Home ಕೃಷಿ/ವಾಣಿಜ್ಯ ವಿಜಯಪುರ: ಆಸ್ಟ್ರೇಲಿಯಾಕ್ಕೆ ʻಇಂಡಿʼಯ ರಸಭರಿತ ಲಿಂಬೆ

ವಿಜಯಪುರ: ಆಸ್ಟ್ರೇಲಿಯಾಕ್ಕೆ ʻಇಂಡಿʼಯ ರಸಭರಿತ ಲಿಂಬೆ

0

ವಾಸುದೇವ ಹೆರಕಲ್ಲ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಸಭರಿತ ಲಿಂಬೆ ಇದೀಗ ಆಸ್ಟ್ರೇಲಿಯಾ ದೇಶವನ್ನು ತಲುಪಿದೆ. ಲಿಂಬೆ ಅಭಿವೃದ್ಧಿ ಮಂಡಳಿಯ ಪ್ರಯತ್ನ ಹಾಗೂ ಬೆಂಗಳೂರಿನ ಅಪೆಡಾ ಸಂಸ್ಥೆಯ ಸಹಯೋಗದಲ್ಲಿ ಜಿಐ ಟ್ಯಾಗ್ ಪಡೆದಿರುವ ಇಂಡಿಯ ಲಿಂಬೆಯನ್ನು ಆಸ್ಟ್ರೇಲಿಯಾಗೆ ಕಳುಹಿಸಲಾಗಿದೆ.

ಅಪೆಡಾ ಸಂಸ್ಥೆ ಜಿ.ಐ. ಟ್ಯಾಗ್ ಹೊಂದಿರುವ ತೋಟಗಾರಿಕೆ ಬೆಳೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುವ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು ಅದರ ಅಂಗವಾಗಿ ಇಂಡಿಯ ಲಿಂಬೆಯ ಸ್ಯಾಂಪಲ್‌ನ್ನು ಆಸ್ಟ್ರೇಲಿಯಾದ ಪ್ರಸಿದ್ಧ ಮಾರುಕಟ್ಟೆಗೆ ತಲುಪಿಸಿದೆ. ಇಂಡಿಯ ಲಿಂಬೆಗೆ ಆಸ್ಟ್ರೇಲಿಯಾ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಆಸ್ಟ್ರೇಲಿಯಾದ ಗ್ರಾಹಕರು ಮನಸೋತರೆ ಪ್ರತಿ ವರ್ಷ ಇಲ್ಲಿಂದ ಆಸ್ಟ್ರೇಲಿಯಾ ಮಾರುಕಟ್ಟೆಗೆ ಇಂಡಿ ಲಿಂಬೆ ದಾಳಿ ಇಡಲಿದೆ.

ಜಿಯಾಗ್ರಾಫಿಕಲ್ ಟ್ಯಾಗ್‌ಲೈನ್ ದೊರೆತ ಪರಿಣಾಮವಾಗಿ ಇಂಡಿಯ ಲಿಂಬೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿದೆ. ಇದು ಆರಂಭ ಮಾತ್ರ. ಟ್ಯಾಗ್‌ಲೈನ್ ನೋಡಿ ಇನ್ನಿತರ ದೇಶಗಳು ಇಂಡಿ ಲಿಂಬೆಯನ್ನು ತರಿಸಿಕೊಳ್ಳಲು ಆಸಕ್ತಿ ತೋರಬಹುದಾಗಿದೆ. ಹಾಗಾಗಿದ್ದೇ ಆದಲ್ಲಿ ಇಂಡಿಯಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ. ಲಿಂಬೆ ಬೆಳೆದ ರೈತರ ಬದುಕು ಹಸನಾಗುತ್ತದೆ.

ಮಂಡಳಿಗೆ ಅನುದಾನದ ಕೊರತೆ: ಇಂಡಿ ಶಾಸಕ ಯಶವಂತ್ರಾಯಗೌಡರ ಸತತ ಪ್ರಯತ್ನದ ಫಲಿವಾಗಿ ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪನೆಯಾಗಿದೆ. ಅದರ ಕೇಂದ್ರ ಕಚೇರಿಯೂ ಇಂಡಿಯಲ್ಲೇ ಇದೆ. ಆದರೆ ಸರ್ಕಾರ ಅಪೇಕ್ಷಿತ ಮಟ್ಟದಲ್ಲಿ ಈ ಮಂಡಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಮಂಡಳಿಗೆ ನೀಡಿದ ಅನುದಾನ ಬರೀ 50 ಲಕ್ಷ ರೂ. ಅಷ್ಟರಲ್ಲಿಯೇ ಅಭಿವೃದ್ದಿ ಮಂಡಳಿ ರೈತರಿಗೆ ತರಬೇತಿ, ಇನ್ನಿತರ ತೋಟಗಾರಿಕೆ ಸಲಕರಣೆ ವಿತರಣೆ, ರೈತರಿಗೆ ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಕ್ರಿಯಾ ಯೋಜನೆ ತಯಾರಿಸಿ ಅದರಂತೆ ಕಾರ್ಯ ಮಾಡುತ್ತಿದೆ.

ಲಿಂಬೆ ಅಭಿವೃದ್ದಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಬರುವುದಕ್ಕೆ ಯಾವುದೇ ಅಧಿಕಾರಿ ತಯಾರಿಲ್ಲ. ಸದ್ಯಕ್ಕೆ ವಿಜಯಪುರ ಜಿಲ್ಲಾ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಚ್.ಎಸ್. ಪಾಟೀಲ ಎಂಬ ಅಧಿಕಾರಿಯನ್ನು ಲಿಂಬೆ ಅಭಿವೃದ್ದಿ ಮಂಡಳಿ ಎಂ.ಡಿ. ಹುದ್ದೆಗೆ ಇನ್‌ಚಾರ್ಜ್‌ ಮಾಡಲಾಗಿದೆ. ಪಾಟೀಲರು ತುಂಬ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಸಿಬ್ಬಂದಿಯ ಕೊರತೆ.

ಆರ್‌ಐಡಿಎಫ್ ಅನುದಾನದ ಆಶಾಕಿರಣ: ಆರ್‌ಐಡಿಎಫ್ ಟ್ರ್ಯಾಂಚ್-31 ರ ಅಡಿಯಲ್ಲಿ 2025-26 ನೇ ಸಾಲಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ ಅನುದಾನವೇ ಲಿಂಬೆ ಅಭಿವೃದ್ದಿ ಮಂಡಳಿಗೆ ದೊಡ್ಡ ಆಶಾಕಿರಣವಾಗಿದೆ. ಈ ಕುರಿತು 2/8/2025 ರಂದು ಸರ್ಕಾರದ ಅನಧಿಕೃತ ಟಿಪ್ಪಣಿಯಲ್ಲಿ ವಿಜಯಪುರ ಲಿಂಬೆ ಅಭಿವೃದ್ದಿಗಾಗಿ ಅಂದಾಜು ಮೊತ್ತವಾದ 13 ಕೋಟಿ ರೂ. ನಲ್ಲಿ ಆರ್‌ಡಿಆರ್‌ಎಫ್‌ ಸಾಲವಾಗಿ 12.35 ಕೋಟಿ ರೂ. ಬರಲಿದೆ. ಇದರಲ್ಲಿ ಎಕೆಂಡರಿ ಪ್ರೊಸೆಸಿಂಗ್ ಯುನಿಟ್, ಕೋಲ್ಡ್ ಸ್ಟೋರೇಜ್, ಮಾರ್ಕೆಟ್ ಯಾರ್ಡ್, ವೇವ್ ಬ್ರಿಡ್ಜ್, ಕ್ಯಾಲಿಟಿ ಟೆಸ್ಟಿಂಗ್ ಲ್ಯಾಬ್, ಮೂಲಭೂತ ಸೌಕರ್ಯಗಳು ಹಾಗೂ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧವಾಗಿದೆ.

ಇಂಡಿ ಲೆಮನ್ ಟೀ ಪಾಯಿಂಟ್: ಈಗಾಗಲೇ ಇಂಡಿಯ ಮಿನಿ ವಿಧಾನಸೌಧ ಬಳಿಯಲ್ಲಿ ಲೇಮನ್ ಟೀ ಪಾಯಿಂಟ್ ಸ್ಥಾಪಿಸಲಾಗಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಅದೇ ಮಾದರಿಯಲ್ಲಿ ವಿಜಯಪುರದ ಜಿಲ್ಲಾ ಪಂಚಾಯತ್ ಬಳಿ ಟೀ ಪಾಯಿಂಟ್ ಸ್ಥಾಪಿಸಲು ಚಿಂತನೆ ನಡೆದಿದೆ. ರಾಜ್ಯ ಹಾಗೂ ದೇಶದ ವಿವಿಧ ನಗರಗಳಲ್ಲಿ ಇಂಡಿ ಲೇಮನ್ ಟೀ ಪಾಯಿಂಟ್‌ಗಳನ್ನು ಸ್ಥಾಪಿಸುವುದು ಅಭಿವೃದ್ದಿ ಮಂಡಳಿಯ ಕನಸುಗಳಲ್ಲೊಂದು.

“ಅಸ್ಸಾಂ ಚಹಾ ಮಾದರಿಯಲ್ಲಿ ಇಂಡಿಯ ಲೇಮನ್ ಚಹಾ ವಿಶ್ವ ಪ್ರಸಿದ್ಧವಾಗಬೇಕು ಎಂಬುದು ನನ್ನ ಕನಸು. ಲಿಂಬೆಗೆ ಜಿಯೋಗ್ರಾಫಿಕಲ್ ಟ್ಯಾಗ್ ದೊರೆತಿರುವುದರಿಂದಾಗಿ ಇನ್ನೇನು ಕೆಲವೇ ವರ್ಷಗಳಲ್ಲಿ ಇಂಡಿಯ ಲಿಂಬೆ ವಿಶ್ವ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಲಿದೆ. ಸರ್ಕಾರ ಅದಕ್ಕೆ ಬೇಕಾದ ಎಲ್ಲ ಅನುಕೂಲತೆಗಳನ್ನು ಕಲ್ಪಿಸಲಿದೆ” ಎಂದು ಇಂಡಿ ವಿಧಾಸಭಾ ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದ್ದಾರೆ.

ಲಿಂಬೆ ಅಭಿವೃದ್ದಿ ಮಂಡಳಿಯ ಪ್ರಭಾರಿ ಅಧಿಕಾರಿ ಎಚ್.ಎಸ್. ಪಾಟೀಲ ಮಾತನಾಡಿ, “ಲಿಂಬೆ ಅಭಿವೃದ್ದಿ ಮಂಡಳಿಗೆ ಸಿಬ್ಬಂದಿ ಕೊರತೆ ಇದ್ದರೂ ರೈತರಿಗೆ ಅನುಕೂಲತೆ ಕಲ್ಪಿಸಲು ನಾವು ಹಿಂದೆ ಬಿದ್ದಿಲ್ಲ. ರೈತರಿಗೆ ತರಬೇತಿ, ಲಿಂಬೆ ಬೆಳೆಗಾರರ ಸಂಘ ಸ್ಥಾಪನೆ ಮಾಡಿದ್ದೇವೆ. ಅದರಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ರೈತರಿದ್ದಾರೆ. ಅಪೇಡಾ ಸಹಕಾರವೂ ದೊರಕಿದೆ. ಇಂಡಿಯ ಲಿಂಬೆಗೆ ಉತ್ತಮ ಮಾರುಕಟ್ಟೆ ಖಂಡಿತ ದೊರಕುತ್ತದೆ” ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version