳಿಕೊಂಡಂತೆ ಜೋಕ್, ಇಲ್ಲವೇ ಲಘುಮಾತಾ? ಖಂಡಿತ ಇವ್ಯಾವುವೂ ಅಲ್ಲ. ಉದ್ದೇಶಪೂರ್ವಕ, ಏನಕೇನ ಪ್ರಕಾರೇಣ ಚಾಲ್ತಿಯಲ್ಲಿರಬೇಕೆನ್ನುವವರ ಉದ್ದೇಶವಿದು.
ನಿಜ. ಪ್ರಕಾಶ ರೈ ಅಂಥವರಿಗೆ ಇಂತಹ ಗೀಳು ರೋಗ ಇದ್ದಂತಿದೆ. ಚಂದ್ರಯಾನ- ೩ನ್ನು ಇಡೀ ದೇಶ ಅಷ್ಟೇ ಅಲ್ಲ, ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತ, ವಿಜ್ಞಾನಿಗಳ ಶ್ರಮದ ಯಶಸ್ಸು ದೇಶಕ್ಕೆ ದೊರೆಯಲಿ ಎಂದು ಹಾರೈಸುತ್ತಿರುವಾಗ, ಇದೀಗ ತಾನೇ ಚಂದ್ರನಿಂದ ಬಂದ ಸುದ್ದಿ ಎಂದು ಎರಡು ಕಪ್‌ಗಳ ನಡುವೆ ಚಾಯ್ ಇರಿಸಿದ ವ್ಯಂಗ್ಯದ ಕಾರ್ಟೂನ್ ಅನ್ನು ಪ್ರಕಾಶ ರೈ ಸಾರ್ವಜನಿಕವಾಗಿ ತೇಲಿಬಿಟ್ಟು ವ್ಯಂಗ್ಯವಾಡಿದರೆ ಇದನ್ನು ಕೇವಲ ಹದ್ದುಮೀರಿದ ವರ್ತನೆ ಎನ್ನಲಾಗದು.
ಅಪಹಾಸ್ಯದ, ವಿಕೃತ ಮನಸ್ಸಿನ ದ್ಯೋತಕ ಎಂದು ಟೀಕಿಸುವವರನ್ನು ತಪ್ಪು ಎನ್ನಲಾಗದು. ಪ್ರಕಾಶ ರೈ ಅವರನ್ನು ಬಹುವಾಗಿ ಸಮರ್ಥಿಸಿಕೊಳ್ಳುವ ಎಡಪಂಥೀಯ, ಪ್ರಗತಿಪರ ಮಂದಿ ಕೂಡ ಈ ವಿಕೃತಿಯನ್ನು ಟೀಕಿಸಿದವರೇ. ತನ್ನನ್ನು ಯಾರೂ ಪ್ರಶ್ನಿಸಲಾರರು ಎಂದೋ, ಅಥವಾ ತನ್ನಷ್ಟು ಬುದ್ಧಿವಂತ, ಚಾಣಾಕ್ಷ, ಪ್ರಗತಿಪರ ಇನ್ಯಾರೂ ಇಲ್ಲವೆಂದೋ, ಅಥವಾ ತಾನಾಡಿದ್ದೇ ಸರಿ, ಅದನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಹಮ್ಮು- ಘಮಂಡಿಯ ಧೋರಣೆ ಇದೇನೋ? ಪ್ರಕಾಶ ರೈ ವ್ಯಂಗ್ಯಚಿತ್ರದಲ್ಲಿ ತೋರಿಸಿದ್ದು ಖ್ಯಾತ ವಿಜ್ಞಾನಿ, ದೇಶವೇ ಮೆಚ್ಚಿಕೊಂಡ ಇಸ್ರೋದ ಹಿಂದಿನ ಅಧ್ಯಕ್ಷ ಕೆ.ಶಿವನ್ ಅವರಂತೆ ಕಾಣುವಂತಿರುವುದು ಇಷ್ಟೆಲ್ಲ ಟೀಕೆ, ವಿರೋಧಕ್ಕೆ ಕಾರಣ.
ವಿಜ್ಞಾನಿ ಮತ್ತು ವಿಜ್ಞಾನವನ್ನೇ ರೈ ಗೇಲಿ ಮಾಡಿದಂತಿದೆ. ಕೆ.ಶಿವನ್ ಚಂದ್ರಯಾನ- ೨ ಕೊನೇ ಕ್ಷಣದಲ್ಲಿ ವಿಫಲವಾದಾಗ, ಪ್ರಧಾನಿ ಮೋದಿಯನ್ನು ತಬ್ಬಿಕೊಂಡು ಗಳಗಳ ಅತ್ತಿದ್ದರು. ಮೋದಿ ಕೆ.ಶಿವನ್ ಅವರನ್ನು ಸಂತೈಸಿ, ಇನ್ನಷ್ಟು ಉತ್ಸಾಹ ತುಂಬಿ, ಚಂದ್ರಯಾನ- ೩ಕ್ಕೆ ಅಣಿಯಾಗುವಂತೆ ಹುರಿದುಂಬಿಸಿದ್ದರು. ಬಹುಶಃ ಈ ಕಾರಣಕ್ಕೇನೋ ರೈ ಶಿವನ್ ವ್ಯಂಗ್ಯಚಿತ್ರ ರಚಿಸಿ ಯಾನವನ್ನೇ ಟೀಕಿಸಿರಬಹುದೇ? ಇದು ಎಲ್ಲರಿಗೂ ಮೂಡುತ್ತಿರುವ ಅನಿಸಿಕೆ.
ಯಾವಾಗ ಯಾರೂ ತನ್ನನ್ನು ಸಮರ್ಥಿಸುವುದಿಲ್ಲ ಎಂದು ತಿಳಿಯಿತೋ, ಯಾರೂ ತನ್ನ ಈ ಕೃತ್ಯವನ್ನು ಹೊಗಳಲಾರರು ಎಂದು ಅರ್ಥವಾಯಿತೋ, ಹೊಗಳುವವರೂ ವಿರೋಧಿಸುತ್ತಾರೆ ಎಂದು ಅರಿವಾಯಿತೋ, ಆಗ ಎಚ್ಚೆತ್ತ ರೈ, ನಾನು ೧೯೬೯ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗ ನೀಲ್ ಆರ್ಮ್ಸ್ಟಾಂಗ್ ಉಲ್ಲೇಖಿಸಿ ಹಳೆಯ ಜೋಕ್ ಟ್ವೀಟ್ ಮಾಡಿದ್ದೆ; ಆರ್ಮ್ಸ್ಟಾಗ್ ಸಾಧನೆಯನ್ನು ಕೇರಳದ ಚಾಯ್‌ವಾಲಾವೊಬ್ಬ ಸಂಭ್ರಮಿಸುವ ಚಿತ್ರವಿದು. ಇದರಲ್ಲಿ ಟ್ರೋಲರ್‌ಗಳು ಯಾವ ಚಾಯ್‌ವಾಲಾರನ್ನು ಕಂಡರು ಎಂದು ಮರುಸಮರ್ಥನೆ ಮಾಡಿಕೊಂಡಿದ್ದಾರೆ. ಹಾಗೂ, ಇದೊಂದು ಹಳೆಯ ಜೋಕ್, ಇದು ಅರ್ಥವಾಗದಿದ್ದರೆ ನನಗೇನು ಎಂಬ ಕೊಬ್ಬಿನ ಧಾಟಿ ಬೇರೆ.
ಇದು ಧಾಷ್ಟದ ಪರಮಾವಧಿ ಎನ್ನಿಸುವುದು ಸಹಜ. ವೈಜ್ಞಾನಿಕ ಮನೋಭಾವ, ವೈಚಾರಿಕತೆ ತನ್ನ ಸ್ವತ್ತು ಎನ್ನುವ ಪ್ರಕಾಶ ರೈ ಸುಖಾಸುಮ್ಮನೇ ಇಂತಹುದನ್ನು ಮಾಡಲು ಸಾಧ್ಯವಿಲ್ಲ. ಇದಕ್ಕೆ ಅವರ ಮನಸ್ಸಿನಲ್ಲಿ ಯಾವ ಗೀಳು ಸಂತೋಷ ಹುಟ್ಟಿಸಿತೋ… ತಿಳಿಯಬೇಕಿದೆ.
ಪ್ರಕಾಶ ರೈ ಹಿಂದೆ ಕಾವೇರಿ ವಿವಾದ ಆರಂಭವಾದಾಗ ಮಾಧ್ಯಮ ಪ್ರತಿನಿಧಿಗಳು ವಿವಾದದ ಬಗ್ಗೆ ನಿಮ್ಮ ನಿಲುವು ಏನೆಂದು ಈ ಬಹುಭಾಷಾ ಖಳನಾಯಕ ಎಂಬ ಖ್ಯಾತಿವೆತ್ತ ನಟನನ್ನು ಕೇಳಿದರೆ ಕೆಂಡಾಮಂಡಲವಾಗಿದ್ದರು. ಯಾರಿಗೆ ಯಾವ ಸಮಯದಲ್ಲಿ ಏನು ಕೇಳಬೇಕೆಂಬ ಸಾಮಾನ್ಯ ಪ್ರಜ್ಞೆಯೇ ನಿಮಗಿಲ್ಲವೇ ಎಂದು ಮೈಕ್ ಕಿತ್ತೆಸೆದು ಹೋಗಿದ್ದರು. ಪತ್ರಕರ್ತರ ವಿರುದ್ಧ ಸಿಡಿದಿದ್ದರು. ಈ ವೇಳೆ ಅವರ ಪ್ರಬುದ್ಧತೆ' ಮತ್ತುಸಹಿಷ್ಣುತೆ’ ಪ್ರದರ್ಶನವಾಗಿತ್ತು.
ಅದೇ ಪ್ರಕಾಶ ರೈಗೆ ಚಂದ್ರಯಾನದ ಕುರಿತ ತನ್ನ ಕಾರ್ಟೂನ್ ಹಾಗೂ ಇದಕ್ಕೆ ಅಡಿಬರಹದ ಸಮಯ ಸಂದರ್ಭದ ಅರಿವಾಗಲಿಲ್ಲವೇ? ಸಂಪ್ರದಾಯ, ಪೂಜೆ, ಹಿಂದೂಗಳ ಹಬ್ಬ ಹರಿದಿನ ಟೀಕಿಸುವವರ, ಪ್ರಖರ ವಿಚಾರವಾದಿ'ಗಳ ಆಜೂಬಾಜು ತಾವು ಎನ್ನಿಸಿಕೊಳ್ಳುವ ರೈ ಸರಿಯಾದ ವಿಷಯಗಳಲ್ಲೂ ಕೂಡ ಕುಹಕ ಮನೋಭಾವ ಬಿಟ್ಟಿಲ್ಲ ಎನ್ನುವ ಟೀಕೆಗೆ ಅವರೇ ಉತ್ತರ ಕಂಡುಕೊಳ್ಳಬೇಕೇನೋ... ಹಾಗಂತ ರೈ ಚಂದ್ರಯಾನ ಕುರಿತು ಏನೇ ಮಾತನಾಡಲಿ, ಸಮರ್ಥನೆ ಮಾಡಿಕೊಳ್ಳಲಿ, ಟೀಕಿಸಲಿ, ಜೋಕ್ ಮಾಡಲೀ, ವ್ಯಂಗ್ಯವಾಡಲೀ, ಇವುಗಳಿಂದ ಯಾರಿಗೂ ಏನೂ ಆಗಬೇಕಾಗಿಲ್ಲ. ಅವರ ಮನೋಭೂಮಿಕೆಯ ಬಣ್ಣಗೇಡಿತನದ ಅನಾವರಣ ಮಾತ್ರ ಇದರಿಂದ ಆಗುತ್ತದಷ್ಟೇ... ಏನಕೇನ ಪ್ರಕಾರೇಣ ಚಾಲ್ತಿಯಲ್ಲಿರಬೇಕು ಎನ್ನುವ ಮಾತುಗಳನ್ನು ಮಾತ್ರ ಜನ ಆಕ್ರೋಶದಿಂದ ನೋಡುವಂತಾಗಿದೆ. ಹಿರಿಯ ನಟ ಉಪೇಂದ್ರ ಇತ್ತೀಚೆಗೆ ಆಡಿದ ಮಾತು, ಸಮಾಜದ ನಡುವೆ ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದಕ್ಕಾಗಿ ಅವರ ವಿರುದ್ಧ ಪ್ರಕರಣಗಳೂ ದಾಖಲಾದವು. ಕೀಳು ಮನಸ್ಸಿನ ಹಾಗೂ ಅಸ್ಪೃಶ್ಯತೆ ಮತ್ತು ಜಾತಿಯ ನಿಂದನೆಯ ಆರೋಪ ಬಂತು. ಯಾವಾಗ, ಅಟ್ರಾಸಿಟಿ ಕೇಸ್ ದಾಖಲಾಯಿತೋ ಆಗ ಉಪೇಂದ್ರ ಗಲಿಬಿಲಿಗೆ ಬಿದ್ದರು. ಹಳೆಯ ಗಾದೆ ಮಾತು ಹೇಳಿದ್ದೇನೆ, ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಹೇಳಿ ಸಮರ್ಥನೆಗೆ ಇಳಿದು, ಇವರಿಗೆ ನನ್ನ ನೋವು ಅರ್ಥವಾಗಬೇಕಾಗಿತ್ತು; ನನ್ನಷ್ಟು ಕಷ್ಟ ಅನುಭವಿಸಿದ್ದು ಇವರಾ ಎಂದೆಲ್ಲ ಮಾತನಾಡಿ ಕೋರಿದ ಕ್ಷಮೆಯಲ್ಲಿ ಆಡಿದ ಮಾತಿಗಿಂತ ಹೆಚ್ಚು ಬಿರುಸು ಮತ್ತು ಘಮಂಡಿ ಇತ್ತು. ಈಗೇನೋ ನ್ಯಾಯಾಲಯದಿಂದ ತಡೆಯಾಜ್ಞೆ ಬಂದು ಉಪೇಂದ್ರ ಬಂಧನದಿಂದ ನಿರಾಳರಾಗಿದ್ದಾರೆ. ಆದರೆ ಒಂದು ಸಮಾಜದ ಮನಸ್ಸಿಗೆ ನೋವು ಮಾಡಿ, ಜನಾಂಗ ನಿಂದಿಸಿರುವ ಆರೋಪವನ್ನು ಅವರು ತಾವೇ ಎಳೆದುಕೊಂಡಂತಿದೆ. ಈ ಮಾತು ಆಡದಿದ್ದರೆ ಯಾವ ನಷ್ಟವೂ ಇರಲಿಲ್ಲ. ಮಾತಾಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತೆಂಬುದು ಇವರಿಗೆ ಗೊತ್ತಿಲ್ಲವೇ? ಕಲಾವಿದರಿಗೆ ಈ ಗೀಳು ಇತ್ತೀಚೆಗೆ ಹೆಚ್ಚುತ್ತಲೇ ಇದೆ. ಚೇತನ (ಅಹಿಂಸಾ) ಎನ್ನುವ ನಟನ ಅವಾಂತರ, ವಿವಾದವನ್ನು ಈ ನಾಡಿನ ಜನ ಮರೆತಿಲ್ಲ. ತಮಾಷೆ ಎಂದರೆ ಉಪೇಂದ್ರ ವಿರುದ್ಧ ಪ್ರತಿಭಟನೆಗೆ ಕಾರಣವಾದ ಮಾತನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೂಡ ಆಡಿದ್ದರು. ಆದರೆ ಅವರ ವಿರುದ್ಧ ಎತ್ತಿದ ಧ್ವನಿ ಕೆಲವೇ ಕ್ಷಣಗಳಲ್ಲಿ ಉಡುಗಿ ಹೋಯಿತು. ಉಪೇಂದ್ರರನ್ನು ಟೀಕಿಸುವವರು ಮಲ್ಲಿಕಾರ್ಜುನರ ಬಗ್ಗೆ ಮೃದು ಧೋರಣೆ ತಳೆದದ್ದುಅರ್ಥ’ವಂತಿಕೆಯೋ ಅಥವಾ ಪ್ರಭಾವವೋ ಅನಿಸುತ್ತದಲ್ಲವೇ?
ಆದರೆ ಅಗತ್ಯವೋ, ಅನಗತ್ಯವೋ ಒಂದಿಷ್ಟು ಆಹಾರವನ್ನು ಇವರೇ ಒದಗಿಸಿದ್ದಾರೆ. ಹಾಗಂತ ಏನೇ ಆಡಿದರೂ ವಿರೋಧಿಸುವವರು ಇರುತ್ತಾರೆನ್ನುವುದೂ ಅಷ್ಟೇ ಸತ್ಯ. ರಜನಿಕಾಂತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಾಲಿಗೆ ಎರಗಿದ್ದೂ ತಪ್ಪು, ಇನ್ಯಾರೋ ದೇವಸ್ಥಾನಕ್ಕೆ ಹೋಗಿದ್ದೂ ಟೀಕಾಸ್ಪದ ಎನ್ನುವವರೂ ಇದ್ದಾರೆ… ಇದಕ್ಕೆಲ್ಲ ಏನನ್ನಬೇಕು !?
ಆಯುಧಪೂಜೆ, ಗಣೇಶೋತ್ಸವ, ಗೋಪೂಜೆ, ಲಕ್ಷ್ಮಿಪೂಜೆ, ದೀಪಾವಳಿ ಇವೆಲ್ಲವನ್ನೂ ಒಂದಿಲ್ಲೊಂದು ಕಾರಣದಿಂದ ಟೀಕಿಸಿ ಪ್ರಸಿದ್ಧಿಗೆ ಬಂದುಬಿಟ್ಟಿದ್ದೇವೆ ಎನ್ನುವವರು; ಅನಗತ್ಯವಾಗಿ ಕೆಲ ಗಣ್ಯರು, ಧಾರ್ಮಿಕ ಮುಖಂಡರನ್ನು ಅವಹೇಳನ ಮಾಡಿದರೆ, ಅವರ ಹೇಳಿಕೆಗಳನ್ನು
ಟೀಕಿಸಿದರೆ ತಾವು ದೊಡ್ಡವರಾಗುತ್ತೇವೆ ಎನ್ನುವ ಗೀಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಮಾಜಿ ಸಚಿವ ಆರಗ ಜ್ಞಾನೇಂದ್ರ ಆಡಿದ ಮಾತನ್ನೇ ತೆಗೆದುಕೊಳ್ಳಿ. ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆ ಆರಗ ಆಡಿದ್ದು ಅಸಹ್ಯ ಹುಟ್ಟಿಸುವಂತಿದೆ. ತನಗೆ ಹಾಗೆ ಹೇಳುವ ಮನಸ್ಸಿನಲ್ಲಿರಲಿಲ್ಲ. ಬಾಯಿ ತಪ್ಪಿ ಆಡಿದ ಮಾತು ಎಂದರೂ ಯಾರೂ ಸಮರ್ಥನೆ ಮಾಡಿಕೊಳ್ಳಲಾಗದ, ಎಲ್ಲರನ್ನೂ ನೋಯಿಸಿದ ಮಾತಿದು. ಆಡಿದ ಮೇಲೆ ಮುಗಿಯಿತಲ್ಲ?
ರಾಜಕಾರಣಿಗಳನ್ನು ಬಿಡಿ. ಎಲ್ಲಿ, ಏನು, ಯಾವತ್ತು, ಯಾರಿಗೆ ಏನೆಲ್ಲ ಹೇಳಬೇಕು ಎನ್ನುವ ಬಗ್ಗೆ ನಾಲಿಗೆ, ಬುದ್ಧಿ, ಬಾಯಿಗೆ ಒಂದು ಸಮತೋಲನ ಇಂಥವರಿಗೆ ಇಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ.
ಇನ್ನು, ದೇವರನ್ನು ಎಸೆಯಿರಿ. ವಿಗ್ರಹದ ಮೇಲೆ ಮೂತ್ರ ಮಾಡಿ ಎನ್ನುವುದೆಲ್ಲ ಎಷ್ಟು ಅಸಹ್ಯ ಹುಟ್ಟಿಸುತ್ತಿವೆ ಎಂದರೆ, ಎಂತೆಂತಹ ದೊಡ್ಡ ವ್ಯಕ್ತಿಗಳನ್ನೂ ಕೂಡ ಇನ್ನಷ್ಟು ಕೆಳಕ್ಕೆ ಇಳಿಸಿಬಿಟ್ಟಿವೆ.
ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವಂತೆಯೇ, ಎಲ್ಲಿಯವರೆಗೆ ಈ ಸಮಾಜದಲ್ಲಿ ಆಲಿಸುವವರು ಇರುತ್ತಾರೋ ಅಲ್ಲಿಯವರೆಗೆ ಹೀಗೆ ಆಡುವವರೂ ಇರುತ್ತಾರೆ. ಅಗ್ಗದ ವಿಕೃತಗಳಿಗೆ ಎಲ್ಲಿಯವರೆಗೆ ಸಮಾಜದಲ್ಲಿ ಜನ ಗೌರವ ಕೊಡುತ್ತಾರೋ ಅಲ್ಲಿಯವರೆಗೂ ಇಂಥವರು ಇರುತ್ತಾರೆ. ತಿರಸ್ಕಾರವೇ ಮದ್ದು ಎಂದರೂ, ತಿರಸ್ಕೃತಗೊಂಡವರು ಸುಮ್ಮನಿರಬೇಕಲ್ಲ? ಅಲ್ಲವೇ?

Exit mobile version