ಬೆಂಗಳೂರು: ಕರ್ನಾಟಕದಲ್ಲಿ ಈಗ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಹು ಚರ್ಚೆಯ ವಿಚಾರ. ಈ ಕುರಿತು ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಅನ್ ಪಡೆದಿರುವ ಸಣ್ಣ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಆದ್ದರಿಂದ ಇಲಾಖೆ ಸ್ಪಷ್ಟನೆಯನ್ನು ನೀಡಿದೆ. ಯಾರಿಗೆ ಜಿಎಸ್‌ಟಿ ಅನ್ವಯ?, ಲೆಕ್ಕಾಚಾರಗಳು ಹೇಗೆ? ಎಂಬ ಮಾಹಿತಿ ಕೊಟ್ಟಿದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಆತ್ಮೀಯ ವರ್ತಕರೇ, ವಾಣಿಜ್ಯ ತೆರಿಗೆಗಳ ಇಲಾಖೆ, ಸರಕು ಮತ್ತು ಸೇವ ತೆರಿಗೆಗಳ ವಿಭಾಗದಿಂದ, ಸರಕು ಮತ್ತು ಸೇವ ತೆರಿಗೆ ನೋಂದಣಿ ಹಾಗೂ ತೆರಿಗೆ ಬಾಧ್ಯತೆಯ ಬಗ್ಗೆ ಈ ಕೆಳಕಂಡ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ತಿಳಿಸಿದೆ.
- GST ನೋಂದಣಿಯ ಬಾಧ್ಯತೆ ಕನಿಷ್ಠ ವಾರ್ಷಿಕ ವಹಿವಾಟು ಕೇವಲ ಸರಕುಗಳ ವಹಿವಾಟಿಗೆ ರೂ. 40 ಲಕ್ಷ ಮೀರಿದ್ದಲ್ಲಿ ಮಾತ್ರ. ಸೇವೆಗಳ ವಹಿವಾಟಿಗೆ ರೂ. 20ಲಕ್ಷ ಮೀರಿದ್ದಲ್ಲಿ ಮಾತ್ರ. ಒಂದು ವೇಳೆ ನಿಮ್ಮ ವಾರ್ಷಿಕ ವಹಿವಾಟು ಕೇವಲ ತೆರಿಗೆ ವಿನಾಯಿತಿಯನ್ನೊಳಗೊಂಡ ಸರಕುಗಳಾಗಿದ್ದಲ್ಲಿ(ಉದಾಹರಣೆಗಾಗಿ ಹಾಲು, ಹಣ್ಣು, ತರಕಾರಿ ಇತ್ಯಾದಿ) ಆಗಿದ್ದರೆ ನೋಂದಣಿಯ ಅವಶ್ಯಕತೆ ಇರುವುದಿಲ್ಲ.
- GST ತೆರಿಗೆ ಬಾಧ್ಯತೆ. ತೆರಿಗೆಗೆ ಒಳಪಡುವ ಸರಕುಗಳು/ ಸೇವೆಗಳು (ಉದಾ: ತುಪ್ಪ, ಐಸ್‌ಕ್ರೀಮ್, ಎಣ್ಣೆ ಇತ್ಯಾದಿ). ತೆರಿಗೆ ವಿನಾಯಿತಿ ಒಳಪಡುವ ಸರಕುಗಳು/ ಸೇವೆಗಳು (ಉದಾ: ಹಾಲು, ಹಣ್ಣು, ಮಾಂಸ, ತರಕಾರಿ, ಸಾಲದ ಹಣ ಹಾಗೂ ಶಾಲೆಗಳು ಇತ್ಯಾದಿ). ಒಂದು ವೇಳೆ ನೀವು ತೆರಿಗೆ ಬಾಧ್ಯತೆ ಹಾಗೂ ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳ ವಹಿವಾಟು ನಡಿಸಿದ್ದಲ್ಲಿ ತೆರಿಗೆಗೆ ಒಳಪಡುವ ಸರಕು ಮತ್ತು ಸೇವೆಗಳ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು.
- ರಾಜಿ ತೆರಿಗೆ (ಐಚ್ಛಿಕ). ತಮ್ಮ ವಾರ್ಷಿಕ ವಹಿವಾಟು ಈ ಹಿಂದಿನ ಹಣಕಾಸು ವರ್ಷಗಳಲ್ಲಿ ಸರಕುಗಳಿಗೆ ಸಂಬಂಧಿಸಿದಂತೆ ರೂ. 1.5 ಕೋಟಿ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ರೂ. 50 ಲಕ್ಷ ಮೀರದಿದ್ದಲ್ಲಿ ಮುಂದಿನ ವರ್ಷ ರಾಜಿ ಪದ್ಧತಿಯಲ್ಲಿ ನೋಂದಣಿ ಪಡೆಯಬಹುದಾಗಿದೆ.
ರಾಜಿ ತೆರಿಗೆ ಪದ್ಧತಿ ಅಡಿಯಲ್ಲಿ ಅನ್ವಯವಾಗುವ ತೆರಿಗೆ ದರಗಳು, ವ್ಯಾಪಾರದ ವಿಧಗಳು
- ವರ್ತಕರು/ ತಯಾರಕರು (ಸರಕು) 1% [0.5%+0.5% ]
- ಹೋಟೆಲ್‌ಗಳು (ಮದ್ಯ ಮಾರಾಟ ಮಾಡದೇ ಇದ್ದಾಗ) 5% [2.5% + 2.5%] * ಸೇವೆಗಳು 6% [3%+3%] ಲಾಭ:- ಕಡಿಮೆ ತೆರಿಗೆ ದರ ಹಾಗೂ ಸುಲಭವಾಗಿ ತ್ರೈಮಾಸಿಕ ನಮೂನೆಗಳನ್ನು ಸಲ್ಲಿಸಬಹುದಾಗಿದೆ.
ಪರಿಶೀಲನೆ ಹಾಗೂ ವೈಯಕ್ತಿಕ ವಿಚಾರಣೆ: ಪ್ರತಿ ವರ್ತಕರಿಗೂ ತಮ್ಮ ಪ್ರತ್ಯುತ್ತರ ಸಲ್ಲಿಸುವ ಹಾಗೂ ವೈಯಕ್ತಿಕವಾಗಿ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗುವುದು. ನೀವು ನಿಮ್ಮ ವಹಿವಾಟಿಗೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಾಕ್ಷಿಗಳನ್ನು ಸಲ್ಲಿಸಬಹುದಾಗಿದೆ.
ನೀವು ಸಲ್ಲಿಸಿದ ಸಾಕ್ಷಿ/ ದಾಖಲೆಗಳ ಆಧಾರದ ಮೇಲೆ ಇಲಾಖೆಯ ನಿಮ್ಮ ವಾರ್ಷಿಕ ವಹಿವಾಟನ್ನು ಪರಿಶೀಲಿಸಲಾಗುವುದು. ನೀವು ಸಲ್ಲಿಸಿದ ಸಾಕ್ಷಿ/ ದಾಖಲೆಗಳ ಸಂಪೂರ್ಣ ಪರಿಶೀಲನೆಯ ನಂತರವೇ ನಿಮಗೆ ತೆರಿಗೆ ಬಾಧ್ಯತೆ ಇದೆಯೋ ಹಾಗೂ ನೋಂದಣಿಯ ಅವಶ್ಯಕತೆ ಇದೆಯೋ ಎಂದು ನಿರ್ಧರಿಸಲಾಗುವುದು ಎಂದು ಇಲಾಖೆ ಹೇಳಿದೆ.