Home ಕೃಷಿ/ವಾಣಿಜ್ಯ ರೈತರಿಗೆ ಮಾಹಿತಿ: ತೋಟಗಾರಿಕೆ ಇಲಾಖೆಯಿಂದ ಸಿಗುವ ವಿವಿಧ ಸಬ್ಸಿಡಿಗಳು

ರೈತರಿಗೆ ಮಾಹಿತಿ: ತೋಟಗಾರಿಕೆ ಇಲಾಖೆಯಿಂದ ಸಿಗುವ ವಿವಿಧ ಸಬ್ಸಿಡಿಗಳು

0

ತೋಟಗಾರಿಕಾ ಇಲಾಖೆ ಅಡಿಕೆ, ತೆಂಗು, ಶುಂಠಿ, ಬಾಳೆ, ತಾಳೆ, ಕಾಳು ಮೆಣಸು, ಸಪೋಟ, ತರಕಾರಿ, ಹಾಗೂ ಇತರೆ ತೋಟದ ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರಮುಖವಾದ ಮಾಹಿತಿ ನೀಡಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬೆಳೆಗಳಿಗೆ ಹನಿ ನೀರಾವರಿ/ ಸೂಕ್ಷ್ಮ ನೀರಾವರಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡಲಾಗುತ್ತದೆ.

ಈ ಯೋಜನೆ ಕುರಿತು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶೇಕ ಯೋಗೇಶ್ ಮಾಹಿತಿ ನೀಡಿದ್ದಾರೆ. ವಿವಿಧ ತೋಟಗಾರಿಕಾ ಬೆಳೆಗಳು ಹಾಗೂ ಇತರೆ ತೋಟದ ಬೆಳೆಗಳಿಗೆ ಹನಿ ನೀರಾವರಿ/ ಸೂಕ್ಷ್ಮ ನೀರಾವರಿ ಪದ್ದತಿಗಳಿಗೆ ಸಹಾಯಧನ ಸಿಗಲಿದೆ. ಪರಿಶಿಷ್ಟ ಜಾತಿ/ ಪಂಗಡ/ ಇತರೆ ವರ್ಗದ ರೈತರಿಗೆ ಶೇ 90ರಷ್ಟು ಸಬ್ಸಿಡಿ ಸಿಗಲಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಬಾಳೆ, ತರಕಾರಿ, ಬೆಣ್ಣೆ ಹಣ್ಣುಗಳ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಶೇ 40ರ ಸಹಾಯಧನ. ಪುನಶ್ಚೇತನ ಕಾರ್ಯಕ್ರಮದಡಿ ರೈತರಿಗೆ ಉಚಿತವಾಗಿ ಕಿತ್ತಳೆ, ಕಾಳು ಮೆಣಸು ಸಸಿಗಳು ಹಾಗೂ ಜೈವಿಕ ಗೊಬ್ಬರ ವಿತರಣೆ ಮಾಡಲಾಗುತ್ತದೆ.

ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಹಸಿರು ಮನೆ/ ಪಾಲಿ ಮನೆ/ ನೆರಳು ಪರದೆ ಮನೆಗಳ ನಿರ್ಮಾಣಕ್ಕೆ ಹಾಗೂ ಪ್ಲಾಸ್ಟಿಕ್ ಹೊದಿಕೆಗೆ ಶೇ 50ರ ಸಹಾಯಧನ. ಹಾಗೆಯೇ ನೀರು ಸಂಗ್ರಹಣಾ ಘಟಕಗಳಿಗೆ ಶೇ 50ರ ಸಹಾಯಧನ ನೀಡಲಾಗುತ್ತದೆ.

ಘಟಕ ನಿರ್ಮಾಣಕ್ಕೂ ಸಬ್ಸಿಡಿ: ಕೇವಲ ಬೆಳೆಗಳಿಗೆ ಮಾತ್ರವಲ್ಲ ಕೊಯ್ಲೋತ್ತರ ನಿರ್ವಹಣೆ ಕಾರ್ಯಕ್ರಮದಡಿ ಸಂಸ್ಕರಣಾ ಘಟಕ/ ಪ್ಯಾಕ್ ಹೌಸ್/ ಶೀತಲ ಗೃಹಗಳ ನಿರ್ಮಾಣಕ್ಕೆ ಶೇ 50ರ ಸಹಾಯಧನ, ಅಣಬೆ ಘಟಕ ನಿರ್ಮಿಸಲು ಶೇ 40ರ ಸಹಾಯಧನ ಸೌಲಭ್ಯವಿದೆ.

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತದೆ. ತಾಳೆ ಬೆಳೆ ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳಲು ಶೇ 50ರ ಸಹಾಯಧನ. ಮೊದಲನೇ, ಎರಡನೇ, ಮೂರನೇ ಮತ್ತು ನಾಲ್ಕನೇ ವರ್ಷಗಳ ನಿರ್ವಹಣೆಗೆ ಶೇ 50ರ ಸಹಾಯಧನ ನೀಡಲಾಗುತ್ತದೆ.

ಡಿಸೇಲ್ ಮೋಟಾರ್, ಕೊಳವೆ ಬಾವಿ, ತಾಳೆ ಹಣ್ಣು ಕಟಾವು ಮಾಡುವ ಯಂತ್ರ, ಅಂತರ ಬೆಳೆ, ಚಾಫ್ ಕಟ್ಟರ್ ಯಂತ್ರಕ್ಕೆ ಶೇ50ರ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಯಾಂತ್ರೀಕರಣ ಯೋಜನೆಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆಯಲ್ಲಿನ ಕೊಯ್ಲೋತ್ತರ ಚಟುವಟಿಕೆಗಳಿಗೆ ಸಬ್ಸಿಡಿ ಅಡಿ ಸೋಲಾರ್ ಪಂಪ್ ಸೆಟ್, ಕ್ಷೇತ್ರ ಮಟ್ಟದಲ್ಲಿ(ಫಾರ್ಮ್ ಗೇಟ್) ವಿಂಗಡನೆ ಪ್ಯಾಕಿಂಗ್ ಮತ್ತು ಸಂಗ್ರಹಣೆ ಘಟಕ, ನೀರು ಸಂಗ್ರಹಣ ಘಟಕಗಳಿಗೆ ಸಹಾಯಧನವಿದೆ.

ಕಳೆಕೊಚ್ಚುವ ಯಂತ್ರ, ಮರ ಕತ್ತರಿಸುವ ಯಂತ್ರ, ದೋಟಿ, ಪವರ್ ಸ್ಪ್ರೆಯರ್, ಅಲ್ಯೂಮಿನಿಯಂ ಏಣಿ, ಪವರ್ ವಿಡರ್, ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ಕಾಳು ಮೆಣಸು ಬಿಡಿಸುವ ಯಂತ್ರ, ತಳ್ಳುವ ಗಾಡಿ ಇತರೆ ಯಂತ್ರಗಳನ್ನು ಖರೀದಿಸಲು ಸಹಾಯಧನ ನೀಡಲಾಗುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version