Home ಕೃಷಿ/ವಾಣಿಜ್ಯ GST: ದೀಪಾವಳಿ ಹೊತ್ತಿಗೆ ಕಾರು, ಎಸಿ, ದಿನಬಳಕೆ ವಸ್ತುಗಳು ಅಗ್ಗ!

GST: ದೀಪಾವಳಿ ಹೊತ್ತಿಗೆ ಕಾರು, ಎಸಿ, ದಿನಬಳಕೆ ವಸ್ತುಗಳು ಅಗ್ಗ!

0

ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಬಹುನಿರೀಕ್ಷಿತ ಜಿಎಸ್‌ಟಿ ಸುಧಾರಣಾ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಒಂದು ವೇಳೆ ಜಿಎಸ್‌ಟಿ ಮಂಡಳಿ ಸರ್ಕಾರದ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ ದೀಪಾವಳಿ ಹೊತ್ತಿಗೆ ಕಾರು, ಎಸಿ, ವಿವಿಧ ದಿನ ಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ದರ ಪರಿಷ್ಕರಣೆಯಾಗಿ ಎಲ್ಲವೂ ಅಗ್ಗವಾಗುವುದೆಂದು ನಿರೀಕ್ಷಿಸಲಾಗಿದೆ.

ಪ್ರಸಕ್ತ 2025-26ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಕೇವಲ ಶೇ. 6.4ರಷ್ಟಿರುವುದೆಂದು ಆರ್‌ಬಿಐ ಮುನ್ಸೂಚನೆ ನೀಡಿದೆ. ಕಳೆದ ವರ್ಷದಲ್ಲಿದ್ದ ಆರ್ಥಿಕ ಮಂದಗತಿ ಈ ವರ್ಷಕ್ಕೂ ಮುಂದುವರೆಯಲಿದೆ. ಈಗ ಟ್ರಂಪ್ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಕಾರಣ ದೇಶದ ರಫ್ತು ವಹಿವಾಟು ಮಂದಗತಿಯಲ್ಲಿರಲಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಕೊನೆಪಕ್ಷ ಆಂತರಿಕ ಬೇಡಿಕೆಯನ್ನಾದರೂ ಹೆಚ್ಚಿಸಿ ಆರ್ಥಿಕ ಪ್ರಗತಿಯನ್ನು ಉದ್ದೀಪಿಸುವ ಉದ್ದೇಶದಿಂದ ಜಿಎಸ್‌ಟಿ ಸುಧಾರಣೆಗೆ ಮುಂದಾಗಿದೆ.

ದರ ಪರಿಷ್ಕರಣೆ ಪ್ರಸ್ತಾವನೆಯನ್ನು ಜಿಎಸ್‌ಟಿಗೆ ಸಂಬಂಧಿಸಿದ ಮಂತ್ರಿಗಳ ಪರಿಷತ್‌ಗೆ ಕೇಂದ್ರ ಸರ್ಕಾರವು ಸಲ್ಲಿಸಿದೆ. ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಸಂಚಾಲಕತ್ವದ ಮಂತ್ರಿ ಪರಿಷತ್ ಸಭೆಯಲ್ಲಿ ಪ್ರಸ್ತಾವನೆಯ ಕುರಿತು ಚರ್ಚಿಸಿದ ನಂತರ ಅನುಮೋದನೆಗಾಗಿ ಜಿಎಸ್‌ಟಿ ಮಂಡಳಿಯ ಎದುರು ಬರಲಿದೆ. ಈಗ ಗ್ರಾಹಕ ಬಾಳಿಕೆ ವಸ್ತುಗಳು, ಸಣ್ಣ ಕಾರುಗಳಿಗೆ ಶೇ. 28ರಷ್ಟು ಜಿಎಸ್‌ಟಿ ದರವಿದೆ. ಇದನ್ನು ಈಗ ಶೇ. 18ಕ್ಕೆ ತಗ್ಗಿಸಬೇಕೆಂದು ಶಿಫಾರಸು ಮಾಡಲಾಗಿದೆ.

ಜಿಎಸ್‌ಟಿ ಮಂಡಳಿಯ ಸಭೆ ಸೆಪ್ಟೆಂಬರ್ ಮೂರನೇ ವಾರದಲ್ಲಿ ನಡೆಯಲಿದ್ದು, ಅಲ್ಲಿ ಪ್ರಸ್ತಾವಿತ ದರಗಳನ್ನು ಅಂತಿಮಗೊಳಿಸಿ ಶಿಫಾರಸು ಮಾಡಲಿದೆ. ನಂತರವಷ್ಟೇ ಹೊಸ ದರಗಳು ಜಾರಿಗೆ ಬರಲಿವೆ. ಜಿಎಸ್‌ಟಿ ಅಡಿಯಲ್ಲಿ ಮೂರು ಸ್ಲ್ಯಾಬ್‌ಗಳು ಇದ್ದರೂ ಅದನ್ನು ಶೇ. 5, ಶೇ. 18ಕ್ಕೆ ಇಳಿಸಿ ಎರಡೇ ಸ್ಲ್ಯಾಬ್‌ಗಳಿಗೆ ಸೀಮಿತಗೊಳಿಸಬೇಕೆಂಬ ಒತ್ತಾಯವಿದೆ. ಸದ್ಯಕ್ಕೆ ಬಹುತೇಕ ಸರಕುಗಳು ಮತ್ತು ಸೇವೆಗಳು ಶೇ.18ರ ಸ್ಲ್ಯಾಬ್‌ ಅಡಿ ಬರುತ್ತವೆ. ಐಷಾರಾಮಿ ಸರಕುಗಳಿಗೆ ಶೇ. 28ರಷ್ಟಿದೆ. ದೈನಂದಿನ ಬಳಕೆಯ ವಸ್ತುಗಳಿಗೆ ಶೇ. 5, ಐಷಾರಾಮಿ ಸರಕುಗಳಿಗೆ ಶೇ. 40ರಷ್ಟು ತೆರಿಗೆ ವಿಧಿಸಬೇಕೆಂಬ ಪ್ರಸ್ತಾವನೆ ಇದೆ.

ಜಿಎಸ್‌ಟಿ ದರ ಪರಿಷ್ಕರಣೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಗ್ರಾಹಕ ಬಾಳಿಕೆ ವಸ್ತುಗಳು, ಆಟೋಮೊಬೈಲ್ ಕಂಪನಿಗಳಿಗೆ ಹೊಸ ತಲೆನೋವು ಆರಂಭವಾಗಿದೆ. ಇದೀಗ ಗ್ರಾಹಕರು ಹೊಸ ದರ ಜಾರಿಗೆ ಬಂದ ನಂತರ ನೋಡಿದರಾಯಿತೆಂದು ಖರೀದಿಯನ್ನು ಮುಂದೂಡ ತೊಡಗಿದ್ದಾರೆ. ಹೀಗಾಗಿ ದೀಪಾವಳಿ ಅಥವಾ ದೀಪಾವಳಿ ನಂತರವೇ ಗ್ರಾಹಕರು ಮಳಿಗೆಗಳತ್ತ ದಾಂಗುಡಿ ಇಡುವ ಸಾಧ್ಯತೆ ನಿಚ್ಚಳವಾಗಿದೆ. ಆದ್ದರಿಂದ ಕೆಲವು ಕಂಪನಿಗಳು ಮಾರಾಟ ಹೆಚ್ಚಿಸಲು ಉತ್ಪನ್ನಗಳ ದರ ಇಳಿಕೆ, ಕಾಂಬಿ ಆಫರ್ ಮತ್ತಿತರ ತಂತ್ರಗಳಿಗೆ ಮೊರೆ ಹೋಗಿವೆ. ಇಷ್ಟಾದರೂ ಗ್ರಾಹಕರು ಹತ್ತಿರಕ್ಕೂ ಸುಳಿದಾಡುತ್ತಿಲ್ಲ. ಈಗ ಕಂಪನಿಗಳ ತಲೆಬಿಸಿ ಏನೆಂದರೆ ಹೊಸದರ ಜಾರಿಯಾಗುವವರೆಗೆ ದೇಶಾದ್ಯಂತ ಮಾರಾಟ ಮಳಿಗೆಗಳಲ್ಲಿ ಉತ್ಪನ್ನಗಳ ದಾಸ್ತಾನು ಮಾರಾಟವಾಗದೇ ಹಾಗೆಯೇ ಉಳಿಯುವ ಭೀತಿ ಎದುರಾಗಿದೆ.

ಏರ್ ಕಂಡಿಷನರ್, ಮತ್ತಿತರ ಗೃಹೋಪಯೋಗಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಈಗಿರುವ ಶೇ. 28ರಿಂದ ಶೇ. 18ಕ್ಕೆ ಇಳಿಕೆಯಾದರೆ ಅವುಗಳ ದರ ಶೇ. 6-7ರಷ್ಟು ಕಡಿತವಾಗುವ ಸಾಧ್ಯತೆ ಇದೆ. ಉದಾಹರಣೆಗೆ ಒಂದು ಎಸಿ ಯುನಿಟ್‌ಗೆ ಗ್ರಾಹಕರಿಗೆ ಸುಮಾರು 1500 ರೂ.ದಿಂದ 2500 ರೂ.ಗಳಷ್ಟು ಉಳಿತಾಯವಾಗುವ ಸಂಭವ ಇದೆ ಎಂದು ಹೇಳಲಾಗಿದೆ. ಜಿಎಸ್‌ಟಿ ಕಡಿತಗೊಳಿಸಿದರೆ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಾಗುವದಲ್ಲದೇ ಈ ವರ್ಷ ಎರಡನೇ ತ್ರೈಮಾಸಿಕ ಅವಧಿಯ ನಂತರ ಕೈಗಾರಿಕಾ ಬೆಳವಣಿಗೆ ತೀವ್ರಗತಿಯಲ್ಲಿ ಹೆಚ್ಚಾಗಲಿದೆ.

ಯಾರಿಗೆ ಲಾಭ…?: ಸಣ್ಣ ಕಾರು, ಬೈಕ್, ಟಿವಿ,ಎಸಿ, ಫ್ರಿಜ್, ವಾಷಿಂಗ್ ಮಷೀನ್‌ಗಳಿಗೆ ಶೇ. 18 ಅನ್ವಯವಾದರೆ ಇವುಗಳನ್ನು ಉತ್ಪಾದಿಸುವ ಕಂಪನಿಗಳ ಪ್ರಗತಿ ಹೆಚ್ಚಾಗಲಿದೆ. ತಂಬಾಕು, ಗುಟಖಾ, ಸಿಗರೇಟು ಸೇರಿದಂತೆ ಐಷಾರಾಮಿ ಉತ್ಪನ್ನಗಳಿಗೆ ಶೇ. 40ರಷ್ಟು ತೆರಿಗೆ ವಿಧಿಸಿದರೆ ಅವುಗಳ ಉತ್ಪಾದಕರಿಗೆ ಹಿನ್ನಡೆಯಾಗಲಿದೆ. ಕೃಷಿ ಯಂತ್ರೋಪಕರಣಗಳು ಅಗ್ಗವಾಗಿ ರೈತರಿಗೆ ಅನುಕೂಲವಾಗಲಿದೆ. ಜವಳಿ ಉತ್ಪನ್ನಗಳು ಅಗ್ಗವಾಗಿ ಬಟ್ಟೆ, ನೂಲು ಉತ್ಪಾದಕರ ಮೊಗದಲ್ಲಿ ಮಂದಹಾಸ ಮಿನುಗಲಿದೆ. ಕರಕುಶಲ ಉತ್ಪನ್ನಗಳು, ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಬೇಕಾಗುವ ಯಂತ್ರಗಳು, ರಸಗೊಬ್ಬರಗಳು, ಔಷಧಿ, ವೈದ್ಯಕೀಯ ಸಲಕರಣೆಗಳು, ಜೀವವಿಮೆ ಉತ್ಪನ್ನಗಳು ಗ್ರಾಹಕರ ಕೈಗೆಟಕುವುದಲ್ಲದೇ ಸಂಬಂಧಪಟ್ಟ ಉತ್ಪಾದಕರ ಪ್ರಗತಿಗೆ ಅನುಕೂಲವಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version